ಧರ್ಮಸ್ಥಳ ಚಲೋ ಸರ್ಕಾರವನ್ನು ಎಚ್ಚರಿಸುವ ಸಮಾವೇಶ; ವಿಜಯೇಂದ್ರ
- by Suddi Team
- September 2, 2025
- 105 Views

ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ): ಧರ್ಮಸ್ಥಳ ಚಲೋ ಕೇವಲ ಸಮಾವೇಶ ಮಾತ್ರವಲ್ಲ,ಹಿಂದೂ ವಿರೋಧಿ ದುಷ್ಟ ಕಾಂಗ್ರೆಸ್ ಸರಕಾರವನ್ನು ಎಚ್ಚರಿಸುವ ಸಮಾವೇಶ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಇಂದು ರಾಜ್ಯ ಬಿಜೆಪಿ ವತಿಯಿಂದ ನಡೆದ “ಧರ್ಮಸ್ಥಳ ಚಲೋ” ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ನಡೆಯಿಂದಾಗಿ ಧರ್ಮಸ್ಥಳದ ಭಕ್ತರ ಸಹನೆ ಕಟ್ಟೆ ಒಡೆದಿದೆ. ಆದರೆ, ಮುಖ್ಯಮಂತ್ರಿಗಳು ಮಾತ್ರ ಇನ್ನೂ ಎಸ್‍ಐಟಿ ತನಿಖೆ ಎನ್ನುತ್ತಿದ್ದಾರೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರದ ತನಿಖೆ ಸಿಬಿಐ ಅಥವಾ ಎನ್‍ಐಎ ಯಿಂದ ಆಗಲಿ ಎಂದು ಆಗ್ರಹಿಸಿದರು.
ಧರ್ಮಸ್ಥಳದ್ದು ಸಣ್ಣ ದೇವಸ್ಥಾನವಲ್ಲ; ಕೋಟ್ಯಂತರ ಭಕ್ತರಿರುವ ಪವಿತ್ರ ಕ್ಷೇತ್ರ ಇದು. ಅಯೋಗ್ಯನ ಹಿನ್ನೆಲೆ ಅರ್ಥ ಮಾಡದೆ ಎಸ್‍ಐಟಿ ರಚಿಸಿದ ರಾಜ್ಯ ಸರಕಾರಕ್ಕೆ ಒಳ್ಳೆಯದು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮತಬ್ಯಾಂಕಿಗಾಗಿ ಕಾಂಗ್ರೆಸ್ ಷಡ್ಯಂತ್ರ:
ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಮಾತನಾಡಿ, ಇದೊಂದು ಪುಣ್ಯಭೂಮಿ; ಸಿದ್ಧ ಭೂಮಿ. ಮತಬ್ಯಾಂಕಿಗಾಗಿ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ರಾಜ್ಯದಲ್ಲಿ ಭ್ರಷ್ಟ, ಹಗರಣಗಳ ಸರಕಾರ ಇದೆ ಎಂದು ಟೀಕಿಸಿದರು. ಎಡಪಂಥೀಯರು ಮಾಡುವ ಈ ಷಡ್ಯಂತ್ರಕ್ಕೆ ದೇವರು ತಕ್ಕ ಉತ್ತರ ಕೊಡುತ್ತಾನೆ ಎಂದು ಎಚ್ಚರಿಸಿದರು.
ಪ್ರಧಾನಿ, ಅವರ ತಾಯಿಯವರ ಕುರಿತು ಅವಮಾನ ಮಾಡಿದ್ದನ್ನು ಇದೇವೇಳೆ ಖಂಡಿಸಿದರು. ಅವಮಾನ ಮಾಡುವವರು ಮಾತ್ರವಲ್ಲದೇ ತಮಿಳುನಾಡಿನ ಸಂಸದ ಶಶಿಕಾಂತ್ ಸೆಂಥಿಲ್ ಬಂಧಿಸಲು ಆಗ್ರಹಿಸಿದರು.
