ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತಾ ಯತೀಂದ್ರ ಹೇಳಿಕೆ..?

ಬೆಂಗಳೂರು: ತಂದೆಯ ಅಭಿವೃದ್ಧಿ ಕಾರ್ಯಗಳನ್ನು ಹೊಗಳುವ ಭರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಿಂತ ಸಿದ್ದರಾಮಯ್ಯ ಅವರ ಕೊಡುಗೆ ದೊಡ್ಡದು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ.

ಜೆಡಿಎಸ್ ಭದ್ರಕೋಟೆಯಾಗಿದ್ದ ಹಳೆ ಮೈಸೂರು ಭಾಗದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಲ್ಲಿದ್ದ ಕೈ ನಾಯಕರಿಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಸ್ವಪಕ್ಷೀಯರೇ ಈ ವಿಚಾರದಲ್ಲಿ ಅಸಮಧಾನಗೊಂಡಿದ್ದಾರೆ. ಮೈಸೂರು ಅರಸರ ಕೊಡುಗೆಗಳು ಅದರಲ್ಲಿಯೂ ವಿಶೇಷವಾಗಿ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ನಾಲ್ಕು ತಲೆಮಾರು ಕಳೆದರೂ ಜನತೆ ಮರೆತಿಲ್ಲ, ಇಂದಿಗೂ ಅರಸರ ಸ್ಮರಣೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಿಂತ ಸಿದ್ದರಾಮಯ್ಯ ಅವರ ಕೊಡುಗೆ ದೊಡ್ಡದು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಜನತೆಯ ವಿರೋಧಕ್ಕೂ ಕಾರಣವಾಗಿದೆ ಪ್ರತಿಪಕ್ಷಗಳಿಗೂ ಹೊಸ ಅಸ್ತ್ರ ಕೊಟ್ಟಂತಾಗಿದೆ.

ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅಂಥ ಪುಣ್ಯಾತ್ಮರಿಗೆ ತುಲನೆ ಮಾಡಿ ಅವರಿಗೂ ಅಪಮಾನ ಮಾಡುವ ಕೆಲಸ ಮಾಡಬಾರದು. ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ರಾಜ್ಯದ ಜನರು ನೋಡಿದ್ದಾರೆ. ಹುಚ್ಚು ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಅಟ್ಟಕ್ಕೇರಿಸುವ ಕೆಲಸ ಮಾಡುತ್ತಾರೆ. ಅದರಿಂದ ಅವರಿಗೂ ಪ್ರಯೋಜನ ಇಲ್ಲ; ರಾಜ್ಯಕ್ಕೂ ಪ್ರಯೋಜನ ಇಲ್ಲ ಎಂದು ನುಡಿದರು.

ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ,ಚಿನ್ನಾಭರಣ ಅಡವಿಟ್ಟು ಜಲಾಶಯ ನಿರ್ಮಿಸಿದವರಿಗೂ, ಮುಡಾದಲ್ಲಿ 14 ಸೈಟುಗಳನ್ನು ಕೊಳ್ಳೆ ಹೊಡೆದವರಿಗೂ ಹೋಲಿಕೆ ಮಾಡಬಾರದು. ಯತೀಂದ್ರ ಸಿದ್ದರಾಮಯ್ಯ ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹಳೆ ಮೈಸೂರು ಭಾಗಕ್ಕೆ ನೀಡಿದ ಕೊಡುಗೆಯನ್ನು ನಾವು ಸ್ಮರಿಸಬೇಕು. ಕೆಆರ್‌ಎಸ್‌ ಜಲಾಶಯದಿಂದಾಗಿ ಜನರಿಗೆ ಜೀವಜಲ ದೊರೆತಿದೆ. ಅವರ ಸಾಧನೆಗಳಿಂದಾಗಿ ಜನರು ಅನ್ನ ತಿನ್ನುತ್ತಿದ್ದಾರೆ. ಸೋಪ್‌ ಫ್ಯಾಕ್ಟರಿ, ವಿಶ್ವವಿದ್ಯಾಲಯಗಳ ನಿರ್ಮಾಣ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದವರೇ ಅವರು ಎಂದರು.

Related Articles

Comments (0)

Leave a Comment