ರಾಜ್ಯ ಸರ್ಕಾರ ಹಿಂದೂಗಳ ಪರವಾಗಿ ಇಲ್ಲ,ಸ್ವಯಂ ರಕ್ಷಣೆ ಮಾಡಿಕೊಳ್ಳಿ ಎಂದು ಘೋಷಿಸಲಿ;ವಿಜಯೇಂದ್ರ

ಬೆಂಗಳೂರು:ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದ್ದು,ನಮ್ಮ ಸರಕಾರ ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ; ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂದು ಪ್ರಕಟಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಹಿಂದುತ್ವದ ಪರವಾಗಿ ಇದೆ. ಇವರ್ಯಾರು ಅದನ್ನು ಪ್ರಶ್ನೆ ಮಾಡಲು ಎಂದು ಆಕ್ಷೇಪಿಸಿದರು. ಸರಕಾರ ನಡೆಸುತ್ತಿದ್ದಾರೆ; ಕಾನೂನು- ಸುವ್ಯವಸ್ಥೆ ಕಾಪಾಡಿ ಹಿಂದೂಗಳ ರಕ್ಷಣೆ ಮಾಡುವುದು ಇವರ ಕರ್ತವ್ಯವಲ್ಲವೇ? ಎಂದು ಕೇಳಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರ ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ; ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂದು ಪ್ರಕಟಿಸಲಿ ಎಂದು ಒತ್ತಾಯಿಸಿದರು.

ಮದ್ದೂರು ಗಲಭೆ ಘಟನೆಗೆ ಸಂಬಂಧಿಸಿ ಸತ್ಯ ಸಂಶೋಧನಾ ತಂಡವನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನೇತೃತ್ವದ ತಂಡಕ್ಕೆ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲು ತಿಳಿಸಿದ್ದೇವೆ.ನಾಳೆ (ಸೆ.10) ಬೆಳಿಗ್ಗೆ 10, 10.30ಕ್ಕೆ ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಇತರ ಮುಖಂಡರು ಮದ್ದೂರಿಗೆ ಭೇಟಿ ಕೊಡಲಿದ್ದೇವೆ ಎಂದರು.

ಮುಖ್ಯಮಂತ್ರಿಗಳ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ ಎಂದು ಹೇಳಿದರು. ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ;ನಮ್ಮ ರಾಜ್ಯದಲ್ಲಿ ಆರೆಸ್ಸೆಸ್, ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತರನ್ನು ತಡೆಯಲು ಇವರು ಯಾರು? ಚಾಮುಂಡಿ ಬೆಟ್ಟಕ್ಕೆ, ಧರ್ಮಸ್ಥಳಕ್ಕೆ ಅಥವಾ ಗಣಪತಿ ಮೆರವಣಿಗೆಯಲ್ಲಿ ಹೋಗುವುದಾರೆ ಇವರು ಯಾರು ತಡೆಯುವುದಕ್ಕೆ ಎಂದು ಕೇಳಿದರು. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ಒದ್ದು ಒಳಗಡೆ ಹಾಕಲಿ ಎಂದು ಸವಾಲೆಸೆದರು. ಅದನ್ನು ಮಾಡಲು ಈ ಸರಕಾರಕ್ಕೆ ಯೋಗ್ಯತೆ ಇಲ್ಲ. ಇವರು ಹಾಗಿದ್ದರೆ ನಮ್ಮನ್ನು ಪ್ರಶ್ನಿಸುತ್ತಾರಾ ಎಂದು ಹರಿಹಾಯ್ದರು.

ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ; ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಇರಲಿಲ್ಲವೇ ಪೊಲೀಸ್ ವರಿಷ್ಠಾಧಿಕಾರಿಗಳು ಯಾಕೆ ಅಲ್ಲಿ ಇರಲಿಲ್ಲ? ಯಾಕೆ ಕೆಲವರು ಮಸೀದಿ ಒಳಗೆ ತೆರಳಲು ಪೊಲೀಸರು ಅವಕಾಶ ಕೊಟ್ಟರು? ಯಾಕೆ ಸರಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.ಮಾಡಿರುವುದೇ ಮಣ್ಣು ತಿನ್ನುವ ಕೆಲಸ; ಬಿಜೆಪಿ ಮೇಲೆ ದೂರುತ್ತೀರಾ ಹಾಗಾದರೆ? ಇವರ ವೈಫಲ್ಯವನ್ನು ನಮ್ಮ ಮೇಲೆ ಹಾಕುತ್ತೀರಾ ನೀವು? ಸಿಎಂ ಸುತ್ತಲಿನ ಸಚಿವರ ಹೇಳಿಕೆ ಗಮನಿಸಿದರೆ ಹಿಂದೂ ಕಾರ್ಯಕರ್ತರು ಅನಿವಾರ್ಯವಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Related Articles

Comments (0)

Leave a Comment