ಸಿದ್ದರಾಮಯ್ಯನವರ ಸುತ್ತ ನಗರ ನಕ್ಸಲ್ ಗ್ಯಾಂಗ್:
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಧರ್ಮಸ್ಥಳದ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲಗಳಿವೆ. ಬುರುಡೆ ಹಿಂದೆ ಕೇರಳ, ತಮಿಳುನಾಡು, ದೆಹಲಿಯ ಕೆಲವರಿದ್ದಾರೆ. ಎನ್‍ಐಎ ತನಿಖೆ ಮೂಲಕ ಈ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಯಲಿಗೆ ತರಬೇಕು ಎಂದು ಒತ್ತಾಯಿಸಿದರು.
ಚಾಮುಂಡಿ ಹಿಂದೂಗಳದ್ದಲ್ಲ ಎನ್ನುವ ಶಿವಕುಮಾರ್, ಕಾಂಗ್ರೆಸ್ ಸರಕಾರದ ವಿರುದ್ಧ ಚಾಮುಂಡೇಶ್ವರಿ ಕಣ್ತೆರೆಯಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯನವರ ಸುತ್ತ ನಗರ ನಕ್ಸಲ್ ಗ್ಯಾಂಗ್, ತಿಮರೋಡಿ ಗ್ಯಾಂಗ್ ಸೇರಿಕೊಂಡಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ಸಿಗರು ಇಲ್ಲಿ ಬರುತ್ತಾರೆ ಎಂದು ಪ್ರಶ್ನಿಸಿದರು. ಇದು ಮತಾಂತರದ ಟೂಲ್ ಕಿಟ್. ಇದರ ವಿರುದ್ಧ ಹಿಂದೂಗಳು ಒಂದಾಗಬೇಕಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಪರ:
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಮುಸುಕುಧಾರಿ ಕಾಂಗ್ರೆಸ್ಸಿಗರ ಸ್ನೇಹಿತ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಹಿಂದೂಗಳ ವಿರುದ್ಧ, ಅಲ್ಪಸಂಖ್ಯಾತರ ತುಷ್ಟೀಕರಣದ ಪರವಾಗಿದೆ. ಅದು ಅವರ ರಕ್ತದಲ್ಲಿ ಬಂದಿದೆ ಎಂದು ತಿಳಿಸಿದರು. ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನ ಕೇಳುವಂಥ ಪ್ರಶ್ನೆಯನ್ನು ಕಾಂಗ್ರೆಸ್ಸಿಗರು ಕೇಳುತ್ತಿದ್ದರು ಎಂದು ಆಕ್ಷೇಪಿಸಿದರು.
ಭಯೋತ್ಪಾದಕರ ದಾಳಿ ತಡೆಯಲಾರದ ಕಾಂಗ್ರೆಸ್ ಸರಕಾರ ದೇಶದಲ್ಲಿತ್ತು. ಈಗ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಮುಗಿಸಿ ಬಂದ ಸರಕಾರ ದೇಶದಲ್ಲಿದೆ ಎಂದು ತಿಳಿಸಿದರು. ಭಾರತ ಸರಕಾರದ ತಾಕತ್ತಿದು ಎಂದು ಶ್ಲಾಘಿಸಿದರು. ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತ ಬಂದಿದೆ. ಅದರ ಭಾಗವಾಗಿಯೇ ಇಲ್ಲಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು. ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಹೇಳಿಕೆಯನ್ನು ಖಂಡಿಸಿದರು. ಕಾಂಗ್ರೆಸ್ ನಾಟಕ- ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ಸಮಾಜ ಒಂದಾಗಲಿ; ಅಣ್ಣಪ್ಪನ ಆಶೀರ್ವಾದ, ಮಂಜುನಾಥನ ಅನುಗ್ರಹ ಎಲ್ಲರಿಗೂ ಇದೆ ಎಂದು ನುಡಿದರು.
Related Articles
Thank you for your comment. It is awaiting moderation.
Comments (0)