ಜೀವನದಲ್ಲಿ ಬದಲಾವಣೆ, ಬೆಳವಣಿಗೆ ಎರಡೂ ಮುಖ್ಯ; ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- June 28, 2025
- 221 Views
ಬೆಂಗಳೂರು: ಸತ್ಯ ಶಾಂತಿ ಎಲ್ಲರ ಬಾಳಿಗೆ ಅಗತ್ಯ. ಸತ್ಯ ಶುದ್ಧವಾದ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಂವರ್ಧಿಸುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಶ್ರೇಯಸ್ಸು ಬಯಸುವ ಮನುಷ್ಯನಿಗೆ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯವೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಜೆ.ಪಿ.ನಗರದ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ವೀರಶೈವ ಲಿಂಗಾಯತ ಸಂಗಮದಿಂದ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ನೆಲೆ ಬೆಲೆ ತರುತ್ತದೆ. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ. ಕಷ್ಟಗಳು ಬಂದಾಗ ಧೃತಿಗೆಡದೇ ಗಟ್ಟಿತನದಿಂದ ಮುನ್ನಡೆಯುವ ಛಲ ಹೊಂದಿರಬೇಕು. ಬೆಳಗುವ ದೀಪಕ್ಕೆ ಎಣ್ಣೆ ಇದ್ದಂತೆ ಸರ್ವ ಚಟುವಟಿಕೆಗೆ ಆತ್ಮ ವಿಶ್ವಾಸ ನಂಬಿಕೆಯೇ ಮೂಲ ಆಧಾರವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ ಸಕಲರನ್ನು ಉದ್ದರಿಸಿದ್ದಾರೆ ಎಂದ ಅವರು, ಜೆ.ಪಿ.ನಗರದ ವೀರಶೈವ ಲಿಂಗಾಯತ ಸಂಗಮ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಆಧರ್ಮಕ್ಕೆ ಹಲವು ದಾರಿ. ಆದರೆ, ಧರ್ಮಕ್ಕೆ ಒಂದೇ ದಾರಿ ಇರುತ್ತದೆ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸುವುದು. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಸಂಚರಿಸಿ ಧರ್ಮ ಸಂಸ್ಕೃತಿ ಕ್ರಿಯಾಶೀಲತೆ ಸಾಮರಸ್ಯ ಸ್ವಾಭಿಮಾನ ಬೆಳೆಸುವ ಅದ್ಭುತ ಕಾರ್ಯ ಮಾಡುತ್ತಿದ್ದಾರೆ. ಅನುಗಾಲ ಅವರ ಮಾರ್ಗದರ್ಶನ ನಮ್ಮೆಲ್ಲರ ಬಾಳಿನ ರಕ್ಷಾ ಕವಚವಾಗಲೆಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ, ಜಯರಾಮ್ ಹಾಗೂ ಲಲಿತಾ ನಾರಾಯಣ ದಂಪತಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯಲಾರದ ಕಾರಣದಿಂದ ಎಲ್ಲೆಡೆ ಆಶಾಂತಿ ಕಾಣುತ್ತೇವೆ. ಅಜ್ಞಾನ ಮತ್ತು ಅಶಿಸ್ತು ಜೀವನ ಪ್ರಗತಿಗೆ ಅಡ್ಡಿಯಾಗಿವೆ. ಉದಾತ್ತ ಜೀವನ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಾಳಬೇಕೆಂದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಧರ್ಮದಿಂದ ವಿಮುಖನಾದರೆ ಅವನತಿ ಶತಸಿದ್ದ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವದು ದೇವ ಗುಣ. ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಬಹು ದೊಡ್ಡ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ. ಆದರ್ಶ ಮಾರ್ಗದರ್ಶನದಲ್ಲಿ ಯುವಕರು ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗೌಡರ್ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ನೀಲಾಂಬಿಕಾ ಮಹಿಳಾ ಮಂಡಳಿಯವರು ಪ್ರಾರ್ಥನಾ ಗೀತೆ ಹಾಡಿದರು. ಎಂ.ಎಸ್. ಶ್ರೀಕಂಠಸ್ವಾಮಿ ಸ್ವಾಗತಿಸಿದರು. ನಿವೃತ್ತ ಪ್ರೊ.ಎ.ಆರ್. ಶಿವಕುಮಾರ್ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಜ್ಯೋತಿ ಶಶಿಧರ್ ಮತ್ತು ತಂಡದವರಿಂದ ಭಕ್ತಿ ಸಂಗೀತ ಜರುಗಿತು.
Related Articles
Thank you for your comment. It is awaiting moderation.


Comments (0)