ನನಗೇನಾದರೂ ಆದರೆ ಪ್ರಿಯಾಂಕ್ ಖರ್ಗೆ ಕಾರಣ: ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ನನಗೆ ನಿಜವಾಗಲೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಈ ಸರಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಅದಕ್ಕೆ ಕಾರಣ.ಮುಖ್ಯಮಂತ್ರಿಗಳು ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ಹೊರದೂಡಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನನಗೆ ನಿಜವಾಗಲೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಈ ಸರಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಅದಕ್ಕೆ ಕಾರಣ.ಮುಖ್ಯಮಂತ್ರಿಗಳು ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ಹೊರದೂಡಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು ಎಂದು ಎಚ್ಚರಿಸಿದರು.

ನನ್ನ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ಪೊಲೀಸರು ಅಷ್ಟು ಕಡಿಮೆ ಜನರನ್ನೇ ಹೊರಕ್ಕೆ ಹಾಕಿಲ್ಲ; ಒಬ್ಬ ಗನ್‍ಮ್ಯಾನ್ ಕೊಟ್ಟರೆ, 50 ಜನ ಬಂದರೆ ಅವರೇನು ಮಾಡಲು ಸಾಧ್ಯ? ಅವರನ್ನು ಸಚಿವರನ್ನಾಗಿ ಇಟ್ಟುಕೊಳ್ಳಲೇ ಬೇಕೇ . ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳುತ್ತಲೇ ಬಂದಿದ್ದಾಗಿ ತಿಳಿಸಿದರು.

ನಾನು ನೇರವಾಗಿ ಮಾತನಾಡುವುದು ಅವರಿಗೆ ಹಿತವಾಗಿಲ್ಲ; ಅವರು ಯಾವಾಗ ಜಮೀನು ವಾಪಸ್ ಕೊಟ್ಟರೋ ಆವತ್ತಿನಿಂದ ನನ್ನ ಹಿಂದೆ ಪಿತೂರಿ ಮಾಡುತ್ತಿರುವುದು ನನಗೆ ಗೊತ್ತಿದೆ. ನನ್ನನ್ನು ಮುಗಿಸುವ ತಂತ್ರ ಅವರದು. ಹೇಗಾದರೂ ನನಗೆ ಅಪಮಾನ ಮಾಡಬೇಕೆಂದು ಪ್ರಯತ್ನ ನಡೆದಿದೆ ನಮ್ಮನ್ನು ಮುಗಿಸಲು ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಸತ್ಯ ಹೊರಹಾಕುವ ವಿಚಾರದಲ್ಲಿ ನಾನು ಅವರಿಗೆ ಕಂಟಕವಾಗಿದ್ದೇನೆ ಎಂದು ಅವರಿಗೆ ಅನಿಸಿರಬಹುದು.

ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಹೇಳಿದರು. ಬೈಯುವುದನ್ನು ಕೇಳಿಕೊಂಡು, ಇಂಕ್ ಹಾಕಿದರೆ ಹಾಕಿಸಿಕೊಂಡು, ಮೊಟ್ಟೆ ಒಡೆದರೆ ಒಡೆಸಿಕೊಂಡು ಸಹಕರಿಸಬೇಕಿತ್ತೇ ಎಂದು ಪ್ರಶ್ನಿಸಿದರು.

ಅಲ್ಲಿ ಬಂದಿದ್ದ 25-30 ಜನರನ್ನು ಅಲ್ಲಿಂದ ಪೊಲೀಸರು ದೂಡಲಾಗಿಲ್ಲ; 100ಕ್ಕೂ ಹೆಚ್ಚು ಪೊಲೀಸರಿದ್ದರು. ಗೃಹ ಸಚಿವರು, ಎಡಿಜಿಪಿ, ಎಸ್ಪಿಗೆ ಮಾತನಾಡಿದ್ದೇನೆ. ಹೆಚ್ಚುವರಿ ಎಸ್ಪಿ ಅಲ್ಲೇ ನಿಂತಿದ್ದರು. ಡಿವೈಎಸ್ಪಿ, ಸರ್ಕಲ್ ಇನ್‍ಸ್ಪೆಕ್ಟರ್, ನಾಲ್ಕೈದು ಜನ ಇನ್‍ಸ್ಪೆಕ್ಟರ್‍ಗಳಿದ್ದರೂ ನಮ್ಮನ್ನು ಹೊರಕ್ಕೆ ಕಳುಹಿಸಲಿಲ್ಲ. ಬಹುಶಃ ಅವರಿಗಿಂತ ಇವರೇ ನಮ್ಮನ್ನು ಬಂಧನದಲ್ಲಿ ಇಟ್ಟಂತಿತ್ತು ಎಂದು ಟೀಕಿಸಿದರು.

ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು?

ಈ ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು? ಮಲ್ಲಿಕಾರ್ಜುನ ಖರ್ಗೆಯವರು. ಇದಕ್ಕೆ ಇವತ್ತಿಗೂ ದಾಖಲೆ ಇದೆ. ಪ್ರಿಯಾಂಕ್ ಖರ್ಗೆಯವರು ಮಾತು ಮಾತಿಗೆ ಆರೆಸ್ಸೆಸ್ ಚಡ್ಡಿಯವರು ಎನ್ನುತ್ತಾರೆ. ಇದು ನಮಗೆ ಅವಮಾನ ಅಲ್ಲವೇ ಎಂದು ಕೇಳಿದರು. ಇದೆಲ್ಲ ನೀವು ಮಾಡಬಹುದು. ನಾವೊಂದು ಗಾದೆ ಹೇಳಿದರೆ ನಿಮಗೆ ಚುಚ್ಚುತ್ತದೆಯೇ ಎಂದರು.

ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ಇವರಿಗೆ ಪದ್ಮಭೂಷಣಕ್ಕೆ ಶಿಫಾರಸು ಮಾಡಬೇಕೇ ಎಂದು ಇವತ್ತು ಕೇಳಿದ್ದಾರೆ. ನಮ್ಮ ಕ್ಷೇತ್ರದಿಂದ ಹಾಗೇ ಕಳಿಸಬೇಕೇ ಎಂದು ಕೇಳಿದ್ದಾರೆ. ಅಂದರೆ ಪ್ರಾಣ ತೆಗೆದು ಕಳಿಸುತ್ತಿದ್ದರೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆಯನ್ನು ಮುಂದಿಟ್ಟರು.

ನಾನು ಸತ್ಯವನ್ನೇ ಹೇಳುವವ. ತಪ್ಪಿದ್ದರೆ, ಅದು ನನ್ನ ಗಮನಕ್ಕೆ ಬಂದರೆ ನಾನು ಹೋರಾಟ ಮಾಡುವವ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಿ ಅವರಿಗೆ ವಿಷಯ ತಿಳಿಸಿ ಇವೆಲ್ಲ ಮಾಡುತ್ತಿದ್ದೇನೆ ಎಂದು ಹೇಳಿದರು. ನಮ್ಮ ಪಕ್ಷದ್ದು ಸಂಘಟಿತ ಹೋರಾಟ. ಡಿ.ಜಿ, ಗೃಹ ಸಚಿವ, ಮುಖ್ಯಮಂತ್ರಿಗಳಿಗೆ ದೂರು ಕೊಡಲಿದ್ದೇವೆ. ಕೇಂದ್ರದ ಗೃಹ ಸಚಿವರಿಗೂ ಮನವಿ ಕಳುಹಿಸಲಿದ್ದೇವೆ ಎಂದು ತಿಳಿಸಿದರು.

5 ತಾಸು ನನ್ನನ್ನು ತಡೆಹಿಡಿದಿದ್ದೀರಿ. ಇಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ಸರಕಾರ ಇದ್ದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದರು. ಅವರು ಕೊಡಗಿಗೆ ಹೋಗಿದ್ದರು. ಚಲಿಸುವ ಕಾರಿಗೆ ಯಾರೋ ಒಬ್ಬ ಹುಡುಗ ಮೊಟ್ಟೆ ಬಿಸಾಕಿದ್ದ. ನಮ್ಮನ್ನು ಎಷ್ಟೊಂದು ಮಾತನಾಡಿದ್ದರು ಎಂದು ಗಮನ ಸೆಳೆದರು. ನಾನು ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್, ನನಗೇನು ಗೌರವ ಇಲ್ಲವೇ? ಪೊಲೀಸರು ಏನು ಮಾಡುತ್ತೀರಿ ಎಂದು ಕೇಳಿದ್ದರು ಎಂದರು. ಈಗ ಅಶೋಕ್, ನನಗಾದರೆ ನಿಮಗೇನೂ ಅನಿಸುವುದಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಮೂಕಪ್ರೇಕ್ಷಕರಾಗಿದ್ದ ಪೊಲೀಸ್ ಅಧಿಕಾರಿಗಳು:

ನನ್ನ ಮೇಲೆ ಹಾಕಲು ಇಂಕ್ ತಂದಿದ್ದರು. ಬಳಿಕ ಕಾರಿನ ಮೇಲೆ ಹಾಕಿದ್ದಾರೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.ನಮ್ಮವರು 400- 500 ಜನರಿದ್ದು ಅವರನ್ನು ಹತ್ತಿರ ಬರದಂತೆ ತಡೆದರು. ಇವರನ್ನು ಮಾತ್ರ ಕೂಗಾಟಕ್ಕೆ ಬಿಟ್ಟಿದ್ದರು. ಕುಪಿತನಾಗಿ ನಾನು ರಕ್ಷಣೆ ಕೊಡುವುದಾದರೆ ಕೊಡಿ; ನಾನು ಹೋಗುವುದಾಗಿ ಹೇಳಿ ಹೊರಬಂದೆ. ಆಗ, ನಮ್ಮನ್ನು ಕರೆತಂದು ಯಾದಗಿರಿಗೆ ಹೋಗಲು ಗಡಿಭಾಗದಿಂದ ಆಚೆಗೆ ಬಿಟ್ಟರು. ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ಮಾರಣಾಂತಿಕ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದರು.

ನಮ್ಮ ಪದಾಧಿಕಾರಿಯನ್ನು ತಳ್ಳಾಡಿ, ಬಟ್ಟೆ ಹರಿದಿದ್ದಾರೆ…

ನಮ್ಮ ಪಕ್ಷದ ಎಸ್ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಅವರು ನನ್ನನ್ನು ನೋಡಲು ಬಂದಿದ್ದರು. ಅವರನ್ನು ತಳ್ಳಾಡಿ ಬಟ್ಟೆ ಹರಿದಿದ್ದಾರೆ. ಅವರನ್ನು ರಾತ್ರಿ 3 ಗಂಟೆ ವರೆಗೆ ಒಂದು ಕಡೆ ಕೂಡಿ ಹಾಕಿದ್ದಾರೆ; ಒದೆ ತಿಂದವರೂ ಅವರೇ, ಅವರ ಮೇಲೇ ದೂರು ನೀಡುವುದಾಗಿ ಹೆದರಿಸಿದ್ದಾರೆ ಎಂದು ವಿವರಿಸಿದರು.

Related Articles

Comments (0)

Leave a Comment