ಡಾ. ಡಿ.ವೀರೇಂದ್ರ ಹೆಗ್ಗಡೆ ಜನಕಲ್ಯಾಣದ ಆಶಯ:52 ಲಕ್ಷ ಮಹಿಳೆಯರ ಸ್ವಸಹಾಯ ಗುಂಪುಗಳ ರಚನೆ
- by Suddi Team
- November 18, 2025
- 60 Views
ಧಾರವಾಡ : ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ, ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಾಡಿದ ಜನಕಲ್ಯಾಣ ಆಶಯದ ಸಂಕಲ್ಪದಿಂದಾಗಿ ಪ್ರಸ್ತುತ ರಾಜ್ಯದಲ್ಲಿ 52 ಲಕ್ಷ ಮಹಿಳೆಯರ ಸ್ವಸಹಾಯ ಗುಂಪುಗಳ ರಚನೆಯಾಗಿ 5 ಕೋಟಿಗೂ ಅಧಿಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಸಹಾಯ ಪಡೆದಿದ್ದಾರೆ ಎಂದು ಜೆ.ಎಸ್.ಎಸ್. ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ನಗರದ ಶ್ರೀಮಂಜುನಾಥೇಶ್ವರ ಪದವಿ-ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಅಮ್ಮಿನಬಾವಿಯ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ಜೈನ್ ಮಿಲನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 78ನೆಯ ಹುಟ್ಟುಹಬ್ಬ ಮತ್ತು ತಪಸ್ವಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ ಅವರ 31ನೆಯ ದೀಕ್ಷಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ.ವೀರೇಂದ್ರ ಹೆಗ್ಗಡೆ ಅವರು ಆರಂಭಿಸಿದ ರುಡ್ಸೆಟ್ ತರಬೇತಿ ಕೇಂದ್ರಗಳ ಮೂಲಕ ತರಬೇತಿ ಪಡೆದ 25 ಲಕ್ಷ ಕುಟುಂಬಗಳು ಸ್ವ ಉದ್ಯೋಗಗಳನ್ನು ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಿ ನೆಮ್ಮದಿಯನ್ನು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಧಾರವಾಡದ ಜೆ.ಎಸ್.ಎಸ್. ಅಡಿಯಲ್ಲಿರುವ 25 ಶಿಕ್ಷಣ ಸಂಸ್ಥೆಗಳಲ್ಲಿ 22 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದೆಲ್ಲಕ್ಕೂ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನವೇ ಕಾರಣವಾಗಿದೆ ಎಂದೂ ಡಾ. ಅಜಿತಪ್ರಸಾದ ಹೇಳಿದರು.
ತಪಸ್ವಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ ಧರ್ಮಸಂದೇಶ ನೀಡಿ, ಎಲ್ಲರ ಒಳಿತು ಮತ್ತು ಶಾಂತಿಪೂರ್ಣ ಬದುಕಿಗೆ ಹೆಸರಾಗಿರುವ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಫಲವಾಗಿ ಎಲ್ಲೆಡೆ ವಿದ್ಯಾವಿಕಾಸ, ಗ್ರಾಮೀಣಾಭಿವೃದ್ಧಿ ಮತ್ತು ಧರ್ಮಜಾಗೃತಿ ಸಾಧ್ಯವಾಗಿದೆ ಎಂದರು.
‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹಾಗೂ ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಮಾತನಾಡಿದರು. ಜೆಎಸ್ಎಸ್ ಐ.ಟಿ.ಐ. ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಗ್ರಾಮದ ಗಣ್ಯರುಗಳಾದ ಪರಮೇಶ್ವರ ಅಕ್ಕಿ, ಮುರುಘೇಶ ಧನಶೆಟ್ಟಿ, ಪದ್ಮಣ್ಣ ಧಾರವಾಡ, ಶಂಕರ ರಾಘೂನವರ, ದೀಪಕ್ ದೇಸಾಯಿ, ಮಂಜುನಾಥ ಅಂಗಡಿ, ಈಶ್ವರ ಗಡೇಕಾರ, ನೇಮಿಚಂದ್ರ ನವಲೂರ, ಶಶಿಕಲಾ ದೇಸಾಯಿ, ಮಂಜುನಾಥ ಬೊಬ್ಬಕ್ಕನವರ, ಪ್ರಸನ್ನ ದೇಸಾಯಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜೈನ್ ಮಿಲನ್ ಅಧ್ಯಕ್ಷ ಡಾ. ಚಿನ್ನಪ್ಪ ಕುಂದಗೋಳ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಬಿ.ಎನ್.ಬಾವಿ ನಿರೂಪಿಸಿದರು. ಶಿವಕುಮಾರ ತುರಮರಿಮಠ ವಂದಿಸಿದರು. ಮಂಜುನಾಥ ಅಂಗಡಿ ಹಾಗೂ ಸುಕನ್ಯಾ ಅಂಗಡಿ ಅವರು ಬೆಳ್ಳಿಯ ಜಪಮಾಲೆಯನ್ನು ಶ್ರೀಜಿನವಾಣಿ ಮಾತಾಜಿ ಸಾನ್ನಿಧ್ಯಕ್ಕೆ ಸಮರ್ಪಿಸಿದರು. ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ ಇದ್ದರು.
ಶಿಬಿರದಲ್ಲಿ ಒಟ್ಟು 210 ಜನರು ಕಣ್ಣಿನ ಉಚಿತ ತಪಾಸಣೆಗೆ ಒಳಗಾಗಿದ್ದು, 60ಕ್ಕೂ ಹೆಚ್ಚು ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ನೇತ್ರ ಚಿಕಿತ್ಸಾ ತಜ್ಞೆ ಡಾ. ಹರಿತಾ ಭಟ್ ಹಾಗೂ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಪಿ.ಆರ್.ಓ. ಸತೀಶ ಶಿರೂರ ತಿಳಿಸಿದರು.
Related Articles
Thank you for your comment. It is awaiting moderation.


Comments (0)