ಧಾರವಾಡ : ಪಡುವಣದ ಅಂಚಿನಲ್ಲಿ ಸೂರ್ಯನ ದಿನಚರಿಯ ಮುಕ್ತಾಯದ ಕ್ಷಣಗಳಲ್ಲಿ ಶುಕ್ರವಾರ ಆಂಧಪದೇಶ ರಾಜ್ಯದ ರಾಯಚೋಟಿ ಕ್ಷೇತದ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ರಥೋತ್ಸವ ವಿವಿಧ ಜನಪದ ವಾದ್ಯ-ಮೇಳಗಳು ಹಾಗೂ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥದ ಪೂಜಾ ಕೈಂಕರ್ಯಗಳು ಮುಗಿಯುತ್ತಿದ್ದಂತೆ ‘ಹರಹರ ಮಹಾದೇವ… ಶೀಭದ್ರಕಾಳಿ ಸಮೇತ ರಾಯಚೋಟಿ ವೀರಭದೇಶ್ವರ ಮಹಾರಾಜಕೀ ಜೈ… ಮಾನವ ಧರ್ಮಕ್ಕೆ ಜಯವಾಗಲಿ… ಧರ್ಮದಿಂದಲೇ ವಿಶ್ವಕ್ಕೆ ಶಾಂತಿ…’ ಎಂದೆಲ್ಲ ನಿರಂತರ ಜಯಕಾರ ಮೊಳಗಿಸಿದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರ ಭಕ್ತಿಯಲ್ಲಿ ರಥೋತ್ಸವ ರಾಯಚೋಟಿ ನಗರದ ಪ್ರಮುಖ ಬೀದಿಗಳಲ್ಲಿ ತೇಲಿಬಂತು. ಉತ್ತತ್ತಿ, ಬಾಳೆಹಣ್ಣು, ಕಾಳು ಮೆಣಸುಗಳನ್ನು ರಥಕ್ಕೆ ಎಸೆದು ಭಕ್ತಗಣ ತಮ್ಮ ಭಕ್ತಿಯ ನಮನಗಳನ್ನು ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀವೀರಭದ್ರದೇವರಿಗೆ ಹಾಗೂ ಶ್ರೀಭದ್ರಕಾಳಿ ಅಮ್ಮನವರಿಗೆ ಬಂಗಾರದ ಕಿರೀಟ ಧಾರಣೆ, ವಜ್ರದ ತ್ರಿನೇತ್ರ ಧಾರಣೆ, ಮಹಾನೈವೇದ್ಯ, ಪೂರ್ಣಾಹುತಿ ಮತ್ತಿತರ ಪಾರಂಪರಿಕ ಹತ್ತು-ಹಲವು ಧಾರ್ಮಿಕ ಸೇವೆಗಳು ಜರುಗಿದವು. ದೇವಾಲಯದ ಅರ್ಚಕರುಗಳಾದ ಶಂಕ್ರಯ್ಯಸ್ವಾಮಿ, ಎ. ಕೃಷ್ಣಯ್ಯಸ್ವಾಮಿ, ಚಂದ್ರಶೇಖರಯ್ಯ, ಎಸ್. ಯೋಗೀಶ ಅವರು ಜಾತ್ರಾಮಹೋತ್ಸವದ ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಿದರು.
ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ರಾಯಚೋಟಿ ಶ್ರೀವೀರಭದ್ರೇಶ್ವರ ತೇರುಬಳಗದ ಪದಾಧಿಕಾರಿಗಳಾದ ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ರಾಚಯ್ಯ ಮಠಪತಿ, ಅನಿಲ ಉಳ್ಳಾಗಡ್ಡಿ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ, ರಮೇಶಕುಮಾರ ಬುಡರಕಟ್ಟಿಮಠ, ಗಂಗಾಧರ ನಾಗಠಾಣ, ಮಹೇಶ ಸೂಡಿ, ಉದಯ ಅಂದಾನಿಮಠ, ಕಿರಣ ಅಂದಾನಿಮಠ, ನರಗುಂದದ ಚೆನ್ನಪ್ಪ ನಾಗಠಾಣ, ರಾಯಚೂರಿನ ವೀರಭದ್ರಪ್ಪ ಅಂತರಗಂಗಿ, ಅಶೋಕ ಅಂತರಗಂಗಿ ಮುಂತಾದವರು ಇದ್ದರು.
ನಿರಂತರ ದಾಸೋಹ: ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ಸಂಕುಲಕ್ಕೆ ನಿರಂತರ ದಾಸೋಹದಲ್ಲಿ ಅನ್ನಸಂತರ್ಪಣೆ ವ್ಯವಸ್ಥಿತವಾಗಿ ಜರುಗಿತು. ವಿವಿಧ ದಾನಿಗಣ್ಯರನ್ನು ಹಾಗೂ ಎಲ್ಲ ಸೇವಾ ಕರ್ತರನ್ನು ದೇವಾಲಯ ಟ್ರಸ್ಟ ವತಿಯಿಂದ ಗೌರವಿಸಲಾಯಿತು.
Related Articles
Thank you for your comment. It is awaiting moderation.


Comments (0)