ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ: ಮೋದಿ ಸರ್ಕಾರಕ್ಕೆ ವಿಜಯೇಂದ್ರ ಅಭಿನಂದನೆ

ಬೆಂಗಳೂರು: ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಪರಿಣಾಮವಾಗಿ ಭಾರತವು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಅಭಿನಂದಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಗೆ 11 ವರ್ಷಗಳ ದೇಶಸೇವೆ ಪೂರೈಸಿದ್ದಾರೆ. 11 ವರ್ಷಗಳಿಗೂ ಹೆಚ್ಚು ಕಾಲ ಗುಜರಾತ್ ಮುಖ್ಯಮಂತ್ರಿಗಳಾಗಿ, ತದನಂತರ ದೇಶದ ಪ್ರಧಾನಿಗಳಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅಲ್ಲದೆ ಭಾರತವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದ ಪರಿಣಾಮವಾಗಿ ಕಳೆದ 11 ವರ್ಷಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ನೀಡುತ್ತಿದ್ದು, ಇದರಿಂದ ಭಾರತವು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ವಿವರಿಸಿದರು. ನಮ್ಮ ಎನ್‍ಡಿಎ ಸರಕಾರ ತೆಗೆದುಕೊಂಡ ಡಿಜಿಟಲ್ ಇಂಡಿಯ, ಜನ್‍ಧನ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಮೇಕ್ ಇನ್ ಇಂಡಿಯ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಜಲಜೀವನ್ ಮಿಷನ್, ಸ್ಟಾರ್ಟಪ್ ಇಂಡಿಯ ಸೇರಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ನಿರಂತರವಾಗಿ ದೇಶಕ್ಕೆ ಕೊಟ್ಟಿದ್ದಾರೆ. ಇದರ ಪರಿಣಾಮವಾಗಿ ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಿದರು.

ಮೋದಿ ಅವರು ಕರ್ನಾಟಕ ರಾಜ್ಯಕ್ಕೂ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕಾರ್ಯಕ್ರಮಗಳು, ಹಣಕಾಸಿನ ಸಹಾಯವನ್ನು ನೀಡಿದ್ದಾರೆ. ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ 2014ರಿಂದ ಈಚೆಗೆ ನಮ್ಮ ರಾಜ್ಯದಲ್ಲಿ ರೈಲ್ವೆಗೆ 2,702 ಕೋಟಿ ರೂ. ಹಣವನ್ನು ಅಭಿವೃದ್ಧಿಗಾಗಿ ನೀಡಿದ್ದಾರೆ. ಎನ್‍ಡಿಎ 2 ಅವಧಿಯಲ್ಲಿ ಇಲೆಕ್ಟ್ರಿಫಿಕೇಶನ್ ಸೇರಿ ರೈಲ್ವೆ ಅಭಿವೃದ್ಧಿಗೆ 5 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ವಿವರಿಸಿದರು.

10 ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳನ್ನು ಕೂಡ ನಮ್ಮ ರಾಜ್ಯಕ್ಕೆ ಕೊಡಲಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ- ಅನುದಾನ ನೀಡುತ್ತಿದ್ದಾರೆ ಎನ್ನುತ್ತಾ ರಾಜ್ಯದ ಜನರ ಪರವಾಗಿ ಮೋದಿ ಅವರಿಗೆ ಶುಭಾಶಯ- ಅಭಿನಂದನೆಗಳನ್ನೂ ಸಲ್ಲಿಸಿದರು.

Related Articles

Comments (0)

Leave a Comment