ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ; ಡಿಕೆಶಿ ವಿರುದ್ಧ ಎಚ್ಡಿಕೆ ವಾಗ್ದಾಳಿ
- by Suddi Team
- June 20, 2025
- 234 Views

ಬೆಂಗಳೂರು: “ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಬಟ್ಟೆ ಹೊಲಿಸಿಕೊಳ್ಳುವಷ್ಟು ದಾರಿದ್ರ್ಯವನ್ನು ಈ ನಾಡಿನ ಜನತೆ ನನಗೆ ಕೊಟ್ಟಿಲ್ಲ. ದಾರಿದ್ರ್ಯ ಇರುವುದು ಅವರಿಗೆ, ಮನುಷ್ಯತ್ವದ ದಾರಿದ್ರ್ಯ ಅವರಿಗಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ಕ್ಕೆ ಜೆಡಿಎಸ್-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆ ಹೊಲಿಸಿಕೋಡ್ತೀನಿ ಎಂದು ಡಿಸಿಎಂ ಡಿಕೆಶಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು, “ನನಗೆ ಅಂತಹ ದಾರಿದ್ರ್ಯ ಇನ್ನೂ ಬಂದಿಲ್ಲ. ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವಷ್ಟು ದಾರಿದ್ರ್ಯವನ್ನು ಈ ನಾಡಿನ ಜನತೆ ನನಗೆ ಕೊಟ್ಟಿಲ್ಲ. ದಾರಿದ್ರ್ಯ ಇರುವುದು ಅವರಿಗೆ. ಮನುಷ್ಯತ್ವದ ದಾರಿದ್ರ್ಯ ಅವರಿಗೆ ಇದೆ. ಜನರಿಂದ ಕೊಳ್ಳೆ ಹೊಡೆದ ಆ ಪಾಪದ ಹಣದಿಂದ ನಾನು ಬಟ್ಟೆ ಹೊಲಿಸಿಕೊಳ್ಳಬೇಕಾ? ನನಗೆ ಬಟ್ಟೆ ಬೇಕಾದರೆ ನಾಡಿನ ಜನರಿದ್ದಾರೆ, ನನ್ನನ್ನು ಇಲ್ಲಿಯವರೆಗೂ ಬೆಳೆಸಿರುವ ಅವರೇ ತಂದು ಕೊಡುತ್ತಾರೆ. ಆ ವ್ಯಕ್ತಿಯ ಪಾಪದ ಹಣ, ಲೂಟಿ ಹೊಡೆದಿರುವ ಹಣದಿಂದ ಬಟ್ಟೆ ತರಿಸಿಕೊಳ್ಳಬೇಕಾ?” ಎಂದು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕೀಯ ದ್ವೇಷ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಆದರೆ, ಇವರು ಮಾಡುತ್ತಿರುವುದು ಏನು? ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಇಟ್ಟುಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಭೂಮಿ ವಿಷಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದೇನೆ:
ಕೇತಗಾನಹಳ್ಳಿ ಭೂಮಿ ವಿಷಯಕ್ಕೆ ಸಂಬಂಧಿಸಿ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನಾನು ಮೊದಲೇ ಹೇಳಿದ್ದೇನೆ. ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು. ಭೂಮಿ ತೆರವಿಗೆ ರಚಿಸಿಲಾಗಿರುವ ಎಸ್ಐಟಿಗೆ ಹೈಕೋರ್ಟ್ ತಡೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು 40 ವರ್ಷಗಳ ಹಿಂದೆ ಖರೀದಿ ಮಾಡಿದ ಭೂಮಿ. ಅಲ್ಲಿ ಯಾವುದೇ ರೀತಿಯ ಒತ್ತುವರಿ ಆಗಿಲ್ಲ. ಸರ್ಕಾರ ರಾಜಕೀಯ ದ್ವೇಷ ಮಾಡಿಕೊಂಡು ಹೊರಟಿದೆ. ಅದು ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ ಎಂದರು.
Related Articles
Thank you for your comment. It is awaiting moderation.
Comments (0)