ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬನ್ನಿ; ಬಿಜೆಪಿಗೆ ಸಿದ್ದರಾಮಯ್ಯ ನೇರ ಸವಾಲು
- by Suddi Team
- July 14, 2025
- 484 Views

ವಿಜಯಪುರ: ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನಿಕವಾಗಿ ದಾಖಲೆ ಸಮೇತ ಚರ್ಚೆ ನಡೆಸೋಣ. ಜನರೇ ತೀರ್ಮಾನಿಸಲಿ, ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಸವಾಲೆಸೆದಿದ್ದಾರೆ.
ಇಂಡಿ ತಾಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 4,157 ಕೋಟಿ ರೂ. ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಸಿಎಂ, ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4,559 ಕೋಟಿ ರೂ. ಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ. ಬಿಜಾಪುರ ಜಿಲ್ಲೆ ಮೊದಲು ಹೇಗಿತ್ತು? ನಮ್ಮ ಸರ್ಕಾರದಲ್ಲಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ನೋಡಿ. ಬಿಜಾಪುರ ಜಿಲ್ಲೆಯಲ್ಲಿ ನೀರಾವರಿ ಈ ಮಟ್ಟಕ್ಕೆ ಅಭಿವೃದ್ಧಿಗೊಳಿಸಿ, ಬರದ ನಾಡಾಗಿದ್ದ ಬಿಜಾಪುರವನ್ನು ಹಸಿರು ನಾಡು ಮಾಡಿದ್ದು ನಾವು ಎಂದು ನುಡಿದರು.
ಬಿಜೆಪಿ-ಜೆಡಿಎಸ್ ಇಬ್ಬರೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಅಪಪ್ರಚಾರ ಮಾಡಿ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ನಾವು ಇವರ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ. 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳು ಉಚಿತವಾಗಿ 200 ಯೂನಿಟ್ ಹಣ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಲ್ಲದೆ 83 ಸಾವಿರ ಕೋಟಿ ರೂಪಾಯಿ ಹಣ ಅಭಿವೃದ್ಧಿಗೆ ತೆಗೆದಿಟ್ಟುರುವುದು ನಮ್ಮ ಅಭಿವೃದ್ಧಿಪರವಾದ ಆಡಳಿತಕ್ಕೆ ಸ್ಪಷ್ಟ ನಿದರ್ಶನ. ಆದ್ದರಿಂದ, ಬಿಜೆಪಿ-ಜೆಡಿಎಸ್‌ನ ಸುಳ್ಳು ಆರೋಪಗಳನ್ನು ನಂಬಬೇಡಿ. ನಿಮ್ಮ ಕಣ್ಣೆದುರಿಗೇ ಇರುವ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರ ಮುಖಕ್ಕೆ ಹಿಡಿದು ಉತ್ತರಿಸಿ ಎಂದು ಕರೆ ನೀಡಿದರು.
Related Articles
Thank you for your comment. It is awaiting moderation.
Comments (0)