ಭೌತಿಕ ಸಂಪತ್ತಿನೊಂದಿಗೆ ಅಧ್ಯಾತ್ಮ ಸಾಧನೆಯಿಂದ ಸುಖ ಶಾಂತಿ;ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 27, 2025
- 122 Views

ಬಸವಕಲ್ಯಾಣ:ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಭೌತಿಕ ಸಂಪನ್ಮೂಲಗಳ ಜೊತೆಗೆ ಒಂದಿಷ್ಟಾದರೂ ಆಧ್ಯಾತ್ಮ ಜ್ಞಾನ ಅರಿಯದಿದ್ದರೆ ಮಾನವನ ಬಾಳು ನಿರರ್ಥಕವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 6ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥ ಬಯಸುವುದು ಸಹಜ. ಮನುಷ್ಯ ಎಷ್ಟು ಬುದ್ದಿವಂತನೋ ಅವನಿಗಿಂತ ಭಗವಂತ ಬಹು ಬುದ್ಧಿ ವಿಚಾರವಂತ, ಮನುಷ್ಯ ಸಂಪತ್ತು ಮತ್ತು ಬಯಕೆ ಅಷ್ಟೇ ಬಯಸುತ್ತಾನೆ. ಇವು ಸುಖಕ್ಕೆ ಸಾಧನ ಎಂಬುದನ್ನು ಬಲ್ಲ, ಈ ಸುಖ ಶಾಂತಿ ಪ್ರಾಪ್ತವಾಗಬೇಕಾದರೆ ಧರ್ಮವೇ ಮೂಲವಾಗಿದೆ. ಧರ್ಮವೆಂದರೆ ಆಚರಣೆ ಎಂದರ್ಥ, ಧರ್ಮ ಮಾರ್ಗದಿಂದ ಮನುಷ್ಯ ನಡೆದಾಗ ಸಂಪತ್ತು ಪ್ರಾಪ್ತವಾಗುತ್ತದೆ. ಸಂಪತ್ತಿನಿಂದ ಬಯಕೆಗಳು ಪೂರ್ಣಗೊಳ್ಳುತ್ತವೆ. ದೇವರು ಮೊದಲಿಗೆ ಧರ್ಮ ಕೊನೆಗೆ ಮೋಕ್ಷ ಇಟ್ಟಿದ್ದಾನೆ. ಅರ್ಥ ಮತ್ತು ಕಾಮ ಪ್ರಾಪ್ತಿಯಾಗಬೇಕಾದರೆ ಧರ್ಮ ಮಾರ್ಗ ಅನುಸರಿಸಿ ನಡೆದಾಗ ಬದುಕು ಉಜ್ವಲಗೊಳ್ಳುವುದು. ವೀರಶೈವ ಧರ್ಮ ಮಾನವೀಯತೆ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಎಲ್ಲ ಧರ್ಮಗಳಲ್ಲಿ ಕಾಣುವ ಆದರ್ಶ ಅಂಶಗಳು ವೀರಶೈವ ಧರ್ಮದಲ್ಲಿ ಪರಿಪೂರ್ಣಗೊಂಡಿದ್ದನ್ನು ಕಾಣುತ್ತೇವೆ. ಜೈನರ ಅಹಿಂಸೆ ಕ್ರೈಸ್ತರ ಕರುಣೆ ಇಸ್ಲಾಂ ನಿಷ್ಠೆ ಆರ್ಯರ ಜ್ಞಾನ ಮತ್ತು ದ್ರಾವಿಡರ ಭಕ್ತಿ ವೀರಶೈವ ಧರ್ಮದಲ್ಲಿ ಅಡಕಗೊಂಡಿದ್ದನ್ನು ಕಾಣುತ್ತೇವೆ. ವೀರಶೈವ ಧರ್ಮ ಮಾನವ ಧರ್ಮವೆಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ ಎಂದರು.
