ರಾಮನಗರ ಕೋವಿಡ್ ರೋಗಿಗಳ ಜತೆ ವಿಡಿಯೊ ಸಂವಾದ ನಡೆಸಿದ ಡಿಸಿಎಂ
- by Suddi Team
- June 28, 2020
- 100 Views
ರಾಮನಗರ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್- 19 ಸೋಂಕಿನಿಂದ ಎದುರಾಗುವ ಯಾವುದೇ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ರಾಮನಗರ ಜಿಲ್ಲಾಡಳಿತ ಸರ್ವಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭಾನುವಾರ ಜಿಲ್ಲೆಯ ರೋಗಿಗಳಿಗೆಗೆ ಮೀಸಲಾಗಿರುವ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಂಗೇರಿಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ, ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ ತಕ್ಷಣಕ್ಕೆ ಎರಡೂ ಆಸ್ಪತ್ರೆಗಳಲ್ಲಿ 660 ಬೆಡ್ ಗಳನ್ನು ಸಜ್ಜುಗೊಳಿಸಿದರು.
ಇವೆರಡೂ ಆಸ್ಪತ್ರೆಗಳನ್ನು ರಾಮನಗರ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಜಿಲ್ಲೆಯ ರೋಗಿಗಳ ಸೇವೆಗೆ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್ ಗಳ ಸೇವೆ ಲಭ್ಯವಾಗಲಿದೆ.
ಜಿಲ್ಲೆಯಲ್ಲಿ ಕೊರೊನ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಈ ಆಸ್ಪತ್ರೆ ಸರ್ವರೀತಿಯಲ್ಲೂ ಸಜ್ಜಾಗಿದೆ. ತಮ್ಮಲ್ಲಿರುವ ಸೌಲಭ್ಯಗಳನ್ನು ಜಿಲ್ಲೆ ರೋಗಿಗಳಿಗೆ ಮೀಸಲಿಡುವ ಭರವಸೆಯನ್ನು ಆಡಳಿತ ಮಂಡಳಿ ನೀಡಿದೆ ಎಂದು ಅವರು ಹೇಳಿದರು.
ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಮಧ್ಯಾಹ್ನ ರಾಮನಗರಕ್ಕೆ ಭೇಟಿ ನೀಡಿದ ಡಿಸಿಎಂ ಅವರು ಅಲ್ಲಿಯೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಕೋವಿಡ್ ಗೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿ. ಮೈಮರೆಯಬೇಡಿ. ಚಿಕಿತ್ಸೆ ನೀಡುವ ವೈದ್ಯರ ಸುರಕ್ಷತೆಗೂ ಆದ್ಯತೆ ನೀಡಬೇಕು. ಕ್ವಾರಂಟೈನ್ ಸಲುವಾಗಿ ಅಗತ್ಯ ಬಿದ್ದರೆ ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿಯೂ ವ್ಯವಸ್ಥೆ ಮಾಡಿ ಎಂದು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಕ್ಷಣಕ್ಕೆ ನಾಲ್ಕು ಆಂಬುಲೆನ್ಸ್ ಅಗತ್ಯ ಇದ್ದು ಖರೀದಿ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಎರಡೂ ಆಸ್ಪತ್ರೆಗಳು ಟೆಲಿ ಮೆಡಿಸಿನ್ ಗೆ ಆದ್ಯತೆ ನೀಡಲು ಒಪ್ಪಿವೆ ಎಂದರು.
ರಾಜರಾಜೇಶ್ವರಿ ಮೆಡಿಕಲ್ ಕಾಲೇಜು:
ಮೊದಲು ಈ ಕಾಲೇಜಿಗೆ ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಓ ಇಕ್ರಂ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ ಅವರ ಜತೆ ಭೇಟಿ ನೀಡಿದ ಡಿಸಿಎಂ, ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಜತೆ ಮಾತುಕತೆ ನಡೆಸಿದರು. ಇಲ್ಲಿ ಜಿಲ್ಲೆಯ 600 ರೋಗಿಗಳಿಗೆಗೆ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಒಪ್ಪಂದ ಮಾಡಕೊಳ್ಳಲಿದೆ ಎಂದು ತಿಳಿದರು.
