ಸಾಮರಸ್ಯದ ಬದುಕು ಶಾಂತಿಗೆ ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- October 1, 2025
- 108 Views

ಬಸವಕಲ್ಯಾಣ: ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ, ಜೀವನದಲ್ಲಿ ಪರಸ್ಪರ ನಂಬಿಕೆ ವಿಶ್ವಾಸಗಳು ಬಹಳ ಮುಖ್ಯ, ನಂಬಿಕೆ ಕಳೆದುಕೊಂಡರೆ ಬಾಳು ಬರಡು. ನಂಬಿಕೆ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ. ಪರಸ್ಪರ ಸಾಮರಸ್ಯದಿಂದ ಬಾಳಿದರೆ ಎಲ್ಲೆಡೆ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆಗೆ ಹೋರಾಡಬೇಕಾದದ್ದು ಅನಿವಾರ್ಯ. ಒಳ್ಳೆಯದಕ್ಕಿಂತ ಕೆಟ್ಟದ್ದು ಬಹುಬೇಗ ಬೆಳೆದು ಅಷ್ಟೇ ಬೇಗನೇ ನಾಶವಾಗುತ್ತದೆ. ಬೆಳಗುವ ಸೂರ್ಯನಿಗೆ ಮಣ್ಣು ಎರಚಿದರೆ ಅದು ಸೂರ್ಯನಿಗೆ ತಾಕುವುದಿಲ್ಲ. ಎರಚಿದವರ ಕಣ್ಣಲ್ಲಿ ಬೀಳುವುದೇ ಹೊರತು ಸಜ್ಜನರಿಗೆ ತಾಕುವುದಿಲ್ಲ. ಬಹು ಜನ್ಮಗಳ ಪುಣ್ಯದ ಫಲವಾಗಿರುವ ಈ ಮಾನವ ಜೀವನ ಸಾರ್ಥಕಪಡಿಸಿಕೊಳ್ಳುವುದು ಎಲ್ಲರ ಧೈಯವಾಗಬೇಕು. ದಾರಿ ಚೆನ್ನಾಗಿದೆ ಎಂದು ತಪ್ಪು ದಾರಿ ತುಳಿದಾಗ ದಾರಿ ಸಾಗಬಹುದೇ ವಿನಾ ಮುಟ್ಟಬೇಕಾದ ಊರು ತಲುಪಲಾಗದು. ಗಾಳಿ ಬೀಸಿದತ್ತ ಹುಟ್ಟು ಹಾಕಿದರೆ ಹರಿಗೋಲು ಉಳಿಯಬಹುದೇ ವಿನಾ ಗುರಿ ಸೇರುವುದು ಕಷ್ಟ, ಸುಲಭವಾದದ್ದು ಶುಭಕರ ಆಗಲಾರದು. ಕಷ್ಟವೆನಿಸುವುದು ಸುಖದ ದಾರಿಗೆ ರಹದಾರಿಯಾಗಿದೆ. ಮನುಷ್ಯನಿಗೆ ಆರೋಗ್ಯ ಬೇಕು. ಆದರೆ ಆರೋಗ್ಯ ಸೂತ್ರದ ಪರಿಪಾಲನೆ ಬೇಕಾಗಿಲ್ಲ. ವಿಶ್ವವಿದ್ಯಾಲಯದ ಪದವಿ ಬೇಕು. ಆದರೆ ಅಧ್ಯಯನ ಬೇಕಾಗಿಲ್ಲ. ಶಾಸನದ ರಕ್ಷೆ ಬೇಕು, ಆದರೆ ಶಾಸನದ ರಕ್ಷಣೆ ಬೇಕಾಗಿಲ್ಲ. ಧರ್ಮ ನೀಡುವ ಫಲ ಬೇಕು. ಆದರೆ ಧರ್ಮದ ಪರಿಪಾಲನೆ ಬೇಕಾಗಿಲ್ಲ. ಪೂಜಿಸುವ ಭಜಿಸುವ ದಾರಿ ಹಲವಾದರೂ ಸೇರುವ ಗುರಿ ಒಂದೇ ಎಂದು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಶರಣರ ಚಿಂತನ ಅರಿತು ಬಾಳಿದಾಗ ಎಲ್ಲೆಡೆ ಶಾಂತಿ ಸಮೃದ್ಧಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ವೀರಶೈವ ಧರ್ಮದಲ್ಲಿ ತತ್ರಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ ಚರಿತ್ರೆಗಿಂತ ಚಾರಿತ್ರ, ಬಹಳ ದೊಡ್ಡದೆಂದು ಸಾರಿದೆ. ಜೀವ ಜಗತ್ತಿಗೆ ವೀರಶೈವ ಲಿಂಗಾಯತ ಧರ್ಮ ಕೊಟ್ಟ ಕೊಡುಗೆ ಅಮೂಲ್ಯವಾದುದ್ದೆಂದು ಅರಿತು ಬಾಳುವುದು ಶ್ರೇಯಸ್ಕರ ಎಂದರು.
