ಸದನದ ಸುಗಮ ಕಾರ್ಯನಿರ್ವಹಣೆಗಾಗಿ ವಿಧಾನಮಂಡಲವು ಒಂದು ಸಂಹಿತೆಯನ್ನು ರಚಿಸಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
- by Suddi Team
- September 14, 2025
- 21 Views

ಬೆಂಗಳೂರು: ಸದನಗಳ ಕಾರ್ಯನಿರ್ವಹಣೆಯಲ್ಲಿ ಪ್ರಸ್ತುತ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ. ಸದನಗಳಲ್ಲಿ, ಚರ್ಚೆಯ ಬದಲು ಗದ್ದಲ, ಘೋಷಣೆಗಳು ಮತ್ತು ಅವ್ಯವಸ್ಥೆ ಹೆಚ್ಚುತ್ತಿದೆ,ನಿಯಮಗಳು ಮತ್ತು ಶಿಸ್ತಿನ ಅನುಸರಣೆ ಕಡಿಮೆಯಾಗುತ್ತಿದೆ. ಇದು ಸದನದ ಘನತೆಗೆ ಧಕ್ಕೆ ತರುತ್ತದೆ ಹಾಗಾಗಿ ಸದನದ ಸುಗಮ ಕಾರ್ಯನಿರ್ವಹಣೆಗಾಗಿ ವಿಧಾನಮಂಡಲವು ಒಂದು ಸಂಹಿತೆಯನ್ನು ರಚಿಸಬೇಕು” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.
ನಗರದಲ್ಲಿ ಆಯೋಜಿಸಿದ್ದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಭಾರತ ವಲಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,”ನಮ್ಮ ಪ್ರಜಾಪ್ರಭುತ್ವದ ದೇವಾಲಯಗಳಾದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಡೆಯುತ್ತಿರುವ ಪ್ರಸ್ತುತ ಪದ್ಧತಿಗಳ ಕಡೆಗೆ ಗಮನ ಹರಿಸಿದಾಗ, ಜನರ ಧ್ವನಿಯನ್ನು ವ್ಯಕ್ತಪಡಿಸಲು ಸದನವು ಅತ್ಯುನ್ನತ ವೇದಿಕೆಯಾಗಿದೆ. ಇಲ್ಲಿ, ದೇಶ ಮತ್ತು ಸಮಾಜಕ್ಕೆ ಸಂಬಂಧಿಸಿದ ಗಂಭೀರ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಯಬೇಕು, ಇದರಿಂದ ಪರಿಹಾರಗಳನ್ನು ಕಂಡುಹಿಡಿಯಬಹುದು. ಆದರೆ ಪ್ರಸ್ತುತ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ. ಸದನಗಳಲ್ಲಿ, ಚರ್ಚೆಯ ಬದಲು ಗದ್ದಲ, ಘೋಷಣೆಗಳು ಮತ್ತು ಅವ್ಯವಸ್ಥೆ ಹೆಚ್ಚಿರುವುದನ್ನು ಹೆಚ್ಚಾಗಿ ಕಾಣಬಹುದು. ಸಾರ್ವಜನಿಕರ ಸಮಸ್ಯೆಗಳು, ಪ್ರಶ್ನೋತ್ತರ ಅವಧಿಗಳು ಗದ್ದಲಕ್ಕೆ ಬಲಿಯಾಗುತ್ತದೆ. ಹಲವು ಬಾರಿ ಸ್ಪೀಕರ್, ಅಧ್ಯಕ್ಷರು ಕಲಾಪವನ್ನು ಮುಂದೂಡಬೇಕಾಗುತ್ತದೆ. ನಿಯಮಗಳು ಮತ್ತು ಶಿಸ್ತಿನ ಅನುಸರಣೆ ಕಡಿಮೆಯಾಗುತ್ತಿದೆ. ಇದು ಸದನದ ಘನತೆಗೆ ಧಕ್ಕೆ ತರುತ್ತದೆ ಮತ್ತು ಸಾರ್ವಜನಿಕರ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದರು.