ಸದ್ಯಕ್ಕೆ ಕಾಲೇಜಿನ ಆಸ್ಪತ್ರೆಯಲ್ಲಿರುವ 1600 ಬೆಡ್ಡುಗಳ ಪೈಕಿ 600 ಬೆಡ್ಡುಗಳನ್ನು ಜಿಲ್ಲೆಯ ರೋಗಿಗಳಿಗೆ ಮೀಸಲಿಡಲಾಗಿದೆ. ಐಸಿಯುನಲ್ಲೂ 110 ಬೆಡ್ಡುಗಳನ್ನು ನಿಗದಿ ಮಾಡಲಾಗಿದ್ದು, ಇಲ್ಲಿ ವೆಂಟಿಲೇಟರ್ ವ್ಯವಸ್ಥೆಯೂ ಇದೆ. ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ತಮ್ಮಲ್ಲಿರುವ 150 ವೈದ್ಯರನ್ನು ರಾಮನಗರ ಜಿಲ್ಲೆಗೆ ಒದಗಿಸಲು ತಯಾರಿದ್ದಾರೆ. 400 ನರ್ಸ್ ಗಳ ಪೈಕಿ 200 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದು, 20 ಮಂದಿಯ ಸೇವೆಯನ್ನೂ ಜಿಲ್ಲೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರೆಂದು ಡಿಸಿಎಂ ಹೇಳಿದರು.
ಸದ್ಯಕ್ಕೆ 34 ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ ಪೈಕಿ 17 ಮಂದಿ ರಾಮನಗರ ಜಿಲ್ಲೆಯವರು ಎಂದ ಅವರು, ಆಸ್ಪತ್ರೆಯ ಸುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಮರ್ಪಕವಾಗಿ ಸ್ಯಾನಿಟೈಸ್ ಮಾಡಿ ಸ್ವಚ್ಛತೆ ಕಾಪಾಡಬೇಕು. ಕೂಡಲೇ ನೋಡೆಲ್ ಅಧಿಕಾರಿಯನ್ನು ನೇಮಿಸಿ ಆಸ್ಪತ್ರೆ ಬಳಿ ಪೋಲೀಸ್ ಔಟ್ ಪೋಸ್ಟ್ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಯಾನಂದ ಸಾಗರ್ ಆಸ್ಪತ್ರೆ:
ಬಳಿಕ ತಮ್ಮ ತಂಡದೊಂದಿಗೆ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ತಯಾರಿಯನ್ನು ಪರಿಶೀಲಿಸಿದರು. ಆಸ್ಪತ್ರೆ ಅಧ್ಯಕ್ಷ ಡಾ. ಹೇಮಚಂದ್ರ ಸಾಗರ್ ಅವರೊಂದಿಗೆ ಚರ್ಚೆ ನಡೆಸಿದ ಡಿಸಿಎಂ, ರೋಗಿಗಳಿಗೆ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಸದ್ಯಕ್ಕೆ ಆಸ್ಪತ್ರೆಯಲ್ಲಿ 60 ಬೆಡ್ ಗಳಿದ್ದು, ಇವು ತಕ್ಷಣಕ್ಕೆ ಲಭ್ಯವಿವೆ. ಇಲ್ಲಿ 30 ಕೋವಿಡ್ ರೋಗಿಗಳು ಇದ್ದರು. ಈ ಪೈಕಿ 23 ಜನ ಭಾನುವಾರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 4 ವಾರಗಳ ಬಳಿಕ 40 ಬೆಡ್ ಗಳು ಹೆಚ್ಚುವರಿಯಾಗಿ ಸಿದ್ಧವಾಗಲಿವೆ. ನಮ್ಮಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಸರ್ಕಾರದ ಸೂಚನೆಯಂತೆ ಒದಗಿಸಲು ಸಿದ್ಧ ಎಂದು ಹೇಮಚಂದ್ರ ಸಾಗರ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ಗಂಭೀರ, ತದನಂತರ ಹಂತದ ರೋಗಿಗಳನ್ನು ಕೂಡಲೇ ಈ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.
