ಸಿಗಂದೂರು ಸೇತುವೆ ಲೋಕಾರ್ಪಣೆ ಮುಂದೂಡಿಕೆಗೆ ಸಿಎಂ ಪತ್ರ..!

ಬೆಂಗಳೂರು: ನಾಳೆ ಬೆಳಗ್ಗೆ ಲೊಕಾರ್ಪಣೆಗೆ ಸಿದ್ದವಾಗಿ ನಿಂತಿರುವ ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭವನ್ನು ಮುಂದೂಡುವಂತೆ ಕೋರಿ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ, ಉದ್ಘಾಟನೆಗೆ ಸಕಲ ಸಿದ್ದತೆಗಳಾಗಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆ ಬಹುತೇಕ ಅನುಮಾನವೆನಿಸಿದೆ.

ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳ ಆಹ್ವಾನ ವಿಚಾರದಲ್ಲಿ ಸಾಕಷ್ಟು ಗೊಂದಲ‌ ಸೃಷ್ಟಿಯ ನಡುವೆಯೂ ನಾಳೆ ಸೇತುವೆ ಲೋಕಾರ್ಪಣೆಗೆ ಸಕಲ‌ ಸಿದ್ದತೆಗಳು ಪೂರ್ಣಗೊಂಡಿವೆ. ತಳಿರು ತೋರಣಗಳಿಂದ ಸೇತುವೆ ಸಿಂಗಾರಗೊಂಡಿದೆ. ಸ್ಥಳೀಯ ಪ್ರದೇಶದಲ್ಲಿ ಹಬ್ಬದ ವಾತಾವರಣ ಮೂಡಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಕೊನೇ ಕ್ಷಣದಲ್ಲಿ ಸೇತುವೆ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆ ಮಾಡುವಂತೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಸಿಎಂ ಪತ್ರದಲ್ಲೇನಿದೆ?

ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2025ರ ಜುಲೈ 14ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನೆಹರು ಕ್ಷೇತ್ರದಲ್ಲಿ ‘ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ಸಮಾರಂಭ’ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಮತ್ತು ಕರಡು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಸಹ ಮುದ್ರಿಸಲಾಗಿದೆ. ಅದಾಗ್ಯೂ, ಈ ಕಾರ್ಯಕ್ರಮದ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಲಾಗಿಲ್ಲ ಮತ್ತು ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿಗದಿಪಡಿಸುವ ಮೊದಲು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ್ದರೆ ಹೆಚ್ಚು ಸೂಕ್ತವಾಗಿತ್ತು ಎಂದು ಸಿದ್ದರಾಮಯ್ಯ ಪತ್ರತದಲ್ಲಿ ಉಲ್ಲೇಖಿಸಿದ್ದಾರೆ.

ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಇಲಾಖೆಗೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ, ಈ ಕಾರ್ಯಕ್ರಮವನ್ನು ಮುಂದೂಡಲು ಮತ್ತು ನಿಮಗೆ ಅನುಕೂಲಕರವಾದ ಒಂದೆರಡು ದಿನಾಂಕಗಳನ್ನು ನನಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ. ಇದರಿಂದ, ನಾನು ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಸೇರಲು ಸಾಧ್ಯವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂ ಬರೆದಿರುವ ಈ ಪತ್ರ ಅಕ್ಷರಶಃ ಕೇಂದ್ರದ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿರುವುದನ್ನು ತೋರಿಸುತ್ತದೆ, ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿ ಎಂದಿರುವುದೇ ಇದಕ್ಕೆ ನಿದರ್ಶನ ಅಲ್ಲದೆ ಒಂದೆರಡು ದಿನಾಂಕ ಒದಗಿಸಿಕೊಟ್ಟರೆ ವೇದಿಕೆ ಹಂಚಿಕೊಳ್ಳುವ ಹೇಳಿಕೆ ರಾಜ್ಯ ಸರ್ಕಾರಕ್ಕೆ ಕೇಂದ್ರವೇ ಹೊಂದಿಕೊಳ್ಳಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದೆ. ಇದನ್ನೆಲ್ಲ ಗಮನಿಸಿದರೆ ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸೇತುವೆ ನಿರ್ಮಾಣದ ಕ್ರೆಡಿಟ್ ವಾರ್ ಎನ್ನುವಂತಿದೆ.

ಸಿಎಂ ಪತ್ರ ಬರೆದಿದ್ದರೂ ನಾಳಿನ ಕಾರ್ಯಕ್ರಮ ಮುಂದೂಡಿಕೆ ಬಹುತೇಕ ಅನುಮಾನ. ಈಗಾಗಲೇ ಸಕಲ ಸಿದ್ದತೆಗಳು ಪೂರ್ಣಗೊಂಡಿರುವುದರಿಂದ ನಿಗದಿತ ಮುಹೂರ್ತದಲ್ಲೇ ನಾಳೆ ಸೇತುವೆ ಲೋಕಾರ್ಪಣೆಯಾಗುವುದು ನಿಶ್ಚಿತವಾಗಿದೆ.

Related Articles

Comments (0)

Leave a Comment