“ಯುವ ಪೀಳಿಗೆ ನಮ್ಮ ಕಡೆಗೆ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ವಿಧಾನಮಂಡಲದಲ್ಲಿ ನಡೆಯುವ ಯಾವುದೇ ಚರ್ಚೆಯು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ದಿಕ್ಕಿನಲ್ಲಿದೆ ಎಂಬ ನಂಬಿಕೆ ಮೂಡಬೇಕು. ಅರ್ಥಪೂರ್ಣ ಚರ್ಚೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಮೇಲಿನ ಯುವಕರ ನಂಬಿಕೆ ಮತ್ತಷ್ಟು ಹೆಚ್ಚಾಗಲಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಸದನವನ್ನು ಸುಗಮವಾಗಿ ನಡೆಸಲು ಎರಡೂ ಪಕ್ಷಗಳು ಅಗತ್ಯವಿದೆ. ವಿಧಾನಮಂಡಲದ ಕೆಲಸವನ್ನು ಹೆಚ್ಚು ಸುಗಮ ಮತ್ತು ಪರಿಣಾಮಕಾರಿಯಾಗಿ ಮಾಡಲು, ತಂತ್ರಜ್ಞಾನ ಮತ್ತು ಆಧುನಿಕ ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಸ್ಪೀಕರ್ ಮತ್ತು ಅಧ್ಯಕ್ಷರು ಕಾಲಕಾಲಕ್ಕೆ ಮತ್ತು ಸದನ ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಮೊದಲು ಪ್ರಮುಖ ಸದಸ್ಯರೊಂದಿಗೆ ನಿಯಮಿತವಾಗಿ ಸಂವಾದ ಮತ್ತು ಸಮಾಲೋಚನೆ ನಡೆಸಬೇಕು. ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ನಿಯಮಗಳು ಮತ್ತು ಸಂಸದೀಯ ಶಿಷ್ಟಾಚಾರದ ಬಗ್ಗೆ ತರಬೇತಿ ನೀಡಬೇಕು. ಸದನದ ಸುಗಮ ಕಾರ್ಯನಿರ್ವಹಣೆಗಾಗಿ ವಿಧಾನಮಂಡಲವು ಒಂದು ಸಂಹಿತೆಯನ್ನು ರಚಿಸಬೇಕು” ಎಂದು ಸಲಹೆ ನೀಡಿದರು.
“ಪ್ರಜಾಪ್ರಭುತ್ವದ ಮೂಲ ಮಂತ್ರವೆಂದರೆ – ಅಭಿಪ್ರಾಯ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಮನಸ್ಸಿನ ಭಿನ್ನಾಭಿಪ್ರಾಯಗಳು ಇರಬಾರದು. ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದರೆ ಒಮ್ಮತವನ್ನು ನಿರ್ಮಿಸುವ ಸಾಮರ್ಥ್ಯ. ಸದನದಲ್ಲಿ ಚರ್ಚೆ ಬಿಸಿಯಾಗಬಹುದು, ದೃಷ್ಟಿಕೋನಗಳು ವಿಭಿನ್ನವಾಗಿರಬಹುದು, ಆದರೆ ಅಂತಿಮವಾಗಿ ಗುರಿ ಒಂದೇ ಆಗಿರಬೇಕು” ಎಂದು ತಿಳಿಸಿದರು.
“ಪ್ರಜಾಪ್ರಭುತ್ವದ ಆತ್ಮವೆಂದರೆ ಸದನಗಳಲ್ಲಿ ಅರ್ಥಪೂರ್ಣ ಚರ್ಚೆಗಳು. ಚರ್ಚೆಯ ಉದ್ದೇಶವು ಒಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಮಾತ್ರವಲ್ಲ, ಅದನ್ನು ಪರಿಹಾರದತ್ತ ಕೊಂಡೊಯ್ಯುವುದು. ವಿರೋಧ ಪಕ್ಷ ಮತ್ತು ಆಡಳಿತ ಪಕ್ಷವು ಅರ್ಥಪೂರ್ಣ ವಾದಗಳ ಆಧಾರದ ಮೇಲೆ ಚರ್ಚಿಸಿದಾಗ, ಅದು ನೀತಿ ನಿರೂಪಣೆಯನ್ನು ಬಲವಾದ, ಹೆಚ್ಚು ನ್ಯಾಯಯುತ ಮತ್ತು ದೂರದೃಷ್ಟಿಯತ್ತ ಕೊಂಡೊಯ್ಯುತ್ತದೆ. ಈ ಪ್ರಕ್ರಿಯೆಯು ಸಾರ್ವಜನಿಕ ವಿಶ್ವಾಸವನ್ನು ಬೆಳೆಸುತ್ತದೆ. ತಮ್ಮ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಹಿತಾಸಕ್ತಿ, ವೈಯಕ್ತಿಕ ಅಥವಾ ಪಕ್ಷದ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಇದೆ” ಎಂದು ತಿಳಿಸಿದರು.
“ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಯುವಜನರ ಉನ್ನತಿ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗಳು ಬಲಗೊಳ್ಳಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಹೊಸ ತಂತ್ರಜ್ಞಾನ, ಜಾಗತೀಕರಣ, ಶಿಕ್ಷಣದ ಹರಡುವಿಕೆ ಮತ್ತು ಸಾಮಾಜಿಕ ಬದಲಾವಣೆಯು ಆಕಾಂಕ್ಷೆಗಳನ್ನು ಇನ್ನಷ್ಟು ವ್ಯಾಪಕಗೊಳಿಸಿದೆ. ಶಾಸಕಾಂಗದಲ್ಲಿ ಸುಸಂಘಟಿತ ಗಂಭೀರತೆ, ಸಭ್ಯತೆ ಮತ್ತು ತಾಳ್ಮೆಯೊಂದಿಗೆ ಅರ್ಥಪೂರ್ಣ ಚರ್ಚೆಗಳ ಮೂಲಕ ಮಾತ್ರ ಈ ಆಕಾಂಕ್ಷೆಗಳ ಈಡೇರಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
“ಕಾನೂನುಗಳನ್ನು ರಚಿಸುವುದರ ಜೊತೆಗೆ, ವಿಧಾನಮಂಡಲವು ಸಾರ್ವಜನಿಕ ಆಕಾಂಕ್ಷೆಗಳ ದೇವಾಲಯವಾಗಿದೆ. ಇಲ್ಲಿನ ಕೇಳುವ ಪ್ರತಿಯೊಂದು ಧ್ವನಿಯು ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಿಧಾನಮಂಡಲದದಲ್ಲಿ ನಡೆಯುವುದನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ವಿಧಾನಮಂಡಲದ ಪ್ರತಿಯೊಂದು ಚರ್ಚೆ, ಪ್ರತಿಯೊಂದು ನಿರ್ಧಾರವು ನಾಗರಿಕರು ಮತ್ತು ಸಮಾಜದ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ಚರ್ಚೆಗಳನ್ನು ರಚನಾತ್ಮಕವಾಗಿ ಮಾಡುಬೇಕು ಹಾಗೂ ಸಾರ್ವಜನಿಕರ ನಿರೀಕ್ಷೆಗಳನ್ನು ಗೌರವಿಸುತ್ತಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಇದರಿಂದ ನಾಗರಿಕರ ನಂಬಿಕೆ ಹೆಚ್ಚಾಗುತ್ತದೆ” ಎಂದು ಮನವಿ ಮಾಡಿದರು.
“ಸಾರ್ವಜನಿಕ ಕಾಳಜಿಗಳನ್ನು ಪ್ರತಿಬಿಂಬಿಸುವ, ಹೊಣೆಗಾರಿಕೆಯನ್ನು ಉತ್ತೇಜಿಸುವ ಮತ್ತು ಸಂಸದೀಯ ಸಂಸ್ಥೆಗಳಲ್ಲಿ ವಿಶ್ವಾಸವನ್ನು ಬಲಪಡಿಸುವ ರಚನಾತ್ಮಕ ಚರ್ಚೆಗಳ ಅಗತ್ಯವನ್ನು ಈ ವಿಷಯದಲ್ಲಿ ಕಾಣಬಹುದು. ಭಾರತವು ಶತಮಾನಗಳಿಂದ ಸಂವಾದ ಮತ್ತು ಚರ್ಚೆಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಇದು ಭಾರತದ ನೆಲದಲ್ಲಿ ಪ್ರಜಾಪ್ರಭುತ್ವದ ವಿಚಾರಗಳು ಆಳವಾಗಿ ಬೇರೂರಿವೆ ಎಂಬುದಕ್ಕೆ ಪುರಾವೆಯಾಗಿದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ವಿಚಾರಗಳು ನಮ್ಮ ಸಂಸದೀಯ ಕಾರ್ಯಕ್ಕೆ ಹೊಸ ದಿಕ್ಕನ್ನು ನೀಡುತ್ತವೆ ಮತ್ತು ಭಾರತ ಸೇರಿದಂತೆ ಕಾಮನ್ವೆಲ್ತ್ನ ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತವೆ. ವಿಧಾನಮಂಡಲ ಸಾರ್ವಜನಿಕ ನಂಬಿಕೆಯ ಜ್ವಾಲೆಯನ್ನು ಬೆಳಗಿಸುವ ಪವಿತ್ರ ಸ್ಥಳ. ನಮ್ಮ ಚರ್ಚೆಗಳು ರಾಷ್ಟ್ರದ ದಿಕ್ಕನ್ನು ನಿರ್ಧರಿಸಲಿ ಮತ್ತು ಸಂವಾದಗಳು ಜನರ ಆಕಾಂಕ್ಷೆಗಳನ್ನು ಈಡೇರಿಸುವ ಮಾರ್ಗಗಳನ್ನು ಕಂಡುಕೊಳ್ಳಲಿ. ಇದು ನಮ್ಮ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತ್ತು ಹೆಮ್ಮೆ” ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)