ನನ್ನ ವಿರುದ್ಧ ಇರುವ ದಾಖಲೆಗಳನ್ನು ಜನರ ಮುಂದಿಡಲಿ, ನಾನೂ ಅವರ ದಾಖಲೆಗಳನ್ನು ತೆರೆದಿಡುವೆ; ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಸವಾಲ್

ಬೆಂಗಳೂರು:ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ, ಮಾಧ್ಯಮಗಳೇ ವೇದಿಕೆ ಕಲ್ಪಿಸಲಿ,ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಕುಮಾರಸ್ವಾಮಿ ಅವರ ಷಡ್ಯಂತ್ರ ಹೊಸತೇನಲ್ಲ,ನನ್ನನ್ನು ಜೈಲಿಗೆ ಹಾಕಿಸಲು ಕುಮಾರಸ್ವಾಮಿ ಸಂಕಲ್ಪ ತೊಟ್ಟಿದ್ದಾರೆ,ಹಿಟ್ ಅಂಡ್ ರನ್ ಸಾಕು, ನನ್ನ ವಿರುದ್ಧ ಇರುವ ದಾಖಲೆಗಳನ್ನು ಜನರ ಮುಂದಿಡಲಿ, ನಾನೂ ಅವರ ದಾಖಲೆಗಳನ್ನು ತೆರೆದಿಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ‌

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೀವು ಜೈಲಿಗೆ ಹೋಗುವ ದಿನ ಹತ್ತಿರವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, “ಮೊದಲಿನಿಂದಲೂ ನನ್ನನ್ನು ಜೈಲಿಗೆ ಹಾಕಿಸಲೇಬೇಕು ಎಂದು ಕುಮಾರಸ್ವಾಮಿ ಅವರು ಸಂಕಲ್ಪ ಮಾಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರಬರುತ್ತಿದೆ ಎಂದಿದ್ದಾರೆ. ಹಬ್ಬ ಮುಗಿದ ಬಳಿಕ ಅವರಿಗೆ ಇದರ ಬಗ್ಗೆ ಉತ್ತರ ನೀಡುತ್ತೇನೆ”. “ಕುಮಾರಸ್ವಾಮಿ ಅವರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಕುಟುಂಬ ನನ್ನ ಕುಟುಂಬದ ಮೇಲೆ ನಡೆಸುವ ಷಡ್ಯಂತ್ರ ಹೊಸತಲ್ಲ. ಈ ಹಿಂದೆ ನನ್ನ ತಂಗಿ, ತಮ್ಮ ಸೇರಿದಂತೆ ಎಲ್ಲರ ಮೇಲೂ ಪ್ರಯತ್ನ ಮಾಡಿದ್ದರು. ಇದಕ್ಕೆ ಕೊನೆ ಹಾಡಬೇಕು. ಯಾವುದಾದರೂ ಒಂದು ಪ್ರತಿಷ್ಠಿತ ಮಾಧ್ಯಮದಲ್ಲಿ ಅವರನ್ನು ಹಾಗೂ ನನ್ನನ್ನು ಕರೆಸಿ. ಈ ಹಿಂದೆ ಸಾತನೂರಿನಲ್ಲಿ ಟಿ- 20  ಪಂದ್ಯ ನಡೆದಂತೆ ನಡೆಯಲಿ. ನಾನು ವಿಧಾನಸಭೆಯಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಅವರು ಸಂಸತ್ತಿಗೆ ಹೊರಟು ಹೋದರು. ಅವರ ಬದಲು ಬೇರೆ ನಾಯಕರ ಜೊತೆ ಚರ್ಚೆ ಮಾಡೋಣ ಎಂದರೆ ಅವರ ಪಕ್ಷದಲ್ಲಿ ನಮಗೆ ಸರಿಸಮನಾದ ನಾಯಕರಿಲ್ಲ. ಹೀಗಾಗಿ ಮಧ್ಯಮಗಳೇ ನಮ್ಮ ನಡುವಿನ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ ಎಂದರು.

ಈ ಹಿಂದೆಯೂ ಬಹಳಷ್ಟು ಬಾರಿ ಚರ್ಚೆಗೆ ಆಹ್ವಾನ ನೀಡಿದ್ದೆ, ಈಗಲೂ ಹೇಳುತ್ತಿದ್ದೇನೆ. ಸುಮ್ಮನೇ ಹಿಟ್ ಅಂಡ್ ರನ್ ಮಾಡುವುದಲ್ಲ. ನನ್ನ ವಿರುದ್ಧ ಅವರು ಮಾಡಿರುವ ಆರೋಪಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ. ಅವರ ಕುಟುಂಬದ ಬಗ್ಗೆ ನನ್ನ ಬಳಿ ಇರುವ ಭಂಡಾರದಿಂದ ನಾನು ದಾಖಲೆಗಳನ್ನು ತೆಗೆದು ಇಡುತ್ತೇನೆ, ಅವರು ತಮ್ಮ ಭಂಡಾರದಿಂದ ನನ್ನ ವಿರುದ್ಧ ಇರುವ ದಾಖಲೆಗಳನ್ನು ಜನರ ಮುಂದಿಡಲಿ” ಎಂದು ಕುಟುಕಿದರು.