ಪ್ರಶಸ್ತಿ: ಧಾರ್ಮಿಕ ಮತ್ತು ಪಾರಂಪರಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸುಭಾಷ ಕಲ್ಲೂರ ಮಾತನಾಡಿ ಭಾರತೀಯ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮ ಪರಂಪರೆಗಳು ಬೆಳೆದು ಬಂದಿವೆ. ಆಚರಿಸುವ ಹಬ್ಬಗಳು ಜನಜೀವನದ ಮೇಲೆ ಅಪಾರವಾದ ಪ್ರಭಾವ ಬೀರಿವೆ. ಎಲ್ಲ ಜಾತಿ ಜನಾಂಗದವರು ಈ ನಾಡಿನ ಸಂಸ್ಕೃತಿಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರುವುದು ಎಲ್ಲರ ಗುರಿಯಾಗಬೇಕು. ಹೃದಯ ಹಸನಗೊಂಡು ಮನಸ್ಸು ವಿಕಾಸಗೊಳ್ಳಬೇಕು. ಜನರ ಭಾವನೆಗಳು ಏಕಾರಗೊಳ್ಳದೇ ವಿಕಾಸಗೊಳ್ಳಬೇಕು. ಜನ ಸಮುದಾಯದಲ್ಲಿ ಅರಿವು ಮತ್ತು ಜಾಗೃತಿ ಮೂಡಿ ಬರಲು ಇಂಥ ದಸರಾ ಧರ್ಮ ಸಮ್ಮೇಳನದ ಅವಶ್ಯಕತೆ ಇದೆ. ಶ್ರೀ ರಂಭಾಪುರಿ ಜಗದ್ಗುರುಗಳವರು ಆಚರಿಸಿಕೊಂಡು ಬರುತ್ತಿರುವ ದಸರಾ ಧರ್ಮ ಸಮ್ಮೇಳನ ಸಾಮರಸ್ಯ ಬದುಕಿಗೆ ಸಾಕ್ಷಿಯಾಗಿದೆ. ವೀರಶೈವ ಲಿಂಗಯತ ಎರಡೂ ಒಂದೇ ಎಂದರು.
ಕಡಕೋಳ ಶ್ರೀ ಮಡಿವಾಳೇಶ್ವರಮಠದ ಡಾ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನಿರಗೂಡಿ ಹವಾಮಲ್ಲಿನಾಥ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಜೀವ ಜಗತ್ತಿಗೆ ವೀರಶೈವ-ಲಿಂಗಾಯತ ಧರ್ಮದ ಕೊಡುಗೆ ಕುರಿತು ಅದ್ಭುತ ಉಪನ್ಯಾಸ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ದೇವಾಪುರ-ಸ್ಟೇಷನ್ ಬಬಲಾದನ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ದೇಶದ ಮೇಲೆ ವಿದೇಶಿಯರ ಅನೇಕ ಆಕ್ರಮಣಗಳು ಆದಾಗ್ಯೂ ನಮ್ಮ ಧರ್ಮ ತೆಲೆಯೆತ್ತಿ ನಿಂತಿದೆ. ಇದಕ್ಕೆ ಕಾರಣ ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ. ಶ್ರೀ ರಂಭಾಪುರಿ ಜಗದ್ಗುರುಗಳಲ್ಲಿ ವೈರಾಗ್ಯವೂ ಇದೆ ವೈಭವವೂ ಇದೆ ಎಂದರು.
