ಅಮ್ಮಿನಬಾವಿ: ಅದ್ಧೂರಿಯಾಗಿ ಜರುಗಿದ ವೀರಭದ್ರ ದೇವರ ಸಾಮೂಹಿಕ ಗುಗ್ಗಳ ಮಹೋತ್ಸವ
- by Suddi Team
- March 23, 2026
- 25 Views
ಧಾರವಾಡ: ಸಮೀಪದ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ, ಕ್ಷೇತ್ರನಾಥ ಶ್ರೀವೀರಭದ್ರ ದೇವರ ಸಾಮೂಹಿಕ ಗುಗ್ಗಳ ಮಹೋತ್ಸವವು ಭಾನುವಾರ ಪ್ರಾತಃಕಾಲದಲ್ಲಿ ಅತ್ಯಂತ ಭಕ್ತಿ-ಭಾವದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಅವರು ಗುಗ್ಗಳ ಮಹೋತ್ಸವಕ್ಕೆ ಚಾಲನೆ ನೀಡಿದರು. ಅಮ್ಮಿನಬಾವಿ ಸಂಸ್ಥಾನದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಪಂಚಗೃಹ ಹಿರೇಮಠದಿಂದ ಹೊರಟ ಈ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮರಳಿ ಮಠದ ಆವರಣದಲ್ಲಿರುವ ಶ್ರೀವೀರಭದ್ರ ದೇವರ ಸನ್ನಿಧಿಯಲ್ಲಿ ಮಂಗಳಗೊಂಡಿತು.
ಆಕರ್ಷಕ ಪುರವಂತರ ಸೇವೆ:
ಉತ್ಸವದ ಪ್ರಮುಖ ಆಕರ್ಷಣೆಯಾಗಿ ಹಿರಿಯ ಪುರವಂತ ಕಲಾವಿದರಾದ ಮರೇವಾಡದ ಬಸವಂತಪ್ಪ ಕಮ್ಮಾರ, ಸುಳ್ಳದ ದೇವೇಂದ್ರಪ್ಪ ಪತ್ತಾರ, ಹಳೇಹುಬ್ಬಳ್ಳಿಯ ಸತೀಶ ಮುಗಳಿ, ಸವಣೂರಿನ ನಾಗಪ್ಪ ಕುಂಬಾರ, ಸಿದ್ದಪ್ಪ ಕುಂಬಾರ, ಕರಡಿಗುಡ್ಡದ ಮಲ್ಲಿಕಾರ್ಜುನ ಕುರುವಿನಕೊಪ್ಪ, ತೇಗೂರಿನ ಮಂಜುನಾಥ ಬೆಳವಡಿ ಹಾಗೂ ರುದ್ರಪ್ಪ ಕಮ್ಮಾರ ಅವರು ಅಬ್ಬರದ ಒಡಪುಗಳನ್ನು ಹೇಳುವ ಮೂಲಕ ಗಮನಸೆಳೆದರು.
ಈ ಕಲಾ ಸೇವೆಗೆ ಮುಗದದ ಶಿವಪ್ಪ ಕುಂಬಾರ, ಮರೇವಾಡದ ಶರಣಬಸಪ್ಪ ಕಮ್ಮಾರ, ಅಮ್ಮಿನಬಾವಿಯ ಮಲ್ಲಪ್ಪ ಸವದಿ ಹಾಗೂ ಮಲ್ಲಿಕಾರ್ಜುನ ಸೊರಟೂರ ಅವರು ಸಂಬಾಳ ವಾದನದ ಮೂಲಕ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ವೀರಯ್ಯ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶಿವಯೋಗಿ ಹಿರೇಮಠ, ವಿನಾಯಕ ಹಿರೇಮಠ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)