ಅಮ್ಮಿನಬಾವಿ: ಶ್ರೀಅಯ್ಯಪ್ಪಸ್ವಾಮಿಗೆ ಕ್ಷೀರಾಭಿಷೇಕ ಮಹಾಪೂಜೆ
- by Suddi Team
- December 27, 2025
- 5 Views
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಅಯ್ಯಪ್ಪಸ್ವಾಮಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕದ ವಿಶೇಷ ಮಹಾಪೂಜೆ ಶನಿವಾರ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಧರ್ಮದರ್ಶಿಗಳಾದ ಶ್ರೀ ಕೆ. ನಾರಾಯಣ ಗುರುಸ್ವಾಮಿ ಅವರ ನೇತೃತ್ವದಲ್ಲಿ ಶೃದ್ಧಾ ಭಕ್ತಿಯಿಂದ ಜರುಗಿತು.
ಶ್ರೀಅಯ್ಯಪ್ಪಸ್ವಾಮಿ ಮೂಲ ಸನ್ನಿಧಾನದ ದರ್ಶನಾಶೀರ್ವಾದ ಹಾಗೂ ಮಕರಜ್ಯೋತಿ ದರ್ಶನದ ಸಂಕಲ್ಪದೊಂದಿಗೆ ಶಬರಿಮಲೈ ಕ್ಷೇತ್ರಕ್ಕೆ ಯಾತ್ರೆ ಕೈಕೊಳ್ಳುವ ನೂರಕ್ಕೂ ಹೆಚ್ಚು ಶ್ರೀಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕಳೆದ ಹಲವಾರು ದಿನಗಳಿಂದ ಇಲ್ಲಿ ವೃತಾಚರಣೆಯಲ್ಲಿ ತೊಡಗಿದ್ದು, ಅವರಿಂದು ಈ ಮಹಾಪೂಜೆಯಲ್ಲಿ ತಮ್ಮ ಭಕ್ತಿ ಸೇವೆಗಳನ್ನು ಸಲ್ಲಿಸಿದರು.
ಪ್ರಾತಃಕಾಲದಲ್ಲಿ ಶ್ರೀಗಣಪತಿ, ಶ್ರೀಸುಬ್ರಹ್ಮಣ್ಯಸ್ವಾಮಿ, ಶ್ರೀಆದಿಶಕ್ತಿಮಾತೆ ಹಾಗೂ ಶ್ರೀಪರಮೇಶ್ವರ ಸನ್ನಿಧಿಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಹಾಪೂಜೆಯ ಅಂಗವಾಗಿ ಶ್ರೀಅಯ್ಯಪ್ಪಸ್ವಾಮಿ ಗರ್ಭಗೃಹವೂ ಸೇರಿದಂತೆ ದೇವಸ್ಥಾನದ ಒಳಾಂಗಣವನ್ನು ವಿವಿಧ ಜಾತಿಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಮಹಾಮಂಗಳಾರತಿ : ವಿಶೇಷ ಪೂಜಾ ಕೈಂಕರ್ಯಗಳು ಮುಗಿಯುತ್ತಿದ್ದಂತೆ ತುಪ್ಪದ ದೀಪಗಳೂ ಸೇರಿ ಕರ್ಪುರದ ಜ್ಯೋತಿಗಳೊಂದಿಗೆ ಸಾಮೂಹಿಕ ಮಹಾಮಂಗಳಾರತಿ ಸೇವೆ ಜರುಗಿತು. ನಂತರ ನಡೆದ ಶ್ರೀಅಯ್ಯಪ್ಪಸ್ವಾಮಿ ನಾಮಸ್ಮರಣೆಯ ಭಕ್ತಿಗೀತೆಗಳ ಪಠಣದಲ್ಲಿ ಗುರುಸ್ವಾಮಿ ಶ್ರೀ ಕೆ. ನಾರಾಯಣ ಗುರೂಜಿ, ಮಾಲಾಧಾರಿಗಳಾದ ಸುರೇಶ ಕುರೋಡಿ, ತವನಪ್ಪ ಪತ್ರಾವಳಿ, ಮಂಜುನಾಥ ಧಾರವಾಡ, ನಾಗಪ್ಪ ಶಿಕ್ಕಲಿಗೇರ, ವೀರಭದ್ರಪ್ಪ ಅಮರಗೋಳ, ಸುರೇಶ ಹೊಟ್ಟಿ, ಮೈಲಾರಿ ಮುನವಳ್ಳಿ, ತಿಪ್ಪಣ್ಣ ನರಗುಂದ, ಭೀಮಸೇನ ಜಾನಕೂನವರ, ಶಂಕರ ಶಿಕ್ಕಲಿಗೇರ, ಶಿವಾನಂದ ಬೆಳವಡಿ ಸೇರಿದಂತೆ ಹಲವಾರು ಭಕ್ತರು ಇದ್ದರು.
ಮಹಾಪೂಜೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಹಾದಾಸೋಹ ಸೇವೆಯಲ್ಲಿ ಸಂಜೆಯವರೆಗೂ ನಡೆದ ಅನ್ನಸಂತರ್ಪಣೆಯಲ್ಲಿ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಹಾರೋಬೆಳವಡಿ, ಮೊರಬ ಗ್ರಾಮಗಳು ಹಾಗೂ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಸವದತ್ತಿ ದೂರದ ನಗರಪ್ರದೇಶಗಳಿಂದಲೂ ಶ್ರೀಅಯ್ಯಪ್ಪಸ್ವಾಮಿಯ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತಗಣ ಭಾಗವಹಿಸಿ ಮಹಾಪ್ರಸಾದ ಸ್ವೀಕರಿಸಿದರು. ಸಂಜೆ ಪಡಿಪೂಜೆ ನಡೆಯಿತು.
Related Articles
Thank you for your comment. It is awaiting moderation.


Comments (0)