“ಜೈಲಿಗೆ ಹಾಕುವ ಅಧಿಕಾರ ಇರುವುದು ನ್ಯಾಯಾಧೀಶರಿಗೆ ಮಾತ್ರ. ನನ್ನ ವಿಚಾರದಲ್ಲಿ ಅವರೇ ನ್ಯಾಯಾಧೀಶರಂತೆ ಮಾತನಾಡುತ್ತಿದ್ದಾರೆ. ನ್ಯಾಯದೀಶರಂತೆ ವರ್ತಿಸುತ್ತಿರುವ ಅವರೂ ಕೂಡ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಹೋಗಲು ಸಿದ್ಧ:

ನೆರೆ ಪರಿಹಾರ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಪಡೆಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂಬ ಕುಮಾರಸ್ವಾಮಿ ಅವರ ಸಲಹೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಕೇಂದ್ರದ ಸಚಿವರು. ಅವರ ನೇತೃತ್ವದಲ್ಲೇ, ನಾಯಕತ್ವದಲ್ಲೇ ರಾಜ್ಯದ ನಿಯೋಗ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳ ಬಳಿ ಹೋಗಲು ಸಿದ್ಧ. ಅವರು ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಾರೆ. ನಮ್ಮ ಸಹಕಾರ ಕೇಳಿದ್ದಾರೆ. ಅವರು ಎಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗುತ್ತಾರೋ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧ. ಅಥವಾ ಅವರ ಮಗ ಹೇಳಿದಂತೆ ಅವರದೇ ಜಮೀನಿನಲ್ಲಿ ಕೈಗಾರಿಕೆ ಮಾಡಿದರೂ ಅನುಮತಿ ನೀಡುತ್ತೇವೆ” ಎಂದು ತಿಳಿಸಿದರು.

ನಾನು ಬೆಂಗಳೂರಿನವನು, ನನ್ನ ಆಸ್ತಿ ಬೆಂಗಳೂರಿನಲ್ಲೇ ಇದೆ:

ಬಿಡದಿ ಟೌನ್ ಶಿಪ್ ಮಾಡುತ್ತಿರುವುದು ರಿಯಲ್ ಎಸ್ಟೇಟ್ ಗಾಗಿ ಎಂಬ ಆರೋಪ ಬಗ್ಗೆ ಕೇಳಿದಾಗ, “ರಿಯಲ್ ಎಸ್ಟೇಟ್ ಬಗ್ಗೆ ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ಬೆಂಗಳೂರಿನವನು ನನ್ನ ಆಸ್ತಿ ಬೆಂಗಳೂರು ಜಿಲ್ಲೆಯಲ್ಲೇ ಇದೆ. ನಾನು ಹೊರಗಿನಿಂದ ಬಂದು ಜಮೀನು ತೆಗೆದುಕೊಂಡಿಲ್ಲ” ಎಂದು ಹರಿಹಾಯ್ದರು.

ಕುಮಾರಸ್ವಾಮಿಯೇ ದೂರು ನೀಡಿ ತನಿಖೆ ಮಾಡಿಸಲಿ:

ಬ್ರಾಹ್ಮಣರ ಜಮೀನು ಲೂಟಿ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಈಗಲೂ ಅಧಿಕೃತವಾಗಿ ದೂರು ಕೊಡಿಸಿ, ತನಿಖೆ ಮಾಡಿಸಲಿ. ನನಗೆ ಅಂತಹ ದಾರಿದ್ರ್ಯ ಬಂದಿಲ್ಲ” ಎಂದು ತಿಳಿಸಿದರು.

