ಅಂದು ನಮಸ್ತೇ ಸದಾ ವತ್ಸಲೇ, ಇಂದು ಕ್ಷಮೆ ಯಾಚನೆ;ಒತ್ತಡಕ್ಕೆ ಮಣಿದ್ರಾ ಡಿಸಿಎಂ?
- by Suddi Team
- August 26, 2025
- 128 Views

ಬೆಂಗಳೂರು:ಸದನದಲ್ಲಿ ಆರ್ಎಸ್ಎಸ್ ಗೀತೆ ಹಾಡಿ ಬಿಜೆಪಿ ನಾಯಕರಿಂದ ಬಹುಪರಾಗ್ ಹಾಡಿಸಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಸ್ವಪಕ್ಷೀಯ ನಾಯಕರ ವಿರೋಧಕ್ಕೆ ಮಣಿದು ಕ್ಷಮೆ ಯಾಚನೆ ಮಾಡಿದ್ದಾರೆ.ನಾನು ತಪ್ಪು ಮಾಡಿಲ್ಲ, ಆದರೂ ನನ್ನ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು, ಇಂಡಿಯಾ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ವಿಧಾನಸಭೆ ಅಧಿವೇಶನ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಕಾಲೆಳೆಯಲು ನಮಸ್ತೆ ಸದಾ ವತ್ಸಲೇ ಮಾತೃಭೂಮೆ ಎಂದು ಆರ್.ಎಸ್.ಎಸ್ ಗೀತೆಯ ಸಾಲುಗಳನ್ನು ಹೇಳಿದ್ದರು ಇದು ವಿಪಕ್ಷ ಸದಸ್ಯರ ಮೆಚ್ಚುಗೆಗೂ ಕಾರಣವಾಗಿತ್ತು, ಬಿಜೆಪಿಯೊಂದಿಗೆ ಡಿಸಿಎಂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ರೀತಿಯ ಚರ್ಚೆ ಹುಟ್ಟುಹಾಕಿತು, ಹಿರಿಯ ಸಚಿವ ಸತೀಶ್ ಜಾರಕಿಹೊಳಿ,ಮಾಜಿ ಸಚಿವ ರಾಜಣ್ಣ, ಬಿಕೆ ಹರಿಪ್ರಸಾದ್ ಸೇರಿ ಹಲವರು ನೇರವಾಗಿಯೇ ಡಿಸಿಎಂ ನಡೆ ಟೀಕಿಸಿದರು. ಹೈಕಮಾಂಡ್ ಅಂಗಳದವರೆಗೂ ಈ ವಿಚಾರವನ್ನ ತರುವಲ್ಲಿ ಡಿಕೆ ಶಿವಕುಮಾರ್ ವಿರೋಧಿ ಬಣದವರು ಸಫಲರಾದರು.ಸದಾ ಸಂಘ ಪರಿವಾರ ಟೀಕಿಸಿಕೊಂಡೇ ರಾಜಕಾರಣ ಮಾಡುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಹೇಳಿಕೆ ಹೈಕಮಾಂಡ್ ನಾಯಕರಲ್ಲಿಯೂ ಅತೃಪ್ತಿ ಮೂಡಿಸಿತು,ಇಂಡಿ ಮಿತ್ರಪಕ್ಷಗಳಿಗೂ ಇದು ಅಸಮಧಾನ ಮೂಡಿಸಿದೆ ಇದರ ಅರಿವಾಗುತ್ತಿದ್ದಂತೆಯೇ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಮತ್ತು ಇಂಡಿ ಕೂಟದ ನಾಯಕರ ಅಸಮಧಾನ ಶಮನಕ್ಕೆ ಯತ್ನಿಸಿದ್ದಾರೆ.
ಡಿಕೆ ಶಿವಕುಮಾರ್ ನೀಡಿದ ಸ್ಪಷ್ಟೀಕರಣ:
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,“ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎನ್ನುತ್ತಲೇ ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳು ಕೂಡ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ ಎಂದು ಸ್ವಪಕ್ಷೀಯ ನಾಯಕರಿಗೂ ಟಕ್ಕರ್ ನೀಡಿದ್ದಾರೆ.
ನನಗೆ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಮಾತನಾಡುವ ಶಕ್ತಿ ಇದೆ. ವಂದೇ ಮಾತರಂ ಬಗ್ಗೆಯೂ ಮಾತನಾಡಬಲ್ಲೇ, ಯಧಾ ಯಧಾಯ ಧರ್ಮಸ್ಯ ಶ್ಲೋಕದ ಬಗ್ಗೆಯೂ ಮಾತನಾಡಬಲ್ಲೆ. ಭಗವದ್ಗೀತೆ, ಚಾಣಕ್ಯ ನೀತಿ ಬಗ್ಗೆ ಮಾತನಾಡಬಲ್ಲೇ. ಸಮಯ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಯಾರಿಗೂ ನೋಯಿಸಲು ಬಯಸುವುದಿಲ್ಲ. ನನ್ನ ಧರ್ಮವನ್ನು ನಾನು ಬಿಡಲು ತಯಾರಿಲ್ಲ. ನಾನು ಹುಟ್ಟಿದ್ದು ಹಿಂದೂವಾಗಿ. ಜೊತೆಗೆ ಕ್ರೈಸ್ತ, ಇಸ್ಲಾಂ, ಜೈನ ಸಿದ್ಧಾಂತದ ಮೇಲೂ ನಂಬಿಕೆ ಹೊಂದಿರುವವನು. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂದು ನಂಬಿರುವವನು ನಾನು. ಸೂರ್ಯ, ಚಂದ್ರ, ಬೆಳಕು, ನೀರಿಗೆ ಜಾತಿ, ಧರ್ಮದ ಬೇಧವಿಲ್ಲ. ಪ್ರವಾದಿ ಮೊಹಮದ್ ಪೈಗಂಬರ್ ಅವರ ದಿವ್ಯವಾಣಿ ಬಗ್ಗೆ, ಬುದ್ಧ-ಬಸವಣ್ಣನ ತತ್ವದ ಬಗ್ಗೆ ಅರಿತಿರುವವನು ನಾನು ಎಂದರು.
“ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಓಹ್ ಗಾಡ್ ಗಿವ್ ಮಿ ಸ್ಟ್ರೇಂತ್ ಟು ಬಿ ಪ್ರೊಟೆಕ್ಟೆಡ್ ಫ್ರಂ ಮೈ ಫ್ರೆಂಡ್ಸ್. ಸೋ ದಟ್ ಐ ಕ್ಯಾನ್ ಟೇಕ್ ಕೇರ್ ಮೈ ಎನಿಮೀಸ್ (ಓ ದೇವರೇ, ನನ್ನ ಸ್ನೇಹಿತರಿಂದ ನನ್ನನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ನನಗೆ ಕೊಡು. ಉಳಿದಂತೆ ನನ್ನ ಶತ್ರುವನ್ನು ನಾನು ನೋಡಿಕೊಳ್ಳುತ್ತೇನೆ) ಎಂಬ ಪ್ಲೇಟೋ ಅವರ ಮಾತಿನ ಮೇಲೆ ನಂಬಿಕೆ ಹೊಂದಿರುವವನು” ಎಂದು ಹೇಳಿದರು.
Related Articles
Thank you for your comment. It is awaiting moderation.
Comments (0)