ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಅಪಪ್ರಚಾರದ ಮುಖವಾಡ ಕಳಚಿದೆ, ನಾಟಕ ಕಂಪನಿ ಮುಚ್ಚಿದೆ:ರಾಮಲಿಂಗಾರೆಡ್ಡಿ
- by Suddi Team
- September 27, 2025
- 28 Views

ಬೆಂಗಳೂರು: ನಾವು ಸತ್ಯದ ಮಾರ್ಗ ತಲುಪಿದ್ದೇವೆ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಮತ್ತು ಅವರ ‘ರಾಜಕೀಯ ಪೋಷಕರು’ ಶೀಘ್ರದಲ್ಲೇ ಜನರ ಮುಂದೆ ಬೆತ್ತಲಾಗಲಿದ್ದಾರೆ. ಬಿಜೆಪಿಯವರೇ, ಧರ್ಮಸ್ಥಳದ ವಿಚಾರದಲ್ಲಿ ನಿಮ್ಮ ದುರುದ್ದೇಶಪೂರಿತ ಸುಳ್ಳುಗಳು ಬಟಾ ಬಯಲಾಗಿವೆ ಈಗಲಾದರೂ ರಾಜ್ಯದ ಜನತೆಯ ಕ್ಷಮೆ ಕೇಳುತ್ತೀರಾ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಾರಿಗೆ ಸಚಿವರು,ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಬಿಜೆಪಿಯ ಅಪಪ್ರಚಾರದ ಮುಖವಾಡ ಕಳಚಿದೆ, ನಾಟಕ ಕಂಪನಿ ಮುಚ್ಚಿದೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ವಿಪಕ್ಷ ನಾಯಕ ಆರ್. ಅಶೋಕ್,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ,ಶೋಭಾ ಕರದ್ಲಾಂಜೆ,ಎಂಎಲ್ಸಿ ಸಿ.ಟಿ ರವಿ ಅವರೇ ಈಗಲಾದರೂ ರಾಜ್ಯದ ಜನರ ಕ್ಷಮೆ ಕೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಸತ್ಯಾಂಶಗಳು:
ಸರ್ಕಾರ ನ್ಯಾಯಾಲಯದ ಆದೇಶದಂತೆ SIT ರಚಿಸಿದಾಗ, ಮೊದಲು ಸ್ವಾಗತಿಸಿ, ಅದರಲ್ಲೂ ಕ್ರೆಡಿಟ್ ಪಡೆಯಲು ಇಲ್ಲದ ಪ್ರಯತ್ನ ಮಾಡಿದ್ದು ಬಿ.ಜೆ.ಪಿ.
ತನಿಖೆಯಲ್ಲಿ ತಮ್ಮ ಬೆಂಬಲಿತರ ಹೆಸರುಗಳು ಕೇಳಿಬರುತ್ತಿದ್ದಂತೆ, ತನಿಖೆಯ ದಾರಿ ತಪ್ಪಿಸಲು NIAಗೆ ವಹಿಸಿ ಎಂದು ಕೂಗಾಡಿದರು.
ನೂರಾರು ಕಾರುಗಳಲ್ಲಿ ಧರ್ಮ ಸ್ಥಾಪನೆ ಹೆಸರಿನಲ್ಲಿ ಮೋಜು ಮಸ್ತಿ ಮಾಡಿ ಪ್ರವಾಸ ಮಾಡಿ, ನಾವು ಧರ್ಮಸ್ಥಳದ ಜೊತೆ ಇದ್ದೇವೆ ಎಂಬ ಬೃಹನ್ನಾಟಕ ಮಾಡಿದ್ದಷ್ಟೇ ಬಂದಿದ್ದು.
ಬಿ.ಜೆ.ಪಿಯವರಿಗೆ ಸತ್ಯ ಹೊರಬರುವುದು ಬೇಕಿಲ್ಲ, ರಾಜಕಾರಣ ಮಾಡಲು ವಿಷಯ ಬೇಕು, ಸತ್ಯವನ್ನು ತಿರುಚಿಯಾದರೂ ಸರಿ ರಾಜಕಾರಣ ಮಾಡಬೇಕು, ನಾವು ಇದ್ದೀವಿ ಎಂದು ತೋರಿಸಲು ಒಂದು ವೇದಿಕೆ ಬೇಕು. ಅವರ ಈ ಸ್ಥಿತಿಯು ನಿಜಕ್ಕೂ ಚಿಂತಾಜನಕ.
ದಕ್ಷ ಅಧಿಕಾರಿಗಳು ಸಂಚಿನ ಹಿಂದಿರುವ ಸತ್ಯವನ್ನು ಬಯಲಿಗೆಳೆಯುತ್ತಿದ್ದಾರೆ.
ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರೇ SIT ತನಿಖೆಯನ್ನು ಶ್ಲಾಘಿಸಿ, “ಸತ್ಯ ಹೊರಬರುತ್ತಿದೆ, ಸರ್ಕಾರಕ್ಕೆ ಧನ್ಯವಾದಗಳು” ಎಂದಿದ್ದಾರೆ.
SITಯನ್ನು ವಿರೋಧಿಸಿ ಬೀದಿಗಿಳಿದು ಅಬ್ಬರಿಸಿದ ಬಿಜೆಪಿ ನಾಯಕರು ಈಗೇನು ಹೇಳುತ್ತಾರೆ?
ಕೇವಲ ವಿರೋಧ ಪಕ್ಷದಲ್ಲಿದ್ದೇವೆ ಎಂಬ ಕಾರಣಕ್ಕೆ ಸತ್ಯ-ಸುಳ್ಳುಗಳ ಬಗ್ಗೆ ಅರಿವಿದ್ದರೂ ಸಹ ಸರ್ಕಾರದ ಪ್ರತಿಯೊಂದು ಕ್ರಮವನ್ನು ವಿರೋಧಿಸಲೇಬೇಕೆಂಬ ಧೋರಣೆ ಬಿ.ಜೆ.ಪಿಯವರ ಕೀಳುಮಟ್ಟದ, ಸಂವೇದನಾರಹಿತ ರಾಜಕಾರಣವನ್ನು ಸಾಬೀತುಪಡಿಸಿದೆ.ನಿಮ್ಮ ಆರ್ಭಟಗಳಿಗೆ ನಮ್ಮ ಸರ್ಕಾರ ಜಗ್ಗುವುದಿಲ್ಲ. ಸತ್ಯವನ್ನು ಹೊರತರುವ ಬದ್ಧತೆಯಿಂದ ನಾವು ಹಿಂದೆ ಸರಿಯುವುದಿಲ್ಲ. ಸತ್ಯದ ಮಾರ್ಗ ತಲುಪಿದ್ದೇವೆ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಮತ್ತು ಅವರ ‘ರಾಜಕೀಯ ಪೋಷಕರು’ ಶೀಘ್ರದಲ್ಲೇ ಜನರ ಮುಂದೆ ಬೆತ್ತಲಾಗಲಿದ್ದಾರೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)