ನಾಯಕರ ಹಿಂದೆ ಓಡಾಡಬೇಡಿ,ನೀವೇ ನಾಯಕರಾಗಿ ಹೊರಹೊಮ್ಮಿ; ಯುವ ಮುಖಂಡರಿಗೆ ಡಿಕೆ ಶಿವಕುಮಾರ್ ಕಿವಿಮಾತು

ಬೆಂಗಳೂರು:ನೀವು ನಾಯಕರುಗಳ ಹಿಂದೆ ಓಡಾಡಿದರೆ ಯಾವುದೇ ಪ್ರಯೋಜನವಿಲ್ಲ. ನೀವೇ ನಾಯಕರಾಗಿ ಹೊರಹೊಮ್ಮಬೇಕು ಎಂದು ಕಾಂಗ್ರೆಸ್ ತಿವ ಮುಖಂಡರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕಿವಿ ಮಾತು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು,ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ನಾಯಕರಾಗಿ ಬೆಳೆದವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಇವರು ಪಕ್ಷದ ಆಸ್ತಿಯಾಗಿ, ದೇಶದ ಆಸ್ತಿಗಳಾಗಿ ಬೆಳೆಯುತ್ತಾರೆ.ಬೂತ್ ಮಟ್ಟದಲ್ಲಿ ನಾಯಕರಾಗಿ ಬೆಳೆದು ನಿಮ್ಮ ಸಾಮರ್ಥ್ಯ ‌ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಅಲ್ಲಿ ನಿಮ್ಮ ಶಕ್ತಿ ಸಾಬೀತು ಮಾಡಿದರೆ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯಬಹುದು ಎಂದರು.

“ಚುನಾವಣೆಗೆ ಹಣ ಮುಖ್ಯವಲ್ಲ, ನಿಮ್ಮ ಸಂಘಟನಾ ಸಾಮರ್ಥ್ಯ ಮುಖ್ಯ. ರತನ್ ಟಾಟಾ ಅವರು ಒಂದು ಮಾತು ಹೇಳುತ್ತಿದ್ದರು, ‘ವೇಗವಾಗಿ ಹೋಗಬೇಕು ಎಂದರೆ ಒಬ್ಬನೇ ಹೋಗು. ದೂರ ಕ್ರಮಿಸಬೇಕು ಎಂದರೆ ಜನರೊಟ್ಟಿಗೆ ಹೆಜ್ಜೆ ಹಾಕು’ ಎಂದು. ನೀವು ನಾಯಕರುಗಳ ಹಿಂದೆ ಓಡಾಡಿದರೆ ಪ್ರಯೋಜನವಿಲ್ಲ. ನೀವೇ ನಾಯಕರಾಗಿ ಹೊರಹೊಮ್ಮಬೇಕು” ಎಂದು ಕಿವಿ ಮಾತು ಹೇಳಿದರು.

“73, 74 ನೇ ತಿದ್ದುಪಡಿಯ ಕಾರಣಕ್ಕೆ ‌ಸ್ಥಳೀಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ನೂರಾರು ನಾಯಕರು ಹುಟ್ಟಿಕೊಂಡರು‌. ಬೆಂಗಳೂರಿನಲ್ಲಿ ನೂತನ ಐದು ಪಾಲಿಕೆಗಳನ್ನು ರಚನೆ ಮಾಡಿರುವ ಕಾರಣಕ್ಕೆ ಸುಮಾರು 500 ಕ್ಕೂ ಹೆಚ್ಚು ಹೊಸ ನಾಯಕರು ಸಜ್ಜಾಗಲಿದ್ದಾರೆ.‌ ನಾನು, ರಾಮಲಿಂಗಾರೆಡ್ಡಿ‌ ಅವರು, ಬಿಜೆಪಿಯ ಸೋಮಣ್ಣ, ಸುರೇಶ್ ಕುಮಾರ್ – ಹೀಗೆ ಅನೇಕರು ಸ್ಥಳೀಯ ಸಂಸ್ಥೆಗಳ ಮೂಲಕವೇ ಬೆಳೆದವರು. ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ನಂತರ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದೆ. ನಂತರ ಜನರು ನನ್ನನ್ನು 8 ಬಾರಿ ಎಂಎಲ್ ಎಯಾಗಿ ಆಯ್ಕೆ ಮಾಡಿದ್ದಾರೆ” ಎಂದರು.

“ಎನ್ಎಸ್ ಯುಐ ಅಧ್ಯಕ್ಷನಾಗಿದ್ದ ಕೀರ್ತಿ ಗಣೇಶ್ ನನ್ನು ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಪಕ್ಷದ ಅನೇಕ ಘಟಕಗಳ ಜವಾಬ್ದಾರಿ ತೆಗೆದುಕೊಂಡವರಿಗೆ ಅತ್ಯುತ್ತಮ ಸ್ಥಾನಗಳನ್ನು ನೀಡಲಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ” ಎಂದು ಹೇಳಿದರು.

“ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲಾ ಘಟಕಗಳು ಕೆಲಸ ಮಾಡಿದರೆ ನಾವು 2028 ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನೀವು ಪಕ್ಷದ ಮುಖವಾಣಿಯಂತೆ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬೇಕು” ಎಂದರು.

“ನಾನು ಸಹ ಯುವ ಕಾಂಗ್ರೆಸ್ ಮೂಲಕ ಬೆಳೆದವನು. ಈ ದೇಶದ ಯುವಕರ ಶಕ್ತಿಯ ಬಗ್ಗೆ ನನಗೆ ಅರಿವಿದೆ. ಶಿಸ್ತು, ಪ್ರಾಮಾಣಿಕತೆ, ನೈತಿಕತೆಯನ್ನು ಮೈಗೂಡಿಸಿಕೊಂಡರೆ‌ ಮಾತ್ರ ಬೆಳೆಯಲು ಸಾಧ್ಯ. ಶಿಸ್ತು ಬೆಳೆಸಿಕೊಳ್ಳದ ಹೊರತು ಬೆಳವಣಿಗೆ ಅಸಾಧ್ಯ ಎಂದು” ಸಲಹೆ ನೀಡಿದರು.

Related Articles

Comments (0)

Leave a Comment