ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್;ಆಯೋಗಕ್ಕೆ ಹಕ್ಕಿಲ್ಲವೆಂದ ಕಾಂಗ್ರೆಸ್

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎನ್ನುವ ಆರೋಪ ಸಂಬಂಧ ಸಾಕ್ಷ್ಯಾಧಾರಗಳನ್ನು ನೀಡುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಆಯೋಗದ ನಡೆಯನ್ನು ಕಾಂಗ್ರೆಸ್ ಪ್ರಶ್ನಿಸಿದೆ,ನೋಟಿಸ್ ನೀಡಲು ಅವರು ಯಾರು? ಅವರಿಗೆ ಆ ಹಕ್ಕಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಆಗಸ್ಟ್ 7 ರಂದು ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ರಾಹುಲ್ ಗಾಂಧಿ,ಮಹದೇವಪುರ ಕ್ಷೇತ್ರದ ಕುರಿತು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮತಗಳ್ಳತನದ ಆರೋಪ ಮಾಡಿದ್ದರು.ನಂತರ ಬೆಂಗಳೂರಿಗೆ ಬಂದು ಪ್ರತಿಭಟನಾ ಸಮಾವೇಶದಲ್ಲಿಯೂ ಆರೋಪ ಮಾಡಿ ಈ ಸಂಬಂಧ ಆಯೋಗಕ್ಕೆ ಯಾವುದೇ ದೂರು ನೀಡದೆ ದೆಹಲಿಗೆ ವಾಪಸ್ಸಾಗಿದ್ದರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗ ರಾಹುಲ್‌ಗಾಂಧಿಗೆ ನೋಟಿಸ್ ನೀಡಿದೆ.

ನಿಮ್ಮ ಪತ್ರಿಕಾಗೋಷ್ಠಿಯಲ್ಲಿ, ತೋರಿಸಿರುವ ದಾಖಲೆಗಳು ಭಾರತ ಚುನಾವಣಾ ಆಯೋಗದ ದಾಖಲೆಗಳಿಂದ ಬಂದಿವೆ ಎಂದು ನೀವು ಹೇಳಿದ್ದೀರಿ. “ಇದು ಚುನಾವಣಾ ಆಯೋಗದ ಡೇಟಾ” ಎಂದಿದ್ದೀರಿ. ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯು ಪ್ರಸ್ತುತಿಯಲ್ಲಿ ನೀವು ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ತೀರ್ಮಾನಿಸಿರುವ ಸಂಬಂಧಿತ ದಾಖಲೆಗಳನ್ನು ಒದಗಿಸಿ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ರಾಹುಲ್ ಗಾಂಧಿ ಅವರಿಗೆ ನೊಟೀಸ್ ನೀಡಿದ್ದಾರೆ.

ಚುನಾವಣಾ ಆಯೋಗದ ನಡೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲು ಅವರು ಯಾರು? ನಾವೇ ಆಯೋಗಕ್ಕೆ ನೋಟಿಸ್ ನೀಡಿದ್ದೇವೆ. ನೋಟಿಸ್ ನೀಡಲು ನಮಗೆ ಅಧಿಕಾರವಿದೆಯೇ ಹೊರತು ಅವರಿಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಸಂವಿಧಾನಬದ್ದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾಗಿಯೇ ವಿಧಾನಸಭಾ ಚುನಾವಣೆ ಗೆದ್ದಿದ್ದೇವೆ. ನ್ಯಾಯಯುತವಾಗಿ ಚುನಾವಣೆ ನಡೆಸಲು ಆಯೋಗಕ್ಕೆ ಅವಕಾಶವಿದೆಯೇ ಹೊರತು ನೋಟಿಸ್ ನೀಡುವ ಹಕ್ಕಿಲ್ಲ‌. ಏನಿದ್ದರೂ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಎಂದು ಖಡಕ್ಕಾಗಿ ಉತ್ತರಿಸಿದರು.

ಇನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ‌ಚಿದಂಬರಂ ಕೂಡ ಆಯೋಗದ ನಡೆಯನ್ನು ಪ್ರಶ್ನಿಸಿದ್ದು, ನ್ಯಾಯಾಲಯದಂತೆ ಚುನಾವಣಾ ಆಯೋಗ ವರ್ತಿಸಬಾರದು ಎಂದು ಟೀಕಿಸಿದ್ದಾರೆ. ಚುನಾವಣಾ ಆಯೋಗವು ನ್ಯಾಯಾಲಯವಲ್ಲ, ಅದು ಕೇವಲ ಆಡಳಿತಾತ್ಮಕ ಸಂಸ್ಥೆ ಮಾತ್ರ ಎಂದಿದ್ದಾರೆ.

Related Articles

Comments (0)

Leave a Comment