ಮೋದಿ ಅವರೇ ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಸಿಜೆಐ ಮೇಲಿನ ದಾಳಿಯ ಮೇಲಲ್ಲ, ನಿಮ್ಮದೇ ವಿಚಾರಧಾರೆಯ ವಿರುದ್ಧ; ರಾಮಲಿಂಗಾರೆಡ್ಡಿ

ಬೆಂಗಳೂರು: ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಸಿಜೆಐ ಮೇಲಿನ ದಾಳಿಯ ಮೇಲಲ್ಲ; ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸುವ ನಿಮ್ಮದೇ ವಿಚಾರಧಾರೆಯ ವಿರುದ್ಧ. ಇಲ್ಲವಾದರೆ, ನಿಮ್ಮ 9 ಗಂಟೆಗಳ ತಡವಾದ ಖಂಡನೆ, ಕೇವಲ ರಾಜಕೀಯ ನಾಟಕವಾಗಿ ಉಳಿಯುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೆ ನೀಡಿರುವ ಸಚಿವರು,ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ಮೋದಿ ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು! ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?ಎಂದು ಪ್ರಶ್ನಿಸಿದ್ದಾರೆ.

“ಪ್ರತಿಯೊಬ್ಬ ಭಾರತೀಯನೂ ಕೆರಳಿದ್ದಾನೆ” ಎಂಬುದು ಪ್ರಧಾನಿಯವರ ಮಾತು. ಆದರೆ, ಆ ‘ಪ್ರತಿಯೊಬ್ಬರಲ್ಲಿ’ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವರು, ದೇಶದ ಆಡಳಿತ ನಡೆಸುವ ಕೇಂದ್ರ ಸಚಿವರು, ಮತ್ತು ಅವರದ್ದೇ ಆದ ಬಿಜೆಪಿ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಸೇರಿಲ್ಲವೇ? ಅವರೆಲ್ಲರ ಮೌನ, ಯಾರಿಗೆ ನೀಡುತ್ತಿರುವ ಸಮ್ಮತಿ?ಒಂದೆಡೆ ಪ್ರಧಾನಿಗಳು ತಡವಾಗಿ ಕೆರಳಿದರೆ, ಇನ್ನೊಂದೆಡೆ ಅವರದ್ದೇ ವಿಚಾರಧಾರೆಯ ಬೆಂಬಲಿಗರು ಈ ಹೇಯ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಯ ಬಗ್ಗೆ ಪ್ರಧಾನಿಯವರು ಪ್ರತಿನಿಧಿಸುವ ಪಕ್ಷದ ನಾಯಕರು ತುಟಿ ಬಿಚ್ಚದಿರುವುದು, ಈ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಪ್ರೋತ್ಸಾಹವಲ್ಲವೇ? ಎಂದಿದ್ದಾರೆ.

ಇದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ; ಇದು ಪ್ರಜಾಪ್ರಭುತ್ವದ ಅಡಿಪಾಯವಾದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ. ‘ಮತ ಕಳ್ಳತನ’ದಂತಹ ಆರೋಪಗಳಿಗೆ ಬೀದಿಗಿಳಿದು ಹೋರಾಡುವವರು, ಸಂವಿಧಾನದ ಘನತೆಯನ್ನೇ ಪ್ರಶ್ನಿಸುವಾಗ ‘ಕುಂಭಕರ್ಣ ನಿದ್ರೆ’ಗೆ ಜಾರಿರುವುದರ ಹಿಂದಿನ ಮರ್ಮವೇನು? ನ್ಯಾಯಾಲಯದ ಪಾವಿತ್ರ್ಯತೆಗಿಂತ ರಾಜಕೀಯ ಲಾಭವೇ ಬಿಜೆಪಿಗೆ ಮುಖ್ಯವಾಯಿತೇ?ಎಂದಿದ್ದಾರೆ.

Related Articles

Comments (0)

Leave a Comment