ಸಿಎಂ ಬಳಿ ಹಣವಿಲ್ಲ ಎಂದು ತಮಾಷೆಗಾದರೂ ಪರಮೇಶ್ವರ ಸತ್ಯ ಹೇಳಿದ್ದಾರೆ; ಬಸವರಾಜ ಬೊಮ್ಮಾಯಿ
- by Suddi Team
- June 25, 2025
- 165 Views
 
                                                          ಬೆಂಗಳೂರು: ಗೃಹ ಸಚಿವ ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ ಬಳಿ ದುಡ್ಡು ಇಲ್ಲ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಈಗ ತಮಾಷೆಗಾಗಿ ಹೇಳಿದ್ದೆ ಎನ್ನುತ್ತಿದ್ದಾರೆ. ತಮಾಷೆಗಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಶಾಸಕರಿಗೆ ಯಾವುದೇ ಅನುದಾನ ಇಲ್ಲ. ಕೆಲಸ ಮಾಡಲು ಆಗಿಲ್ಲ. ಹೀಗೇ ಆದರೆ, ಇನ್ನೆರಡೂವರೆ ವರ್ಷದಲ್ಲಿ ಜನರ ಬಳಿ ಹೋಗಲು ಆಗುವುದಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಕೆಲಸ ಮಾಡಲು ಪ್ರತಿಯೊಂದಕ್ಕೂ ಭ್ರಷ್ಟಾಚಾರ, ಎಷ್ಟಿಮೇಟ್‌ಗೂ ಭ್ರಷ್ಟಾಚಾರ, ವರ್ಕ್ ಆರ್ಡರ್ ತೆಗೆದುಕೊಳ್ಳಲೂ ಭ್ರಷ್ಟಾಚಾರ. ಕಾಂಗ್ರೆಸ್ ನ ನೀತಿಯಿಂದಾಗಿ ಜನ ತಮ್ಮ ದುಡಿಮೆಯ ಹಣವನ್ನು ಭ್ರಷ್ಟಾಚಾರಕ್ಕೆ ಕೊಡುವ ಪರಿಸ್ಥಿತಿ ಬಂದಿದೆ. ವಿರೋಧ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರದ ವಿರುದ್ದ ದೊಡ್ಡ ಹಂಗಾಮ ಮಾಡಿದ್ದರು. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದೆ ನಡೆದಿದೆ ಇದರಿಂದ ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲರು ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅದನ್ನು ಅವರಿಗೆ ನೇರವಾಗಿಯೇ ಹೇಳಬಹುದಿತ್ತು. ಅವರ ಮಾತು ಸಿಎಂ ಕೇಳುತ್ತಿರಲಿಲ್ಲವೆ? ಪ್ರತಿಪಕ್ಷದವರ ರೀತಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಹೋರಾಟ:
ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡಲು ನಾವೆಲ್ಲ ಸಭೆ ಸೇರಿ ಚರ್ಚೆ ಮಾಡಿ, ಆಯಾ ಪ್ರದೇಶದ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಕ್ರೀಯರಾಗಿದ್ದಾರೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಹೋರಾಟಕ್ಕೆ ಬಂದಾಗ ಸ್ಪೂರ್ತಿ ಬರುತ್ತದೆ. ಅವರು ದೊಡ್ಡ ನಾಯಕರು. ಅವರು ಪ್ರವಾಸ ಮಾಡಿದಾಗಲೆಲ್ಲ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಈಗ ಸ್ವಯಂಪ್ರೇರಿತರಾಗಿ ಪಕ್ಷದ ಸಂಘಟನೆಗೆ ಬಂದಿದ್ದಾರೆ. ಅವರಿಂದ ಪಕ್ಷಕ್ಕೆ ಶಕ್ತಿ ಹೆಚ್ಚಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)