ಉಳಿದಂತೆ ಕನಕಪುರ ತಾಲ್ಲೂಕಿಗೆ ಅಗತ್ಯವಾಗಿರುವ ವೈದ್ಯಕೀಯ ಸಿಬ್ಬಂದಿಯನ್ನು ತಮ್ಮ ಆಸ್ಪತ್ರೆಯಿಂದಲೇ ಒದಗಿಸಲಾಗುವುದು. ಮೂವರು ನುರಿತ ವೈದ್ಯರು, 10 ನರ್ಸ್ ಗಳು ಹಾಗೂ 3 ಆಂಬುಲೆನ್ಸ್ ಗಳ ಸೇವೆಯನ್ನು ನೀಡಲಾಗುವುದು ಎಂದು ಹೇಮಚಂದ್ರ ಸಾಗರ್ ಅವರು ಡಿಸಿಎಂಗೆ ತಿಳಿಸಿದರು.
ಕನಕಪುರ ತಾಲ್ಲೂಕಿನ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ದಯಾನಂದ ಸಾಗರ್ ಆಸ್ಪತ್ರೆ ಮುಂದೆ ಬಂದಿದೆ. ಅಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ ಡಿಸಿಎಂ ಹೇಳಿದರು.
ಚಿಕಿತ್ಸಾ ವೆಚ್ಚ ಸರಕಾರದ್ದೇ:
ಸರಕಾರದ ನಿಯಮದಂತೆ ರೋಗಿಗಳ ವೆಚ್ಚವನ್ನು ಸರಕಾರವೇ ಭರಸಲಿದೆ. ಆ ಮೊತ್ತವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಲಿದೆ. ಯಾವುದೇ ಕಾರಣಕ್ಕೂ ಸೋಂಕಿತರಿಗೆ ತೊಂದರೆಯಾಗಲು ಬಿಡುವುದಿಲ್ಲ. ಸದ್ಯದ ಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳುವಂತೆ ಎಂದು ಡಿಸಿಎಂ ಸೂಚಿಸಿದರು.
ರೋಗಿಗಳೊಂದಿಗೆ ಡಿಸಿಎಂ ಸಂವಾದ
ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಧೈರ್ಯ ತುಂಬಿದರು. ಅಡ್ಮಿನ್ ಬ್ಲಾಕಿನಲ್ಲಿ ಕೂತು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಶೇಖರ್ ಮತ್ತು ದೇವಿ ಎಂಬುವವರ ಜತೆ ಮಾತನಾಡಿದ ಅವರು, ರೋಗಕ್ಕೆ ಹೆದರಬೇಡಿ. ನಿಮಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಸರಕಾರ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದರು.
ಕನಕಪುರದ ದೇವಿ ಅವರು 7 ತಿಂಗಳ ಗರ್ಭಿಣಿಯಾಗಿದ್ದು, ತಮಗಿಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಮತ್ತು ನರ್ಸ್ ಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಡಿಸಿಎಂ ಅವರಿಗೆ ತಿಳಿಸಿದರು. ಹಾಗೆಯೇ ರಾಜಶೇಖರ್ ಅವರು ಕೂಡ ಚಿಕಿತ್ಸೆಯ ಬಗ್ಗೆ ಸಂತಸ ವ್ಕಕ್ತಪಡಿಸಿದರಲ್ಲದೆ, ತಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು.
ಇದೊಂದು ಸೋಂಕಿನ ಕಾಯಿಲೆಯಾಗಿದ್ದು, ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಎದೆಗುಂದಬಾರದು. ವೈದ್ಯರು ಹೇಳುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಜನರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಹಿತವಚನ ಹೇಳಿದರು.
Related Articles
Thank you for your comment. It is awaiting moderation.


Comments (0)