ಬೆಂಗಳೂರಿಗೆ ಕಾವೇರಿ ನೀರು ತಂದದ್ದು ರಾಮಕೃಷ್ಣ ಹೆಗಡೆ; ಡಿಕೆ ಶಿವಕುಮಾರ್

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಬರಲು ಕಾರಣವಾಗಿದ್ದೇ ರಾಮಕೃಷ್ಣ ಹೆಗಡೆ,ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯವನ್ನೂ ಹಾಕಿದ್ದರು ಹಾಗಾಗಿ ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು, “ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಬೇಕು. ಹೀಗಾಗಿ ನಿಮ್ಮೆಲ್ಲರ ಜೊತೆ ಒಂದು ದಿನ ಚರ್ಚೆ ಮಾಡಿ, ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧ” ಎಂದರು.

ರಾಜೀವ್ ಗಾಂಧಿ ಅವರು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಮಾಡಿದಾಗ ಕರ್ನಾಟಕಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರು ಹಾಕಿದ್ದ ಅಡಿಪಾಯ ಅಧ್ಯಯನ ಮಾಡಿದ್ದರು. ಅದರ ಪರಿಣಾಮ ಇಂದು ನಾವು ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಸಾವಿರಾರು ನಾಯಕರನ್ನು ತಯಾರು ಮಾಡುತ್ತಿದ್ದೇವೆ”.”ನಾನು ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನೋಡಿದ್ದೇನೆ. ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ನಡೆದ ಚರ್ಚೆಯಲ್ಲಿ ಹೆಗಡೆ ಅವರು ಮಾಡಿದ ಭಾಷಣ ನಾನು ಕಂಡ ಅತ್ಯುತ್ತಮ ಭಾಷಣಗಳಲ್ಲಿ ಒಂದು. ವೀರೇಂದ್ರ ಪಾಟೀಲರ ಜೊತೆ ಉತ್ತಮ ಸ್ನೇಹ ಹೊಂದಿದ್ದರೂ ಅವರು ತಮ್ಮ ಪಕ್ಷದ ಸಿದ್ಧಾಂತದ ಗೆರೆ ದಾಟಲಿಲ್ಲ” ಎಂದು ಶ್ಲಾಘಿಸಿದರು.

ಬೆಂಗಳೂರು ಜಾಗತಿಕ ನಗರವಾಗಿದೆ. 25 ಲಕ್ಷ ಐಟಿ ಉದ್ಯೋಗಿಗಳು ಇಲ್ಲಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಇಂದು ಈ ಮಟ್ಟಕ್ಕೆ ಬೆಳೆಯಲು ರಾಮಕೃಷ್ಣ ಅವರ ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕೊಟ್ಟ ಅನುಮತಿಯೂ ಒಂದು ಕಾರಣ. ಅದರಿಂದ ಬೆಂಗಳೂರಿನಲ್ಲಿ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿನ ಇಂಜಿನಿಯರ್ ಕಾಲೇಜುಗಳಲ್ಲಿ ಸಜ್ಜನ್ ಜಿಂದಾಲ್ ಸೇರಿದಂತೆ ಅನೇಕ ಉದ್ಯಮಿಗಳು ಹೊರಗಿಂದ ಬಂದು ಇಲ್ಲಿ ಓದಿದರು” ಎಂದರು.

“ಬೆಂಗಳೂರಿಗೆ ಕಾವೇರಿ ನೀರು ಬರಲು ಕಾರಣವಾಗಿದ್ದೇ ರಾಮಕೃಷ್ಣ ಹೆಗಡೆ ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ನಾವು ಈಗ ಆರನೇ ಹಂತದ ಯೋಜನೆಗೆ ಮುಂದಾಗಿದ್ದೇವೆ” ಎಂದು ತಿಳಿಸಿದರು.

Related Articles

Comments (0)

Leave a Comment