ಲಂಚದ ಆರೋಪ ಮಾಡಿರುವ ಬಿ.ಆರ್. ಪಾಟೀಲರ ಬಾಯಿ ಮುಚ್ಚಿಸುವ ಆತಂಕವಿದೆ: ಬಿಎಸ್ವೈ
- by Suddi Team
- June 23, 2025
- 82 Views

ಬೆಂಗಳೂರು: ಲಂಚ ಕೊಡದೆ, ದುಡ್ಡು ಕೊಡದೆ ಏನೂ ಕೆಲಸ ಆಗುವುದಿಲ್ಲ ಎಂಬ ಗುರುತರ ಆರೋಪ ಮಾಡಿರುವ ಬಿ.ಆರ್. ಪಾಟೀಲರನ್ನು ಕರೆದು ಮುಖ್ಯಮಂತ್ರಿಗಳೇ ಬಾಯಿ ಮುಚ್ಚಿಸುವ ಕೆಲಸ ಮಾಡಬಹುದು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲರು ಮನೆ ಕೊಡುವ ಸಂದರ್ಭದಲ್ಲಿ ಲಂಚ ಕೊಡದೆ, ದುಡ್ಡು ಕೊಡದೆ ಏನೂ ಕೆಲಸ ಆಗುವುದಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿಗಳೇ ಬಿ.ಆರ್. ಪಾಟೀಲರನ್ನು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ ಎಂದು ತಿಳಿಸಿದರು.
ಮೋಹನ್ದಾಸ್ ಪೈ ಅವರಂಥ ಹಿರಿಯರ ಬಗ್ಗೆ ಬೇರೆ ಬೇರೆ ಸುಳ್ಳು ಕಾರಣ ಹೇಳಿ ಎಫ್ಐಆರ್ ಹಾಕುವ ಧೈರ್ಯವನ್ನು ಇವರು ಮಾಡುತ್ತಿದ್ದಾರೆ. ರಾಜ್ಯದ ಹಿರಿಯ ಮುಖಂಡರು, ರಾಜಕೀಯದಿಂದ ದೂರ ಇರುವವರೂ ಕೂಡ ಈ ಸರ್ಕಾರದ ವಿರುದ್ಧ ಮಾತನಾಡಬಾರದೆಂದು ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ಇದೆಲ್ಲ ಸಂಗತಿಗಳನ್ನು ರಾಜ್ಯದ ಉದ್ದಗಲಕ್ಕೆ ತೆರಳಿ ನಮ್ಮ ಕಾರ್ಯಕರ್ತರಿಗೆ ತಿಳಿಸುತ್ತೇನೆ ಎಂದರು.
ನಮ್ಮ ಶಾಸಕರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ. ಪ್ರತಿನಿತ್ಯ ರಾಜ್ಯ ಬಿಜೆಪಿ ಕಚೇರಿಗೆ ಬರುವುದಾಗಿ ಹೇಳಿದ್ದೆ. ವಾರಕ್ಕೆ ಒಂದು ದಿನ ಒಂದೊಂದು ಜಿಲ್ಲೆಗೆ ಹೋಗುತ್ತೇನೆ. ಮುಖಂಡರು ತಿಳಿಸಿದಂತೆ ಪ್ರವಾಸ ಮಾಡುತ್ತೇನೆ. ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರದ ಹಗರಣಗಳ ಕುರಿತು ಕಾರ್ಯಕರ್ತರ ಸಭೆಯಲ್ಲಿ ತಿಳಿಸಿ ಜಾಗೃತಗೊಳಿಸಲಿದ್ದೇನೆ ಎಂದರು.
Related Articles
Thank you for your comment. It is awaiting moderation.
Comments (0)