ಗುರುಕುಲ ಶಿಕ್ಷಣ ನೆನಪಿಸುವ ವಿದ್ಯಾಗಮ: ಸುರೇಶ್ ಕುಮಾರ್
- by Suddi Team
- August 7, 2020
- 45 Views

ಬೆಂಗಳೂರು: ಕೋವಿಡ್ ಪ್ರಸರಣದ ಹಿನ್ನೆಲೆಯಲ್ಲಿ ಎಲ್ಲ ಸ್ತರದ ವಿದ್ಯಾರ್ಥಿಗಳನ್ನು ಪಾಠಪ್ರವಚನಗಳತ್ತ ಸೆಳೆಯಲು ಜಾರಿಗೆ ತಂದಿರುವ ‘ವಿದ್ಯಾಗಮʼ ಯೋಜನೆ ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುವಂತದ್ದು, ಈ ಮೂಲಕ ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ ಎಂದಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಯೋಜನೆ ಮೂಲಕ ನಮ್ಮ ಕಟ್ಟಕಡೆ ಹಳ್ಳಿಯ ಮಕ್ಕಳಿಗೂ ತಲುಪುವಂತೆ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಹೇಳಿದ್ದಾರೆ.
ಶುಕ್ರವಾರ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ವಿದ್ಯಾಗಮ ಯೋಜನೆ ಕುರಿತಂತೆ ರಾಜ್ಯದ ಎಲ್ಲ ಡಿಡಿಪಿಐ, ಡಯಟ್ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾರ್ಗದರ್ಶನ ನೀಡಿ, ಯೋಜನೆಯ ರೂಪುರೇಷೆಗಳನ್ನು ವಿವರಿಸಿ ಈ ಯೋಜನೆಯ ಯಶಸ್ಸಿಗೆ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದರು.
ಶಾಲೆಗಳು ಆರಂಭವಾಗಬೇಕೆಂಬ ಒತ್ತಡ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಆದರೆ ನಾವು ಕೇಂದ್ರ ಸರ್ಕಾರದ ಮಾರ್ಗಸೂಚಿ ಕಾಯುತ್ತಿದ್ದೇವೆ. ಈ ಮಧ್ಯೆ ನಮ್ಮ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯಿಂದ ಮಕ್ಕಳನ್ನು ತಲುಪುವ ಪ್ರಯತ್ನ ಮಾಡಿದ್ದು, ಇದು ಇಡೀ ದೇಶದಲ್ಲಿಯೇ ಪ್ರಥಮವಾಗಿದೆ. ನಮ್ಮ ನಾಡಿನ ಯಾವುದೇ ಕೊನೆಯ ವಿದ್ಯಾರ್ಥಿಯೂ ಕಲಿಕೆಯ ವಿಳಂಬದ ತೊಂದರೆಗೆ ಸಿಕ್ಕಿಕೊಳ್ಳಬಾರದೆಂಬುದು ವಿದ್ಯಾಗಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಕೋವಿಡ್ ಪ್ರಸರಣದ ಈ ಸಮಯದಲ್ಲಿ ಹೆಚ್ಚು ದಿನ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ಎಲ್ಲ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ವಿದ್ಯಾಗಮ ಯೋಜನೆಯ ಉದ್ದೇಶವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಮತ್ತು ಕೈ ಸ್ವಚ್ಛತೆ ಸೇರಿದಂತೆ ಕೋವಿಡ್ ಸಂದರ್ಭದ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಎಲ್ಲರ ಕರ್ತವ್ಯ. ಈ ಕರ್ತವ್ಯಗಳ ಮೂಲಕ ಶಾಲೆ ಮುಂದೆ ಆರಂಭವಾಗುವ ತನಕ ವಿದ್ಯಾಗಮ ಯೋಜನೆಯ ಯಶಸ್ಸಿನಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದ ಸಚಿವರು, ಕಲಿಕೆ ವಿಳಂಬವಾದರೆ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡಬಾರದೆಂಬ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ವಿದ್ಯಾಗಮ ಯೋಜನೆ ನಮ್ಮ ಗುರುಕುಲ ಮಾದರಿಯನ್ನು ನೆನಪಿಸುವಂತಾಗಬೇಕು ಎಂದರು.