ನೆರೆ ಪೀಡಿತ ಪ್ರದೇಶಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕೇಳಿದಾಗ, “ಸಂಬಂಧ ಪಟ್ಟ ಎಲ್ಲಾ ಸಚಿವರು ಹೋಗಿದ್ದಾರೆ, ಮುಖ್ಯಮಂತ್ರಿಗಳು ಕೂಡ ಹೋಗಿ ಪರಿಶೀಲನೆ ಮಾಡಿದ್ದಾರೆ” ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕಂಜೆಕ್ಷನ್ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆಯೇ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು, ಕೆಲವು ಉದ್ಯಮಿಗಳು ಬೆಂಗಳೂರಿನ ನಾಗರೀಕರಿಗೆ ಒಳ್ಳೆಯದಾಗಲಿ ಎಂದು  ಹೇಳಿದ್ದಾರೆ. ಬೆಂಗಳೂರಿನ ಬಗ್ಗೆ ಆಸಕ್ತಿ ಇರುವವರು ಕೆಲವು ಸಲಹೆ ನೀಡುತ್ತಾರೆ. ನಾವು ಆ ಸಲಹೆಗಳನ್ನು ಪರಿಶೀಲನೆ ಮಾಡುತ್ತೇವೆ. ಇದನ್ನು ಕೇಂದ್ರ ಬಿಜೆಪಿ ಸರ್ಕಾರದ ಮುಂದಿಟ್ಟಿರುವ ಪ್ರಸ್ತಾಪವಿರಬೇಕು, ನಮ್ಮ ಮುಂದೆ ಇಂತಹ ಯಾವುದೇ ಪ್ರಸ್ತಾಪಗಳಿಲ್ಲ” ಎಂದು ತಿಳಿಸಿದರು.

ನಿಮ್ಮ ಸರ್ಕಾರಿ ನಿವಾಸದ ಮನೆ ಮುಂದೆ ಕಳಪೆ ರಸ್ತೆ ಕಾಮಗಾರಿ ನಡೆಸಿದ್ದು, ಈಗ ಮತ್ತೆ ದುರಸ್ತಿ ಮಾಡಿದ್ದಾರೆ ಎಂದು ಕೇಳಿದಾಗ, “ಬಿಜೆಪಿ ಶಾಸಕರ ಕ್ಷೇತ್ರಗಳ ಎಲ್ಲ ಕಾಮಗಾರಿಗಳೂ ಕಳಪೆಯೇ” ಎಂದು ಹೇಳಿದರು.

ಸಂಪುಟ ಪುನಾರಚನೆಯ ವಿಚಾರವಾಗಿ ಕೆಲವು ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಇರುವವರು ಮಾತನಾಡುತ್ತಾರೆ” ಎಂದರು.

ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯಗಳು:

“ಕರ್ನಾಟಕ ರಾಜ್ಯದ ಮಹಾಜನತೆಗೆ ದಸರಾ ಹಬ್ಬದ ಶುಭಾಶಯಗಳು. ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗುತ್ತಿದೆ. ಸರ್ಕಾರ ಹಾಗೂ ಪಕ್ಷದ ಪರವಾಗಿ ಎಲ್ಲರಿಗೂ ಶುಭ ಕೋರುತ್ತೇನೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಹಬ್ಬ ಆಚರಣೆಗೆ ಚಾಲನೆ ನೀಡಿದ್ದೇವೆ. ಈ ಬಾರಿ 11 ದಿನಗಳ ದಸರಾ ಆಚರಿಸುತ್ತಿದ್ದೇವೆ. ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಆ ದೇವಿಗೆ ವಿವಿಧ ಅಲಂಕಾರ ಮಾಡಿ ಹಬ್ಬ ಆಚರಿಸುತ್ತೇವೆ. ಮಂಗಳವಾರದಂದು ಪಕ್ಷದ ಕಚೇರಿ ಹಾಗೂ ವಿಧಾನಸೌಧದಲ್ಲಿ ಆಯುಧ ಪೂಜೆ ನೆರವೇರಿಸಿದ್ದೇವೆ” ಎಂದು ತಿಳಿಸಿದರು.

ಗಾಯಕ ಜುಬಿನ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿ:

“ದೇಶದ ಪ್ರಖ್ಯಾತ ಸಂಗೀತ ಸಂಯೋಜಕರು, 40 ಭಾಷೆಗಳಲ್ಲಿ ಹಾಡಿರುವ ಗಾಯಕರು, 12 ವಾದ್ಯಗಳನ್ನು ನುಡಿಸಬಲ್ಲ ಕಲಾವಿದರಾದ ಅಸ್ಸಾಂನ ಜುಬಿನ್ ಗಾರ್ಗ್ ಅವರ ಆಕಸ್ಮಿಕ ನಿಧನ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಕ್ಷದ ಪರವಾಗಿ ಪ್ರಾರ್ಥಿಸುತ್ತೇನೆ. ಪಕ್ಷದ ಸೂಚನೆ ಮೇರೆಗೆ ನಾನು ಬುಧವಾರ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಅನೇಕ ಸಾಧನೆ ಮಾಡಿರುವ ಮಹಾನ್ ಕಲಾವಿದರು ನಮ್ಮನ್ನು ಅಗಲಿದ್ದಾರೆ. ಅವರಿಗೆ ಗೌರವ ನೀಡಲಾಗುವುದು” ಎಂದು ತಿಳಿಸಿದರು.

Related Articles

Comments (0)

Leave a Comment