ಮಲ್ಲಿಕಾರ್ಜುನ ಗುಂಗೆ ಮಾತನಾಡಿ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸಾರಿದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ಎಶ್ವಕ್ಕೆ ಶಾಂತಿ ಎಂದು ಸಾರಿದ್ದಾರೆ. ದೇಶದಲ್ಲಿ ಆನೇಕ ಧರ್ಮಗಳಿದ್ದರೂ ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ಗುರಿಯಾಗಿದೆ ಎಂದರು.
ಹಾರಕೂಡ ಮಠದಿಂದ ಗೌರವ: ಇದೇ ಸಂದರ್ಭದಲ್ಲಿ ಹಾರಕೂಡ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು ದಸರೆಯ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ವಿಶೇಷ ಗೌರವ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ, ಬೀದರಿನ ಬಿ.ಜಿ.ಶೆಟ್ಟಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಾ ರುದ್ರನೂರ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಭಾಕರ ಕಳಮಾಸೆ ಭಾಗವಹಿಸಿದ್ದರು.
ಗೌರವ ಗುರುರಕ್ಷೆ :
ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಂಸ್ಥಾನ ಕಟ್ಟಿಮಠ ಚಂದನಕೇರಾ, ಡಾ| ಶಾಂತಸೋಮನಾಥ ಶಿವಾಚಾರ್ಯರು ಹಿರೇಮಠ ಟೆಂಗಳಿ, ತ್ರಿಮೂರ್ತಿ ಶಿವಾಚಾರ್ಯರು ಹಿರೇಮಠ ತೋಟ್ನಳ್ಳಿ, ಕರುಣೇಶ್ವರ ಶಿವಾಚಾರ್ಯರು ನಂದಿಶ್ವರಮಠ ನಿಡಗುಂದಾ ಇವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಬಸವಕಲ್ಯಾಣದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಜಡಗೆ ಸ್ವಾಗತಿಸಿದರು. ಪರತಾಪೂರದ ಶ್ರೀ ಗುರುಮಹಾಲಿಂಗೇಶ್ವರ ಪ್ರೌಢ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಗುರುಲಿಂಗಯ್ಯಾ ಹಿತ್ತಲಶಿರೂರ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ಶಿವಪೂರ ಇವರು ನಿರೂಪಿಸಿದರು. ಬಸವಕಲ್ಯಾಣದ ಮಲ್ಲಯ್ಯಾ ಸ್ವಾಮಿ ಹಿರೇಮಠ, ಶರಣಪ್ಪ ಬಿರಾದಾರ ತ್ರಿಪೂರಾಂತ ಇವರಿಂದ ಅನ್ನ ದಾಸೋಹ ಜರುಗಿತು.
ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ಶಿವಾಚಾರ್ಯರು, ಶ್ರೀ ಪೀಠದ ಸಿಬ್ಬಂದಿ, ಧರ್ಮಾಭಿಮಾನಿಗಳು ಹಾಗೂ ಆನೆ ಅರ್ಪಿಸಿದ ಆಕರ್ಷಕ ನಜರ್(ಗೌರವ) ಸಮರ್ಪಣೆ ಕಾರ್ಯಕ್ರಮ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರ ನಜರಿನೊಂದಿಗೆ ಮುಕ್ತಾಯಗೊಂಡಿತು. ನಜರ್ ನಿರೂಪಣೆಯನ್ನು ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಡೆಸಿಕೊಟ್ಟರು.
Related Articles
Thank you for your comment. It is awaiting moderation.
Comments (0)