ಫೋನ್ನಲ್ಲಿ, ಟಿವಿಗಳಲ್ಲಿ, ಪಡಸಾಲೆಗಳಲ್ಲಿ, ಶಾಲಾವರಣಗಳಲ್ಲಿ, ಮರಗಳ ನೆರಳಿನಲ್ಲಿ ನಡೆಸಬಹುದಾದ ಈ ತರಗತಿಗಳಿಗೆ ಅನುಕೂಲವಾಗುವಂತೆ ಶಿಕ್ಷಕರು ಕಲಿಕಾ ಸಾಮಗ್ರಿಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ಇಲಾಖೆಗಾಗಿಯೇ ಪ್ರತ್ಯೇಕ ಎರಡು ದೂರದರ್ಶನ ಚಾನೆಲ್ ಗಳನ್ನು ಕೇಳಿದ್ದು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.
ಯಾವುದೇ ಪ್ರಮಾಣ ಪತ್ರ ಕೇಳದೆ ದಾಖಲಾತಿ:
ಶಾಲೆಗೆ ಈ ವೇಳೆಗೆ ರಾಜ್ಯದಲ್ಲಿ 10 ಲಕ್ಷ ವಿದ್ಯಾರ್ಥಿಗಳು ದಾಖಲಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಅದು ಸಾಧ್ಯವಾಗಿಲ್ಲ. ಹಾಗಾಗಿ ಯಾವುದೇ ದಾಖಲೆಗಳನ್ನು ಅಪೇಕ್ಷಿಸದೇ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು. ಯಾವ ದಿನವೇ ಆಗಲಿ ಶಾಲೆಗೆ ದಾಖಲು ಅಪೇಕ್ಷಿಸಿ ಬರುವರನ್ನೂ ಸಹ ದಾಖಲಿಸಿಕೊಳ್ಳಬೇಕು. ಪೋಷಕರು ಹೇಳುವ ಮಾತಿನ ಮೂಲಕವೇ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಆ. 10 ರಿಂದ 15 ರವರೆಗೆ ಮಕ್ಕಳ ಶಾಲಾ ದಾಖಲಾತಿ ಅಂದೋಲನದ ಮಾದರಿಯಲ್ಲಿ ನಡೆಯಬೇಕು. ಆ ನಂತರವೂ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರೆಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.
ಈಗಾಗಲೇ ಶಾಲಾ ಮಕ್ಕಳಿಗೆ ಪುಸ್ತಕ, ನೋಟ್ ಬುಕ್ ಗಳನ್ನು ಒದಗಿಸಲಾಗಿದೆ. ಇನ್ನೂ ಅಗತ್ಯವಿರುವವರು ತಮ್ಮ ವ್ಯಾಪ್ತಿಯ ಬಿಇಒಗಳನ್ನು ಸಂಪರ್ಕಿಸಿ ಪುಸ್ತಕಗಳನ್ನು ಪಡೆಯಬಹುದಾಗಿದೆ ಎಂದು ಅವರು ಶಿಕ್ಷಕರಿಗೆ ಸಲಹೆ ನೀಡಿದರು. ಪುಸ್ತಕ ತಲುಪದ ಕಡೆಗಳಿಗೆ ತಕ್ಷಣವೇ ಮಕ್ಕಳ ಮನೆಗೆ ಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಬಿಇಒಗಳಿಗೆ ಸಚಿವರು ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್ ವಿದ್ಯಾಗಮ ಯೋಜನೆಯ ಯಾವ ರೀತಿಯಲ್ಲಿ ಕೈಗೊಳ್ಳಬೇಕು, ಅದಕ್ಕಾಗಿ ಅನುಸರಿಸಬೇಕಾದ ನಿಯಮಗಳು, ಸಿದ್ಧತೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ನಿವೇದಿಸಿ ಪರಿಹಾರಗಳನ್ನು ಕಂಡುಕೊಂಡರು.
ಎಸ್ಎಸ್ಎ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ವಿಧಾನಪರಿಷತ್ ಸದಸ್ಯರೊಂದಿಗೆ ಸಂವಾದ:
ಶುಕ್ರವಾರ ಬೆಳಗ್ಗೆ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಕುರಿತಂತೆ ರಾಜ್ಯದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವೆಬಿನಾರ್ ಮೂಲಕ ಸಚಿವ ಸುರೇಶ್ ಕುಮಾರ್ ಸಂವಾದ ನಡೆಸಿದರು.
Related Articles
Thank you for your comment. It is awaiting moderation.
Comments (0)