ಐದಲ್ಲ ಐವತ್ತು ಗ್ಯಾರಂಟಿ ನೀಡಿ ಆದರೆ ನೆರೆಹಾನಿ ಪರಿಹಾರ ನೀಡಿ; ಅಶೋಕ್
- by Suddi Team
- October 4, 2025
- 28 Views

ವಿಜಯಪುರ: ರಾಜ್ಯ ಸರ್ಕಾರ ಐದಲ್ಲ, ಐವತ್ತು ಗ್ಯಾರಂಟಿಗಳನ್ನು ನೀಡಲಿ. ಆದರೆ ಆ ಹೆಸರಲ್ಲಿ ಪರಿಹಾರ ನೀಡದೇ ಇರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ನೆರೆಹಾನಿ ಪ್ರದೇಶದಲ್ಲಿ ಪ್ರತಿ ಎಕರೆಗೆ 25,000 ರೂ. ಪರಿಹಾರ ಹಾಗೂ ಮನೆ ಕಟ್ಟಿಸಲು 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವತಿಯಿಂದ ಉತ್ತರ ಕರ್ನಾಟಕದಲ್ಲಿ ಎರಡು ದಿನಗಳಿಂದ ಮಳೆ ಹಾನಿ ಪರಿಶೀಲನೆ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದಿಂದ ಯಾರೂ ಬಂದು ಪರಿಶೀಲನೆ ಮಾಡಿಲ್ಲ.ಉತ್ತರ ಕರ್ನಾಟಕದಲ್ಲಿ 10-12 ಲಕ್ಷ ಹೆಕ್ಟೇರ್‌ನಷ್ಟು ಜಮೀನಿನಲ್ಲಿ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆಯಲ್ಲಿ 52,000 ಸಾವಿರ ಹೆಕ್ಟೇರ್‌ನಷ್ಟು ಜಮೀನಿನಲ್ಲಿ ಬೆಳೆ ಹಾನಿಯಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ನಾವ್ಯಾರೂ ಬಂದು ಪರಿಶೀಲನೆ ಮಾಡುತ್ತಿರಲಿಲ್ಲ. ಕಬ್ಬು, ತೊಗರಿ, ಹತ್ತಿ ಬೆಳೆಗಳಲ್ಲಿ ಮಳೆ ನೀರು ಹಾಗೆಯೇ ನಿಂತು ಹಾಳಾಗಿದೆ. ಬಿಜೆಪಿ ವತಿಯಿಂದ ಎರಡು ದಿನಗಳಿಂದ ಪರಿಶೀಲನೆ ಮಾಡಲಾಗುತ್ತಿದೆ. ಆದರೆ ಸರ್ಕಾರದಿಂದ ವೈಮಾನಿಕ ಸಮೀಕ್ಷೆ ಮಾಡಲಾಗುತ್ತಿದೆ. ಎಲ್ಲರೂ ಆಕಾಶದಲ್ಲೇ ಇದ್ದಾರೆ. ಯಾರೂ ರೈತರ ಬಳಿ ಬರುತ್ತಿಲ್ಲ ಎಂದರು.
ಇದು ಆಕಾಶವನ್ನು ತೋರಿಸುವ ಸರ್ಕಾರ. ಭೂಮಿತಾಯಿಯನ್ನು ನಂಬಿಕೊಂಡಿರುವ ರೈತರ ಬದುಕಿಗೆ ಈ ಸರ್ಕಾರ ಬೆಂಕಿ ಹಚ್ಚುತ್ತಿದೆ. ಸರ್ಕಾರಕ್ಕೆ ತಾಕತ್ತಿದ್ದರೆ, ಬಿಜೆಪಿ ಅವಧಿಯಲ್ಲಿ ನೀಡಿದಂತೆಯೇ ಬೆಳೆ ಹಾನಿ ಪರಿಹಾರ ನೀಡಲಿ. ಆ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಿ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ರೈತರ ಮನೆ ಬಾಗಿಲಿಗೆ ಬಂದು ಪರಿಹಾರ ವಿತರಿಸಲಿ. ಇಲ್ಲಿನ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಆರಾಮಾಗಿ ಇದ್ದಾರೆ ಎಂದರು.
ಮುಖ್ಯಮಂತ್ರಿ ಹಾಗೂ ಸಚಿವರು ಸ್ಥಳಕ್ಕೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಸಚಿವರು ಎಲ್ಲಿದ್ದಾರೆಂದು ಹುಡುಕಿಕೊಡಿ ಎಂದು ರೈತರು ದೂರಿದ್ದಾರೆ. ಜಿಲ್ಲಾಧಿಕಾರಿಗಳು ಬಂದು ಸರ್ವೆ ಮಾಡಿಲ್ಲ. ಕಾಂಗ್ರೆಸ್ ನಾಯಕರು ಈಗ ಯಾರ ಪರ ಎಂದು ಸವಾಲು ಹಾಕಲಿ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಕೊಟ್ಟಿದ್ದಕ್ಕಿಂತ ಹೆಚ್ಚಿನ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ನೀಡಲಿ ಎಂದರು.
25 ಸಾವಿರ ಹಾಗೂ 5 ಲಕ್ಷ ರೂ. ಪರಿಹಾರ ನೀಡಿ:
ಸಿಎಂ ಸಿದ್ದರಾಮಯ್ಯ ಬೇಕಿದ್ದರೆ ಸರ್ವಪಕ್ಷ ಸಭೆ ಕರೆಯಲಿ. ಅದರಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ದೆಹಲಿಗೆ ಹೋಗುವುದಾದರೆ ನಾವು ಕೂಡ ಬರುತ್ತೇವೆ. ಈರುಳ್ಳಿ ಬೆಳೆ ಹಾಳಾಗಿದೆ. ಹತ್ತಿ ನೀರಿನಲ್ಲಿ ನೆನೆದಿದೆ. ಬಿಜೆಪಿ ಅವಧಿಯಲ್ಲಿ ಮನೆ ಹಾನಿಗೆ 5 ಲಕ್ಷ ರೂ. ನೀಡಿದರೆ ಈಗಿನ ಸರ್ಕಾರ 1.20 ಲಕ್ಷ ರೂ. ನೀಡುತ್ತಿದೆ. ಉಳಿದ ಹಣ ಯಾರ ಜೇಬಿಗೆ ಹೋಗುತ್ತಿದೆ ಎಂದು ತಿಳಿದಿಲ್ಲ. ಸರ್ಕಾರ ಐದಲ್ಲ, ಐವತ್ತು ಗ್ಯಾರಂಟಿಗಳನ್ನು ನೀಡಲಿ. ಆದರೆ ಆ ಹೆಸರಲ್ಲಿ ಪರಿಹಾರ ನೀಡದೇ ಇರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಎಕರೆಗೆ 25,000 ರೂ. ಪರಿಹಾರ ಹಾಗೂ ಮನೆ ಕಟ್ಟಿಸಲು 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
Related Articles
Thank you for your comment. It is awaiting moderation.
Comments (0)