ಭೌತಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು: ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 28, 2025
- 32 Views

ಬಸವಕಲ್ಯಾಣ: ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಭೌತಿಕ ಜೀವನದ ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಭಾನುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 7ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಮನುಷ್ಯ ಭೂತ ಮತ್ತು ಭವಿಷ್ಯತ್ತಿನ ಬಗ್ಗೆ ಯೋಚಿಸುತ್ತಾನೆ. ಆದರೆ ವರ್ತಮಾನದ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೇ ಇವೆ. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಶೀಲ, ಶೌರ್ಯ, ಚಟುವಟಿಕೆ, ಪಾಂಡಿತ್ಯ ಮತ್ತು ಸಂಗ್ರಹ ಈ ಐದು ಆಸ್ತಿಗಳು ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳಿದ್ದಂತೆ. ಬೆಳೆದು ನಿಂತ ಮರ ಹರಿಯುವ ನೀರು ಬೀಸುವ ಗಾಳಿ ನಿಂತ ನೆಲ ತ್ಯಾಗದ ಹಿರಿಮೆಯನ್ನು ಮತ್ತು ಪರೋಪಕಾರವನ್ನು ಎತ್ತಿ ತೋರಿಸುತ್ತದೆ. ಕೈಲಾಸಕ್ಕಿಂತ ಕಾಯಕ ಧರ್ಮಕ್ಕಿಂತ ದಯಾಗುಣ ದೊಡ್ಡದು. ಅರಿವಿಗಿಂತ ಆಚಾರ ಮತ್ತು ಅಧಿಕಾರಕ್ಕಿಂತ ಅಭಿಮಾನ ದೊಡ್ಡದು. ಮಾನ ಸನ್ಮಾನಕ್ಕಿಂತ ಸಂಸ್ಕಾರ ಸಂಸ್ಕೃತಿ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೋಧಿಸಿದ್ದಾರೆ. ಹೃದ್ಯೋಮಿ ಕೃಷಿಗೈದು ಶಿವಜ್ಞಾನವೆಂಬ ಬೀಜ ಬಿತ್ತಿ ಸಂಸ್ಕಾರ ಕೊಡುವಾತನೇ ಶ್ರೀ ಗುರು. ಗುರಿಯೆಡೆಗೆ ಸಾಗುವಾಗ ಸಾವಿರಾರು ಸಂಕಷ್ಟಗಳು ಬರುವುದು ಸಹಜ. ಅವುಗಳಿಗೆ ಅಂಜದೇ ಅಳುಕದೇ ಗಟ್ಟಿ ಹೆಜ್ಜೆಯನ್ನಿಟ್ಟು ಮುನ್ನಡೆದರೆ ಜೀವನ ಉಜ್ವಲಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಮಾತನಾಡಿ, ಬಸವಕಲ್ಯಾಣ ನಗರದಲ್ಲಿ ಐತಿಹಾಸಿಕ ದಸರಾ ಧರ್ಮ ಸಮ್ಮೇಳನ ಸಂಯೋಜಿಸಿರುವುದು ತಮ್ಮೆಲ್ಲರಲ್ಲಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ. ಮುಳ್ಳಿನ ನಡುವೆ ಗುಲಾಬಿ ಆರಳಿ ಸುಗಂಧ ಬೀರುವ ಹಾಗೆ ಕಷ್ಟಗಳ ನಡುವೆ ಬಾಳಿ ಬದುಕಬೇಕು. ಹೊನ್ನು ಹೆಣ್ಣು ಮಣ್ಣಿಗಾಗಿ ಬಡಿದಾಡುವ ಮನುಷ್ಯ ಒಂದಿಷ್ಟಾದರೂ ಆಧ್ಯಾತ್ಮ ಜ್ಞಾನ ಅರಿತು ಬಾಳುವುದರಲ್ಲಿ ಶ್ರೇಯಸ್ಸಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಶ್ರೀ ರಂಭಾಪುರಿ ಜಗದ್ಗುರುಗಳ ವಿಶ್ವಬಂಧುತ್ವದ ಸಂದೇಶ ಸಾಮರಸ್ಯ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ. ಸೋಮಣ್ಣ ಮಾತನಾಡಿ,ಸುಂದರವಾದ ಉಡುಗೆ ತೊಡುಗೆಗಳಿಂದ ವ್ಯಕ್ತಿತ್ವ ಬದಲಿಸಿಕೊಳ್ಳಬಹುದೇ ಹೊರತು ಬದುಕು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತಗೊಳ್ಳಲು ಸಾಧ್ಯ. ಹೃದಯವಂತಿಕೆ ಇಲ್ಲದೇ ಬುದ್ದಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ದಿಗಿಂತ ಹೃದಯವಂತಿಕೆ ಬಹು ಮುಖ್ಯ. ಶ್ರೀ ರಂಭಾಪುರಿ ಜಗದ್ಗುರುಗಳ ಆದರ್ಶ ಗುರಿ ಮತ್ತು ಬೋಧನೆ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣು ಪ್ರಕಾಶ ಪಾಟೀಲ ಮಾತನಾಡಿ ವೀರಶೈವ ಲಿಂಗಾಯತ ಧರ್ಮ ವಿಶಿಷ್ಟವಾದುದು. ಅಷ್ಟಾವರಣ ಪಂಚಾಚಾರ ಷಟ್ಟಲಗಳ ಮಾಹಿತಿಯನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು, ಧರ್ಮದ ತಿಳುವಳಿಕೆಯನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕಾಗಿದೆ. ಶ್ರೀ ಜಗದ್ಗುರು ಪಂಚಾಚಾರ್ಯರಾಗಲಿ ಬಸವಾದಿ ಶರಣರಾಗಲಿ ಬೋಧಿಸಿದ ತತ್ವಗಳನ್ನು ತಿಳಿಸಿಕೊಡಬೇಕಾಗಿದ ಎಂದರು.
