ಬ್ಯಾಲೆಟ್ ಪೇಪರ್‍ ಗೆ ಬಿಜೆಪಿ ಹೆದರುವ ಪ್ರಶ್ನೆಯೇ ಇಲ್ಲ;ವಿಜಯೇಂದ್ರ

ಬೆಂಗಳೂರು: ಬ್ಯಾಲೆಟ್ ಪೇಪರ್‍ ಗೆ ಬಿಜೆಪಿ ಹೆದರುವ ಪ್ರಶ್ನೆಯೇ ಇಲ್ಲ,ಅದರ ಅಗತ್ಯವೂ ನಮಗಿಲ್ಲ, ಸತತ ಸೋಲನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್ ಇವಿಎಂ ಮೇಲೆ ಆರೋಪ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ‌.

ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು,ಬಿಜೆಪಿಯು ಬ್ಯಾಲೆಟ್ ಪೇಪರ್‍ಗೆ ಹೆದರುವುದಿಲ್ಲ; ನಾವು ಏಕೆ ಹೆದರಬೇಕು? ಕೇಂದ್ರದಲ್ಲಿ ಸತತವಾಗಿ 3 ಬಾರಿ ನರೇಂದ್ರ ಮೋದಿ ಅವರ ಸರ್ಕಾರ ಬಂದಿದೆ. ಬಿಜೆಪಿ ಬ್ಯಾಲೆಟ್ ಪೇಪರ್‍ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ; ಇವಿಎಂ ಬಗ್ಗೆಯೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇವಿಎಂ ಬಗ್ಗೆ ಸಮಸ್ಯೆ ಇದ್ದರೆ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಹೇಗೆ ಅಧಿಕಾರಕ್ಕೆ ಬಂದಿತು; ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬಂತು; ಇದೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬಂತು. ಆ ಸಮಯದಲ್ಲಿ ಇವಿಎಂ ಸಮಸ್ಯೆ ಇರಲಿಲ್ಲವೇ; ಬ್ಯಾಲೆಟ್ ಪೇಪರ್ ಬೇಕು ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ, ಹರಿಯಾಣ ಎಲ್ಲ ರಾಜ್ಯಗಳಲ್ಲಿ ಸತತವಾಗಿ ಸೋಲನ್ನು ಕಂಡಿರುವ ಕಾಂಗ್ರೆಸ್ ಪಕ್ಷದವರು ಇಂದು ಹತಾಶರಾಗಿ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇವಿಎಂ ದೋಷಪೂರಿತ ಎಂದು ಆರೋಪ ಮಾಡುತ್ತಾರೆ.ದೇಶದ ಜನತೆ ಕಾಂಗ್ರೆಸ್ ಪಕ್ಷದ ಬಗ್ಗೆ ಏಕೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾ ಕಾಂಗ್ರೆಸ್ ಪಕ್ಷವು ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ವ್ಯಂಗ್ಯವಾಡಿದರು.

ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಒಂದು ದೇಶ ಒಂದು ಚುನಾವಣೆಯಿಂದ ದೇಶಕ್ಕೆ ಸಾಕಷ್ಟು ಒಳಿತಾಗುತ್ತದೆ. ಆ ನಿಟ್ಟಿನಲ್ಲಿ ಜನಾಭಿಪ್ರಾಯವನ್ನು ಮೂಡಿಸಬೇಕು ಸದುದ್ದೇಶವನ್ನು ಇಟ್ಟುಕೊಂಡು ದೇಶಾದ್ಯಂತ ಒಂದು ದೇಶ ಒಂದು ಚುನಾವಣೆ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನವರು ಎಲ್ಲದರಲ್ಲೂ ವಿರೋಧವನ್ನು ಮಾಡುತ್ತಿದ್ದಾರೆ. ವಕ್ಪ್ ಬೋರ್ಡ್ ಬಗ್ಗೆ ಹೋರಾಟ ಮಾಡಿದರೆ ಅದನ್ನು ವಿರೋಧಿಸಿದರು; ಅರ್ಟಿಕಲ್ 370 ಬಗ್ಗೆ ವಿರೋಧ ವ್ಯಕ್ತಪಡಿಸಿದರು; ಒಂದು ದೇಶ ಒಂದು ಚುನಾವಣೆಯನ್ನು ವಿರೋಧ ಮಾಡಿದರು; ಅದೇ ರೀತಿ ಇಂದು ಇವಿಎಂ ಅನ್ನು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Related Articles

Comments (0)

Leave a Comment