ಶ್ರೀ ಜಗದ್ಗುರು ರಂಭಾಪುರಿ ಪೀಠದ ಮುಖವಾಣಿ ರಂಭಾಪುರಿ ಬೆಳಗು ದಸರಾ ವಿಶೇಷಾಂಕ ಬಿಡುಗಡೆ ಮಾಡಿದ ಅ.ಭಾ.ವೀ.ಲಿಂ.ಮಹಾಸಭಾ ರಾಜ್ಯ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಜ್ಞಾನ ಸಂವರ್ಧನೆಗೆ ಉತ್ತಮ ಸಾಹಿತ್ಯ ಸಾರುವ ಪತ್ರಿಕೆಗಳ ಅವಶ್ಯಕತೆಯಿದೆ. ರಂಭಾಪುರಿ ಬೆಳಗು ಮಾಸಪತ್ರಿಕೆ ಜನಮನದ ಕೊಳೆಯನ್ನು ಕಳೆದು ಜ್ಞಾನ ಸುಗಂಧವನ್ನು ಪಸರಿಸುತ್ತಿದೆ. ಬಸವಕಲ್ಯಾಣ ಐತಿಹಾಸಿಕ ನಾಡಿನಲ್ಲಿ ನಡೆದಿರುವ ದಸರಾ ಧರ್ಮ ಸಮ್ಮೇಳನ ಕಂಡು ಅತ್ಯಂತ ಹರುಷ ಉಂಟಾಗುತ್ತಿದೆ. ಗುರಿಯಿಲ್ಲದ ಗುರಿ ಸಾಧಿಸದ ಬದುಕು ವ್ಯರ್ಥ, ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಅಮೂಲ್ಯವಾದ ಜೀವನೋತ್ಸಾಹ ತುಂಬಿ ಬರಬೇಕಾದರೆ ಇಂಥ ಸಮಾರಂಭಗಳ ಅವಶ್ಯಕತೆ ಬಹಳಷ್ಟಿದೆ ಎಂದರು.
ಶ್ರೀ ರಂಭಾಪುರಿ ಜಗದ್ಗುರುಗಳ ವಿಶಾಲ ಮನೋಭಾವ ದೂರದೃಷ್ಟಿ ಬದುಕಿ ಬಾಳುವ ಜನ ಸಮುದಾಯಕ್ಕೆ ಆಶಾಕಿರಣ, ಪಂಚ ಪೀಠಗಳು ಸನ್ಮಾರ್ಗದರ್ಶನ ನೀಡುತ್ತ ಸಮಾಜದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಾವು ಬಲಹೀನರಾಗುತ್ತೇವೆ. ಸಮಾಜದ ಅಭಿವೃದ್ಧಿಗಾಗಿ ಬೇರೆ ಯಾರೂ ಸಹಾಯ ಮಾಡುವುದಿಲ್ಲ. ನಮ್ಮ ಗಳಿಕೆಯಲ್ಲಿ ಕೆಲವು ಭಾಗವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಡಬೇಕು. ವೀರಶೈವ-ಲಿಂಗಾಯತ ಧರ್ಮದ ಮೂಲ ಭೂತ ತತ್ವಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವೀರಶೈವ-ಲಿಂಗಾಯತರು ವರ್ಗ ಭೇದ ವರ್ಣ ಭೇದ ಮಾಡದೇ ಎಲ್ಲರನ್ನು ಅಪ್ಪಿಕೊಂಡು ಬಾಳಬೇಕು. ಮೀಸಲಾತಿ ರಾಜಕಾರಣದಿಂದ ಸಮಾಜ ಒಡೆದು ಹೋಗುತ್ತಿದೆ. ಸರ್ಕಾರಗಳು ಮೀಸಲಾತಿ ನೀಡಬೇಕಾದರೆ ಅವುಗಳಿಗೆ ತಮ್ಮದೇ ಆದ ಇತಿಮಿತಿಯಿದೆ. ದೇಶದಲ್ಲಿ ಹಲವಾರು ಆಡಳಿತಗಳು ಬಂದು ಹೋಗಿವೆ. ಆದರೆ ಧರ್ಮ ಬದಲಾಗಲಿಲ್ಲ. ಯುವಕರಿಗೆ ಹೇಳುವ ಕಿವಿ ಮಾತೆಂದರೆ ಮೀಸಲಾತಿ ಬೆನ್ನತ್ತಿ ಹೋಗುವುದರಿಂದ ಪ್ರಯೋಜನವಿಲ್ಲ. ಪ್ರಾಮಾಣಿಕ ದುಡಿಮೆಯಿಂದ ಮಾತ್ರ ನಮ್ಮ ಭವಿಷ್ಯವಿದೆ ಎಂಬುದನ್ನು ಮರೆಯಬಾರದು ಎಂದರು.