ಪ್ರಖ್ಯಾತ ಸಾಹಿತ್ಯ ಸಂಶೋಧಕರಾದ ಡಾ.ಎ.ಸಿ. ವಾಲಿಯವರು ಮಾತನಾಡಿ ದೇಹವಿದು ದೇವನಿರುವ ದೇಗುಲ. ಸತ್ಯ ಮತ್ತು ಶಾಂತಿಗಳಂಥ ದೈವೀ ಗುಣಗಳ ಹಣ್ಣು ಹಂಪಲ ಬೆಳೆಯಬೇಕು. ಅಸುರೀ ಗುಣಗಳ ಕಸ ಕಡ್ಡಿ ಕಿತ್ತು ಹಾಕಿ ಮುಳ್ಳು ಕಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಪರಿಶುದ್ಧವಾದ ಮನದಂಗಳದಲ್ಲಿ ಮಹದೇವ ನೆಲೆ ನಿಂತು ಹರಸುವುದರಲ್ಲಿ ಯಾವುದೇ ಸಂಶಯವಿಲ್ಲ, ಮನುಷ್ಯನಿಗೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮದ ಅರಿವು ಬಹಳ ಮುಖ್ಯ. ಇವುಗಳನ್ನರಿತು ಮನುಷ್ಯ ಬಾಳಬೇಕೆಂಬುದರ ಬಗೆಗೆ ಸುದೀರ್ಘವಾದ ಉಪನ್ಯಾಸವನ್ನಿತ್ತರು.
ಪ್ರಶಸ್ತಿ: ಪಡಸಾವಳಿ ಹಿರೇಮಠದ ಮತ್ತು ಉದ್ದಿರಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ‘ವೀರಶೈವ ತತ್ವ ಪ್ರಬೋದಕ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಮಾಜಿ ಸಂಸದ ಗೌಡಗಾಂವ ಹಿರೇಮಠದ ಡಾ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ಸಂಸ್ಕಾರ ಸಂಸ್ಕೃತಿ ಬೇಕು. ಶಿವಜ್ಞಾನದ ಅರಿವು ಹೊಂದಿ ಜೀವನದಲ್ಲಿ ಸತ್ಪಲಗಳನ್ನು ಪಡೆಯಬೇಕೆಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಎಮ್.ಎಲ್.ಸಿ. ಶಸಿಲ ನಮೋಶಿ, ಶಾಸಕ ಡಾ.ಸಿದ್ದಲಿಂಗ ಪಾಟೀಲ, ಮಾಜಿ ಸಂಸದ ಉಮೇಶ ಜಾಧವ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ ಭಾಗವಹಿಸಿದ್ದರು. ಹೊನ್ನಕಿರಣಗಿ ಹಿರೇಮಠದ ಚಂದ್ರಗುಂಡ ಶಿವಾಚಾರ್ಯ ಸ್ವಾಮಿಗಳು ರಾಚೋಟೇಶ್ವರ ಸಮ್ಮುಖ ವಹಿಸಿದ್ದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು.
ಗೌರವ ಗುರುರಕ್ಷೆ :
ಬಡದಾಳ ತೇರಿನಮಠದ ಚನ್ನಮಲ್ಲ ಶಿವಾಚಾರ್ಯರು, ಶಿವಲಿಂಗ ಶಿವಾಚಾರ್ಯರು ಮುಧೋಳ, ಶಿವಾನಂದ ಸ್ವಾಮಿಗಳು ಸಾಯಗಾಂವ, ಚನ್ನಬಸವಗುರು ಮಹಾಲಿಂಗ ಶಿವಾಚಾರ್ಯರು ಸಂಸ್ಥಾನಮಠ ಬರದಾಪುರ, ಕಲ್ಲಯ್ಯ ಅಜ್ಜನವರು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಹಾಗೂ ನಂದಿಕೇಶ್ವರಿ ಅಮ್ಮನವರು ಮಾತಾ ಮಾಣಿಕೇಶ್ವರಿ ಆಶ್ರಮ ಲಿಂಗಸುಗೂರು ಇವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
Related Articles
Thank you for your comment. It is awaiting moderation.
Comments (0)