ಪಕ್ಷದಲ್ಲಿ ಗೊಂದಲವಿರುವುದನ್ನು ಒಪ್ಪಿಕೊಂಡ ವಿಜಯೇಂದ್ರ

ಬೆಂಗಳೂರು: “ಪಕ್ಷವಿರೋಧಿ ಚಟುವಟಿಕೆ ಮಾಡಿದವರು ಪಕ್ಷದಿಂದ ಹೊರಗಿದ್ದಾರೆ. ಸಣ್ಣಪುಟ್ಟ ಅಸಮಧಾನ ಸರಿಪಡಿಸುವ ಜವಾಬ್ದಾರಿ ಪ್ರಲ್ಹಾದ್ ಜೋಶಿ ವಹಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ” ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆ ಮೂಲಕ ಸಧ್ಯದ ಮಟ್ಟಿಗೆ ಬಿಜೆಪಿಯಲ್ಲಿ ಗೊಂದಲ ಇದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದ ಅಸಮಾಧಾನ ತೋಡಿಕೊಳ್ಳುತ್ತಿದ್ದವರು ಈಗ ಪಕ್ಷದಿಂದ ಹೊರಗಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ಮಾಡಿದವರೂ ಪಕ್ಷದಿಂದ ಹೊರಗಿದ್ದಾರೆ. ಇನ್ನೂ ಕೆಲವರು ತಮ್ಮ ಸಣ್ಣಪುಟ್ಟ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮೊನ್ನೆ ನಾನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇನ್ನೂ ಕೆಲ ಮುಖಂಡರು ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಬೇಕೆಂದು ಯೋಚಿಸಿದ್ದು, ಈಗಾಗಲೇ ಪ್ರಲ್ಹಾದ್ ಜೋಶಿಯವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿಯಾಗಲಿದೆ. ಆತಂಕ ಪಡುವ ಯಾವುದೇ ವಿಚಾರ ಇಲ್ಲ ಎಂದರು.

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ನಾನು ಕಳೆದ ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ-ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ. ನಮ್ಮ ಕಾರ್ಯಕರ್ತರಲ್ಲೂ ಇದೆ. ನಮ್ಮ ಮುಖಂಡರಲ್ಲೂ ಇದೆ. ಹಾಗಾಗಿ ಒಳ್ಳೆಯದಾಗಲಿದೆ. ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಇನ್ನೂ ನೇಮಕಾತಿ ಆಗುತ್ತಿಲ್ಲ. ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಯಾವುದೂ ಸತ್ಯವಲ್ಲ ಎಂದು ತಿಳಿಸಿದರು.

ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಈ ವಿಚಾರದಲ್ಲಿ ಘೋಷಣೆಯೂ ಆಗಿದೆ. ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ. ಕರ್ನಾಟಕ ಒಂದೇ ಅಲ್ಲ. ಡಿ.ವಿ.ಸದಾನಂದಗೌಡರ ಹೇಳಿಕೆ ಅರ್ಧ ಸತ್ಯ. ಉತ್ತರ ಪ್ರದೇಶ ರಾಜ್ಯದ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ. ತೆಲಂಗಾಣ- ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ ಎಂದು ವಿವರಿಸಿದರು.

ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಹಿರಿಯರಾದ ಡಿ.ವಿ.ಸದಾನಂದಗೌಡರ ಹೇಳಿಕೆಯ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸದಾನಂದಗೌಡರು ಹಿರಿಯರಿದ್ದಾರೆ. ಅವರ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯ ವ್ಯತ್ಯಾಸ ಇರುವುದು ಸಹಜ ಎಂದು ತಿಳಿಸಿದರು.

ದೆಹಲಿಗೆ ನಾನೂ ಹೋಗಿದ್ದೆ. ಪಕ್ಷದ ಕೆಲ ಹಿರಿಯ ನಾಯಕರೂ ಹೋಗಿದ್ದಾರೆ. ಕೆಲವರು ಇನ್ನೂ ವಾಪಸ್ ಬರಬೇಕಿದೆ. ಬಹಳ ಬೆಳವಣಿಗೆ ಆಗುತ್ತಿದೆ ಎಂಬುದು ಕಲ್ಪನೆಗಳು ಅಷ್ಟೇ. ದೆಹಲಿಗೆ ವೈಯಕ್ತಿಕ ಕಾರಣಕ್ಕಾಗಿ ಹೋಗಿದ್ದೆ. ರಾಷ್ಟ್ರೀಯ ನಾಯಕರನ್ನಾಗಲೀ, ಯಾರನ್ನೂ ಭೇಟಿ ಮಾಡಿಲ್ಲ. ಆರ್. ಅಶೋಕ್ ವಿಪಕ್ಷ ನಾಯಕರಿದ್ದಾರೆ. ವಿಪಕ್ಷ ನಾಯಕರು ದೆಹಲಿಗೆ ಹೋಗಬಾರದು, ಮುಂಖಡರನ್ನು ಭೇಟಿ ಮಾಡಬಾರದು ಎಂದರೆ ಹೇಗೆ? ಅಶೋಕ್ ಅವರು ವಿಪಕ್ಷ ನಾಯಕರಾಗಿ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ಆದರೆ, ಮಾಧ್ಯಮದಲ್ಲಿ ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಚರ್ಚೆ ನಡೆದಿದೆ. ಇದು ಖಂಡಿತ ಸರಿಯಲ್ಲ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Related Articles

Comments (0)

Leave a Comment