ಆಳಂದ ಶಾಸಕ ಬಿ.ಆರ್.ಪಾಟೀಲ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿ ಮಂತ್ರ ತೀರ್ಥ ಗುರು ದೇವರು ದೈವ ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟಿಕೊಳ್ಳುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಸಜ್ಜನರ ಒಡನಾಟ ಉತ್ಕರ್ಷತೆಗೆ ಕಾರಣವಾದರೆ ದುರ್ಜನರ ಸಹವಾಸ ನಾಶಕ್ಕೆ ಮೂಲ. ಯುವಾವಸ್ಥೆಯಲ್ಲಿ ಧರ್ಮ ಸಂಸ್ಕೃತಿ ಅರಿತು ಬಾಳಿದರೆ ಜೀವನ ಪಾವನ, ತನುವೆಂಬ ತೋಟದಲ್ಲಿ ಆಧ್ಯಾತ್ಮದ ಕೃಷಿಗೈಯಬೇಕು ಎಂದರು. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವ ಜೀವನ ನಿಂತ ನೀರಾಗಬಾರದು. ನಿರಂತರ ಹರಿಯುವ ಪವಿತ್ರ ಗಂಗಾಜಲವಾಗಬೇಕು. ನಿರಂತರ ಪ್ರಯತ್ನ ಚಲನಶೀಲತೆ ಆದರ್ಶ ಜೀವನದ ಗುಟ್ಟು, ವೀರಶೈವ ಧರ್ಮ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಸಾರುತ್ತಾ ಬಂದಿವೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ್ದನ್ನು ಕಾಣುತ್ತೇವೆ. ಎಲ್ಲ ಜಾತಿ ಜನಾಂಗಳ ಉನ್ನತಿಯಾಗಬೇಕೆಂಬುದು ವೀರಶೈವಧರ್ಮದ ವೈಶಿಷ್ಟ್ಯತೆಯಾಗಿದೆ ಎಂದರು.
ಭುವನಗಿರಿ ಕವಲೇದುರ್ಗ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮುಗಳನಾಗಾವಿ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು.
ಬಸವಕಲ್ಯಾಣದ ಷಹಾಜಿ ಭೋಸೆ, ಕಮಲಾಕಾರ ಪಾಟೀಲ ಮನ್ನಳ್ಳಿ, ಚಂದ್ರಶೇಖರ ಪಾಟೀಲ ಮುಡಬಿ. ಮಾಧರಾವ ಹಸೂರೆ, ನಿತಿನ ಗುತ್ತೆದಾರ ಅಪ್ಪಲಪೂರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಶಸ್ತಿ: ತ್ರಿಪುರಾಂತಕ ಗವಿಮಠದ ಡಾ| ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರಿಗೆ ‘ಸಾಧನ ಸಿರಿ” ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಗೌರವ ಗುರುರಕ್ಷೆ : ಚಾಂಬೋಳ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಗುಡಪಳ್ಳಿ ಚಂದ್ರಶೇಖರ ಶಿವಾಚಾರ್ಯರು, ಬಸವಲಿಂಗ ಸ್ವಾಮಿಗಳು ಲಾಡಮೂಗಳಿ, ಶಿವಲಿಂಗ ಸ್ವಾಮಿಗಳು ಶಿವಲಿಂಗೇಶ್ವರ ವಿರಕ್ತಮಠ ಖೇಳಗಿ, ಉಪಮನ್ಯು ಶಿವಾಚಾರ್ಯರು ಸ್ವಾಮಿಗಳು ಐನಾಪುರ, ಶಿವಶಾಂತಲಿಂಗ ಶಿವಾಚಾರ್ಯರು ಹಿರೇಮಠ ಕಿಣ್ಣಿಸುಲ್ತಾನ ಇವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಬಸವಕಲ್ಯಾಣದ ಪುಣ್ಯಕೋಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಸೂರ್ಯಕಾಂತ ಶೀಲವಂತ ಇವರು ಸ್ವಾಗತಿಸಿದರು. ಆಕಾಂಕ್ಷಾ ರಾಜಶೇಖರ ಹಿರೇಮಠ ಹೈದ್ರಾಬಾದ ಇವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಗುರುಲಿಂಗಯ್ಯಾ ಹಿತ್ತಲಶಿರೂರ ಇವರ ಸಂಗೀತಕ್ಕೆ ಜ್ಞಾನೇಶ್ವರ ತಬಲಾ ಸಾಥ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ಶಿವಪೂರ ಇವರು ನಿರೂಪಿಸಿದರು, ಬೆಂಗಳೂರಿನ ಸೋಮನಾಥ ಪಾಟೀಲ ಬೀದರಿನ ಗೋರ್ಟಾ ಗುರುರಾಜ ಮೋಳಕೇರಿ ಗುರುಕೃಪಾ ಡೆವಲಪರ ಮತ್ತು ಕನಸ್ಟ್ರಕ್ಷನ್ ಇವರಿಂದ ಅನ್ನ ದಾಸೋಹ ಜರುಗಿತು. ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ಶಿವಾಚಾರ್ಯರಿಂದ ಧರ್ಮಾಭಿಮಾನಿಗಳಿಂದ, ಆನೆಯಿಂದ ಕೊನೆಗೆ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರಿಂದ ನಜರ ಸಮರ್ಪಣೆಯ ಆಭೂತಪೂರ್ವ ದೃಶ್ಯವನ್ನು ಜನತೆ ಕಣ್ಣುಂಬಿಸಿಕೊಂಡರು.
Related Articles
Thank you for your comment. It is awaiting moderation.
Comments (0)