ನನ್ನ ಬದುಕಿನಲ್ಲಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ; ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ನನ್ನ ಬದುಕಿನಲ್ಲಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ. ಕೆಲವರು ಟೀಕೆ ಮಾಡುತ್ತಾರೆ ಮಾಡಲಿ. ಟೀಕೆಗಳು ಸಾಯುತ್ತವೆ ಆದರೆ ಮಾಡಿದ ಕೆಲಸಗಳು ಉಳಿಯುತ್ತವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಚಿತ್ರಕಲಾ ಪರಿಷತ್ ನಲ್ಲಿ ಮಾತನಾಡಿದ ಅವರು,”ಬಹಳ ಉತ್ಸಾಹದಿಂದ ಬೆಂಗಳೂರು ನಾಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಬೆಂಗಳೂರಿನ ಮೂಲ ಸೌಕರ್ಯ ವಿಚಾರವಾಗಿ ಅನೇಕರು ಟೀಕೆ ಮಾಡುತ್ತಿದ್ದಾರೆ. ಬೆಂಗಳೂರು ಯೋಜಿತ ನಗರವಲ್ಲ ಆದರೂ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರವೂ ಕೆಲಸ ಮಾಡಬೇಕು. ಅದಕ್ಕೆ ಜನರು, ವಿರೋಧ ಪಕ್ಷಗಳು ಸಹಕಾರ ನೀಡಬೇಕು. ಕೇವಲ ಟೀಕೆ ಮಾಡಿದರೆ ಪ್ರಯೋಜನವಿಲ್ಲ. ತಪ್ಪು ಹುಡುಕುವುದು ಬಹಳ ಸುಲಭ” ಎಂದು ತಿಳಿಸಿದರು.

“ನನ್ನ ಆರನೇ ವಯಸ್ಸಿನಿಂದ ನಾನು ಬೆಂಗಳೂರಿನಲ್ಲೇ ಇದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಇಲ್ಲಿನ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ನಾನು ಅನೇಕ ಪ್ರಯತ್ನ ಮಾಡುತ್ತಿದ್ದು, ಇನ್ನು ಸರಿಯಾಗಿ ಯಶಸ್ಸು ಸಾಧಿಸಲು ಆಗುತ್ತಿಲ್ಲ. ಕಸದ ವಿಚಾರದಲ್ಲಿ ಅಷ್ಟು ದೊಡ್ಡ ಮಾಫಿಯಾ ಇದೆ” ಎಂದರು.

“ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.14 ಕೋಟಿ ವಾಹನಗಳಿವೆ. ಹಳೆ ಕಾಲದ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ. ಈಗಿನ ಕಾನೂನು ಪ್ರಕಾರ ಭೂಸ್ವಾಧೀನ ಮಾಡಿಕೊಂಡರೆ ಆ ಆಸ್ತಿ ಮೌಲ್ಯಕ್ಕಿಂತ ದುಪ್ಪಟ್ಟು ಪರಿಹಾರ ನೀಡಬೇಕು ಎಂದರು.

“ಇಂಧನ ಸಚಿವನಾಗಿದ್ದಾಗ ನಮ್ಮವರೇ ಟೀಕೆ ಮಾಡಿದರೂ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಿದೆ. ನಾನು ಅಧಿಕಾರದಿಂದ ಕೆಳಗೆ ಇಳಿಯುವಾಗ ರಾಜ್ಯದಲ್ಲಿ 24 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಯಲಹಂಕದಲ್ಲಿ 345 ಮೆ.ವ್ಯಾ. ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ಪೆರಿಫರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿದ್ದೇವೆ. ಅದರ ಜೊತೆಗೆ ಎರಡು ಟನಲ್ ರಸ್ತೆ ಮಾಡಲು ಮುಂದಾಗಿದ್ದೇವೆ. 112ಕಿ.ಮೀ ಎಲಿವೆಟೆಡ್ ಕಾರಿಡಾರ್, 47 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ, ಮೆಟ್ರೋ ವಿಸ್ತರಣೆ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಯೋಜನೆ ರೂಪಿಸಲಾಗಿದೆ” ಎಂದರು.

ಬೆಂಗಳೂರಿನಲ್ಲಿ ಸಂಪನ್ಮೂಲ ಸೋರಿಕೆ ತಡೆಯಲು ಮುಂದಾಗಿದ್ದೇವೆ. ಇ ಖಾತಾ ಮೂಲಕ ಎಲ್ಲಾ ಆಸ್ತಿಗಳ ದಾಖಲೆ ಡಿಜಿಟಲ್ ಮಾಡಲಾಗುತ್ತಿದೆ. ಆಮೂಲಕ ಎಲ್ಲವನ್ನು ಸುವ್ಯವಸ್ಥೆಯಡಿ ತರಲಾಗುತ್ತಿದೆ ಎಂದರು.

Related Articles

Comments (0)

Leave a Comment