ವಿಕಾಸಕ್ಕೆ ಅಧ್ಯಾತ್ಮ ಜ್ಞಾನದ ಹಸಿವು ಅಗತ್ಯ; ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- June 29, 2025
- 242 Views
ಬೆಂಗಳೂರು: ಮಾನವನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಬದುಕಿನ ವಿಕಾಸಕ್ಕೆ ಅಧ್ಯಾತ್ಮ ಜ್ಞಾನದ ಹಸಿವು ಅಗತ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಾಗಡಿ ರಸ್ತೆ ಭಾರತನಗರದ ಬಿಇಎಲ್ ಲೇಔಟ್‌ನ ಆರ್.ವಿ. ಭದ್ರಯ್ಯ ಗ್ರಂಧಿಗೆ ಸ್ಟೋರ್ಸ್ ಮುಂಭಾಗದ ಮಾನವ ಧರ್ಮ ಮಹಾ ಮಂಟಪದಲ್ಲಿ ಸಮಸ್ತ ವೀರಶೈವ ಲಿಂಗವಂತ ಮಹಾ ಸಂಘಟನೆ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಜೀವನ ಕೇವಲ ಯಾಂತ್ರಿಕಗೊಳ್ಳುತ್ತಿದೆ. ಅಂತಹ ಮಾನವ ಕುಲಕೋಟಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪಯರ್ಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಪ್ರಾಚೀನ ಇತಿಹಾಸ ಪರಂಪರೆಯನ್ನು ಹೊಂದಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಅಜ್ಞಾನ ದೂರ ಮಾಡಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ. ಮನುಷ್ಯನ ಜೀವನದಲ್ಲಿ ಗುರಿ ಮತ್ತು ಗುರುವನ್ನು ಆಶ್ರಯಿಸಿ ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಅ.ಭಾ.ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಕೆಲವೊಂದು ಸಂದಿಗ್ಧತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗುರುಗಳ ಮಾರ್ಗದರ್ಶನ ಅವಶ್ಯಕವಾಗಿದೆ. ಸಮಾಜ ಒಗ್ಗಟ್ಟಾದರೆ ಸಂಪನ್ಮೂಲ ತನ್ನಿಂತಾನೆ ಕೂಡುತ್ತದೆ. ಸಮಾಜದಲ್ಲಿ ಹಿಂದುಳಿದವರಿಗೆ ಸಿಗಬೇಕಾದ ಸವಲತ್ತು ಸರ್ಕಾರದಿಂದ ಕೊಡಿಸಲು ಶಕ್ತಿ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಿದ್ದರಬೆಟ್ಟ, ಸಂಗೊಳ್ಳಿ, ತಾವರೆಕೆರೆ, ರಾಜಾಪುರ, ಬೆಳಗಾವಿ ಮಠದ ಶ್ರೀಗಳು,ಶಾಸಕ ಎಸ್.ಟಿ.ಸೋಮಶೇಖರ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಅ.ಭಾ.ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಸಂಘಟನೆ ಅಧ್ಯಕ್ಷರಾದ ಆರ್.ಬಿ. ಬಸವರಾಜ್, ಮುಖಂಡರಾದ ನಂಜುಂಡೇಶ್, ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.
ಪ್ರಾತ: ಕಾಲದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ನಡೆಸಿದ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅಶೀರ್ವಾದ ಪಡೆದರು. ಶ್ರೀ ರಂಭಾಪುರಿ ಜಗದ್ಗುರುಗಳನ್ನು ಸಾರೋಟ ಉತ್ಸವದ ಮೂಲಕ ಬರಮಾಡಿಕೊಳ್ಳಲಾಯಿತು.
Related Articles
Thank you for your comment. It is awaiting moderation.


Comments (0)