ಸರ್ಕಾರವೇ ಕಾನೂನು ಉಲ್ಲಂಘಿಸಿದೆ,ಪೊಲೀಸರ ಅಮಾನತು ಮಾಡಿದೆ: ಆರ್.ಅಶೋಕ
- by Suddi Team
- June 8, 2025
- 108 Views
ಬೆಂಗಳೂರು:ಕಾಲ್ತುಳಿತದ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘಿಸಿದೆ. ಈ ಮೂಲಕ ಸರ್ಕಾರವೇ ಕಾನೂನು ಮೀರಿದೆ,ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರ್ಕಾರವೇ ಕಾನೂನು ಉಲ್ಲಂಘಿಸಿದೆ ಕೊನೆಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದ ಗಾಂಧಿಪ್ರತಿಮೆ ಎದುರು ಧರಣಿ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಕ್ತಿಗಳ ತಿಕ್ಕಾಟ ಇಲ್ಲದಿದ್ದರೆ ವಿದ್ಯಾರ್ಥಿಗಳು ಸಾಯುತ್ತಿರಲಿಲ್ಲ. ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕಿದ್ದವರು ಕಪ್ ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ 8 ಮಕ್ಕಳು ಸತ್ತಿದ್ದರು. ಆ ನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕ, ಕಲ್ಲಿನ ಹೃದಯದವರು ಎಂದು ದೂರಿದರು.
ಕಾನೂನನ್ನು ಪೊಲೀಸ್ ಅಧಿಕಾರಿಗಳು ಜಾರಿ ಮಾಡುತ್ತಾರೆ. 4-6-2025 ರಂದು ವಿಧಾನಸೌಧದ ಪೊಲೀಸರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನು ನಿಷೇಧಿಸಬೇಕು ಎಂದೂ ಹೇಳಲಾಗಿದೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರ್ಕಾರವೇ ಕಾನೂನು ಉಲ್ಲಂಘಿಸಿದೆ ಎಂದು ಆಕ್ರೋಶ ಹೊರಹಾಕಿದರು.
ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬದವರು ಬರಬಾರದು ಎಂದು ಕೂಡ ಪೊಲೀಸರು ಸೂಚಿಸಿದ್ದರು. ಆದರೆ ಅಲ್ಲಿ ಎಲ್ಲರ ಕುಟುಂಬದವರು ಇದ್ದರು. ಸಿಸಿಟಿವಿ ಕ್ಯಾಮರಾ ಬೇಕೆಂದು ಹೇಳಿದ್ದರೂ ಅದನ್ನು ಪಾಲಿಸಿಲ್ಲ. ಡ್ರೋನ್ ಗೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಈ ಎಲ್ಲ ಸೂಚನೆಗಳನ್ನು ಸರ್ಕಾರ ಹರಿದು ಬಿಸಾಡಿದೆ. ವೇದಿಕೆಯಲ್ಲಿ 20-30 ಜನರು ಮಾತ್ರ ಇರಬೇಕು ಎಂಬ ಸೂಚನೆಯನ್ನು ಸಂಪೂರ್ಣ ಉಲ್ಲಂಘಿಸಿದ್ದು, 11 ಆಟಗಾರರು ಸೇರಿದಂತೆ ಒಟ್ಟು 200 ಜನರು ವೇದಿಕೆಯಲ್ಲಿದ್ದರು. ಇದು ಸರ್ಕಾರಿ ಕಾರ್ಯಕ್ರಮ ಎಂದು ಆದೇಶ ಪತ್ರದಲ್ಲಿದ್ದರೂ, ಸಿಎಂ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮ ಅಲ್ಲ ಎಂದಿದ್ದಾರೆ ಎಂದು ದೂರಿದರು.
ಇಷ್ಟೆಲ್ಲ ಕಾನೂನು ಉಲ್ಲಂಘನೆ ಮಾಡಿದ್ದರೂ, ಕೊನೆಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ಕ್ರಮ ವಹಿಸಲಾಗಿದೆ. ಠಾಣೆ ಪೊಲೀಸರನ್ನು ಕೂಡ ಅಮಾನತು ಮಾಡಿದ್ದಾರೆ ಎಂದರು.
ವಿಶೇಷ ಅಧಿವೇಶನ ಕರೆಯಿರಿ:
ಸರ್ಕಾರ ಮಾಡಿದ ತಪ್ಪುಗಳ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು. ಮೂರು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾವ ತನಿಖೆ ನಿಜ ಎಂದು ಗೊತ್ತಾಗಿಲ್ಲ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕಿದೆ. ಈ ಕುರಿತು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಪಾಪರ್ ಆಗಿಲ್ಲ ಎಂದಾದರೆ 1 ಕೋಟಿ ರೂ. ಪರಿಹಾರ ನೀಡಲಿ. ನಾವೆಲ್ಲರೂ ಒಂದು ತಿಂಗಳ ಸಂಬಳವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಿದ್ದೇವೆ ಎಂದು ತಿಳಿಸಿದರು.
ಕಪ್ ಗೆಲ್ಲುವುದು ಹೊಸ ಸಂಗತಿಯಲ್ಲ. ಪ್ರತಿ ರಾಜ್ಯಗಳ ತಂಡ ಕಪ್ ಗೆದ್ದಾಗಲೂ ಈ ರೀತಿಯ ಘಟನೆ ನಡೆದಿಲ್ಲ. ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹೋಗಿ ಪ್ರಚಾರ ಪಡೆದಿಲ್ಲ ಎಂದರು.
Related Articles
Thank you for your comment. It is awaiting moderation.


Comments (0)