ಮಮತಾ ಸರ್ಕಾರದ ಹಿನ್ನಡೆಯ ಇತಿಹಾಸ ಕಣ್ಣಮುಂದಿದ್ದರೂ ಸುಪ್ರೀಂ ಮೆಟ್ಟೆಲೇರಲು ರಾಜ್ಯ ಸರ್ಕಾರ ಚಿಂತನೆ: ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ಟ್ವಿಸ್ಟ್!
- by Suddi Team
- May 21, 2026
- 3 Views
ಬೆಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯ ಸಂವಿಧಾನದತ್ತವಾದ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರವು ಸರ್ವೋಚ್ಚ ನ್ಯಾಯಾಲಯದ (Supreme Court) ಮೆಟ್ಟೆಲೇರಲು ಗಂಭೀರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಆದರೆ, ಇದೇ ವಿಷಯವಾಗಿ ಈ ಹಿಂದೆ ನೆರೆರಾಜ್ಯ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಇತಿಹಾಸ ಕಣ್ಣಮುಂದಿರುವಾಗಲೇ ಕರ್ನಾಟಕ ಸರ್ಕಾರ ಈ ಸಾಹಸಕ್ಕೆ ಕೈಹಾಕುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ನಡೆದ ಸುದೀರ್ಘ ಸಭೆಯ ಬಳಿಕ ಅವರು ಈ ಮಹತ್ವದ ರಾಜಕೀಯ ಮತ್ತು ಕಾನೂನಾತ್ಮಕ ನಿಲುವನ್ನು ಪ್ರಕಟಿಸಿದರು.
ಬಂಗಾಳದ ಇತಿಹಾಸ ಮರುಕಳಿಸುತ್ತಾ?: ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾದ ಇದೇ ಎಸ್ಐಆರ್ ಪ್ರಕ್ರಿಯೆಯಿಂದಾಗಿ ಬರೋಬ್ಬರಿ 27 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿತ್ತು. ಆಗ ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರವು ಚುನಾವಣಾ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿತ್ತು. ಆದರೆ ನ್ಯಾಯಾಲಯವು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರಿ ಹಿನ್ನಡೆ ನೀಡಿತ್ತು. ಅಂತಿಮವಾಗಿ ಲಕ್ಷಾಂತರ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಂಡಿದ್ದೇ ಅಲ್ಲಿನ ಸರ್ಕಾರದ ಪತನಕ್ಕೆ ಪ್ರಮುಖ ಕಾರಣವಾಗಿತ್ತು ಎನ್ನಲಾಗುತ್ತಿದೆ.
ಅದೇ ಹಾದಿಯಲ್ಲಿ ಕರ್ನಾಟಕ ಸರ್ಕಾರ: ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷಕ್ಕೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದ್ದರೂ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಅದೇ ಹಾದಿಯನ್ನು ಆಯ್ದುಕೊಳ್ಳಲು ಮುಂದಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿನ ಗಂಭೀರ ಲೋಪದೋಷಗಳು ಹಾಗೂ ಆಕ್ಷೇಪಗಳ ಹಿನ್ನೆಲೆಯಲ್ಲಿ ನಾಗರಿಕರ ಹಕ್ಕು ರಕ್ಷಿಸಲು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂಬ ನಿಲುವಿಗೆ ಸರ್ಕಾರ ಬಂದಿದೆ.
ಶೀಘ್ರದಲ್ಲೇ ಅಂತಿಮ ತೀರ್ಮಾನ: ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ, ಎಸ್ಐಆರ್ ಪ್ರಕ್ರಿಯೆಯ ಕಾರ್ಯವೈಖರಿ ಮತ್ತು ಅದರಲ್ಲಿ ಕಾಯ್ದುಕೊಳ್ಳಬೇಕಾದ ಪಾರದರ್ಶಕತೆಗೆ ಸಂಬಂಧಿಸಿದಂತೆ ಮತ್ತಷ್ಟು ವಿವರವಾದ ಕಾನೂನು ಚರ್ಚೆಗಳು ನಡೆಯಬೇಕಿದೆ. ಈ ಎಲ್ಲ ಅಂಶಗಳನ್ನು ಪರಾಮರ್ಶಿಸಿ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
Related Articles
Thank you for your comment. It is awaiting moderation.


Comments (0)