ಬಿಜೆಪಿ ಅಧಿಕಾರಕ್ಕೆ ಬಂದಾಗ ದಸರಾ ಉದ್ಘಾಟನೆಗೆ ಕಾನೂನು ರಚನೆ; ಅಶೋಕ್ ಘೋಷಣೆ
- by Suddi Team
- August 28, 2025
- 114 Views

ಬೆಂಗಳೂರು:ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರ ಬಂದ ನಂತರ ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ಕುರಿತು ಹೊಸದಾಗಿ ಕಾನೂನು ತರಲಾಗುವುದು ಎಂದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಯದುವೀರರ ವಂಶಸ್ಥರನ್ನು ಟಿಪ್ಪು ಕುಟುಂಬದವರು ಬಂಧನದಲ್ಲಿರಿಸಿದ್ದರು. ಅಂತಹವರನ್ನೇ ಮತ್ತೆ ಕರೆದುಕೊಂಡು ಬಂದು ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಹಾಗಾಗಿ ಮುಂದೆ ಬಿಜೆಪಿ ಸರ್ಕಾರ ಬಂದ ನಂತರ ದಸರಾ ಉದ್ಘಾಟನೆ ಮಾಡುವ ಕುರಿತು ಕಾನೂನು ತರಲಾಗುವುದು ಎಂದರು.
ದಸರಾ ಹಬ್ಬವನ್ನು ಒಡೆಯರ್ ರಾಜವಂಶಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದ ಮುಸ್ಲಿಂ ದೊರೆಗಳು ದೇವಾಲಯಗಳನ್ನು ಒಡೆದುಹಾಕಿದ್ದರು. ಈಗ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಲಾಗಿದೆ. ಕನ್ನಡ ಭುವನೇಶ್ವರಿ ದೇವಿಯ ಬಗ್ಗೆ ಇವರು ಮಾತಾಡುತ್ತಾರೆ. ಇನ್ನೇನು ಪಾಕಿಸ್ತಾನದ ಮಾತೆ ಮಾಡಬೇಕಿತ್ತೇ? ಕನ್ನಡಿಗರು ಮಾತ್ರವಲ್ಲ, ಎಲ್ಲ ಭಾರತೀಯರು ಭಾಷೆಯನ್ನು ತಾಯಿಯಾಗಿಯೇ ಕಾಣುತ್ತಾರೆ. ಇವರು ಹೇಳುವಂತೆ ಅರಿಶಿನ ಕುಂಕುಮ ಹಾಕದೆ ಅತ್ತರ್ ಹಾಕಲು ಸಾಧ್ಯವಿಲ್ಲ. ದಸರಾ ಉದ್ಘಾಟನೆಯಲ್ಲೂ ಅರಿಶಿನ ಕುಂಕುಮ ಬಳಸುತ್ತಾರೆ. ಆಗ ಕುಂಕುಮವನ್ನು ಹಾಗೂ ಭುವನೇಶ್ವರಿಯನ್ನು ಬೈದವರು ಈಗ ಹೇಗೆ ಚಾಮುಂಡಿಯನ್ನು ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ಇವರನ್ನು ಕರೆಯುತ್ತಿದ್ದಾರೆ ಎನ್ನುತ್ತಾರೆ. ಆದರೆ ಇವರನ್ನು ಮಸೀದಿಯವರೂ ಕರೆಯಲ್ಲ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಕವಿ ನಿಸಾರ್ ಅಹ್ಮದ್ ಬಗ್ಗೆ ಯಾರೂ ಮಾತಾಡಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅವರ ಹೆಸರಲ್ಲಿ ಸಂಸ್ಥೆ ನಿರ್ಮಿಸಲು ಐದೆಕರೆ ಜಮೀನು ಮಂಜೂರು ಮಾಡಿಸಿದ್ದೆ. ಜೋಗದ ಸಿರಿಯ ಕವನ ಬರೆದು ಅವರು ತಾಯಿ ನಿನಗೆ ನಿತ್ಯೋತ್ಸವ ಎಂದಿದ್ದರು. ಅವರು ಎಂದಿಗೂ ಯಾವುದೇ ಧರ್ಮದ ವಿರುದ್ಧವಾಗಿ ಮಾತಾಡಲಿಲ್ಲ. ಅಂತಹವರಿಗೆ ಬಾನು ಮುಷ್ತಾಕ್ ಅವರನ್ನು ಹೋಲಿಸುವುದೇಕೆ ? ನಿಸಾರ್ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಎಂದರು.
ಮೈಸೂರು ಮಹಾರಾಜರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಪೂಜಿಸಿಕೊಂಡು ಬಂದಿದ್ದಾರೆ. ಇಂತಹ ಇತಿಹಾಸವಿರುವ ದೇವರನ್ನು ಹಿಂದೂ ದೇವರಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಚಾಮುಂಡಿ ಬೆಟ್ಟದ ದೇವಾಲಯ ಯಾರ ಆಸ್ತಿ? ವಕ್ಫ್ ಮಂಡಳಿ, ಮಸೀದಿ, ಚರ್ಚ್ ಗಳನ್ನು ಯಾರಿಗೂ ಬಿಟ್ಟು ಕೊಡಲ್ಲ. ಆದರೆ ಹಿಂದೂ ದೇವಾಲಯ ಮಾತ್ರ ಎಲ್ಲರಿಗೂ ಸೇರಿದೆ ಎನ್ನುತ್ತಾರೆ. ಈ ದೇವಾಲಯವನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ದಂಗೆಯಾಗುತ್ತದೆ. ಹಿಂದೂಗಳ ಭಾವನೆಯನ್ನು ಕೆಣಕದೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
Related Articles
Thank you for your comment. It is awaiting moderation.
Comments (0)