ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಚಿಂತನೆ; ಸಿಎಂ ಸಿದ್ದರಾಮಯ್ಯ
- by Suddi Team
- June 23, 2025
- 86 Views

ರಾಯಚೂರು: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರದ ವಿಶೇಷ ಅನುದಾನ ಬಿಡುಗಡೆಗೆ ಒತ್ತಾಯ ಮಾಡಿದ್ದು, ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಮಾಡುವ ವಿಚಾರವನ್ನು ಪರಿಶೀಲಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ 5 ಸಾವಿರ ಕೋಟಿಗಳ ವಿಶೇಷ ಅನುದಾನವನ್ನು ಪ್ರತಿವರ್ಷ ನೀಡುತ್ತಿದೆ. ಇದೇ ರೀತಿ, ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕೆಂದು ಒತ್ತಾಯಿಸಲಾಗಿದೆ. ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಮಾಡುವ ವಿಚಾರವನ್ನು ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆ ಕಾರಣವಾಗಿರುವ ಬಗ್ಗೆ ಚರ್ಚೆಯಾಗುತ್ತಿದೆ. ಹೊಸ ಶಿಕ್ಷಕರ ನೇಮಕಾತಿಗೆ ಈಗಾಗಲೇ ಆದೇಶ ನೀಡಲಾಗಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಹೊರಬರಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಿದೆ ಎಂದರು.
ದೆಹಲಿ ಪ್ರವಾಸದ ವಿವರಗಳನ್ನು ಪತ್ರಕರ್ತರಿಗೆ ತಿಳಿಸುತ್ತಾ, ರಾಷ್ಟ್ರಪತಿಗಳ ಅಂಗಳಕ್ಕೆ ಹೋಗಿರುವ ಹಲವು ವಿಧೇಯಕಗಳ ಬಗ್ಗೆ ವಿವರಣೆ ನೀಡಲು ರಾಷ್ಟ್ರಪತಿಗಳನ್ನು ಭೇಟಿಯಾಗುವ ಸಮಯ ಕೋರಲಾಗಿದೆ. 16ನೇ ಹಣಕಾಸಿನ ಆಯೋಗಕ್ಕೆ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಚರ್ಚಿಸಲು ಪ್ರಧಾನಿಯವರನ್ನು, ಹಣಕಾಸಿನ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದರು.
14ನೇ ಹಣಕಾಸಿನ ಆಯೋಗದಿಂದ 15 ನೇ ಹಣಕಾಸಿನ ಆಯೋಗಕ್ಕೆ ಹೋಲಿಸಿದರೆ, ರಾಜ್ಯಕ್ಕೆ ಅನುದಾನ ನೀಡಿಕೆಯಲ್ಲಿ ಸುಮಾರು 80 ಸಾವಿರ ಕೋಟಿಗಳ ನಷ್ಟವಾಗಿದೆ. ಈ ಬಗ್ಗೆ ಯಾವುದೇ ಬಿಜೆಪಿ ಸಂಸದರೂ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಪ್ರದಾನಿ ಮೋದಿಯವರೊಂದಿಗೆ ನಿಕಟಸಂಪರ್ಕ ಹೊಂದಿರುವ ಪ್ರಭಾವಿ ಸಚಿವ ಎಂದು ಹೇಳಲಾಗುತ್ತದೆ. 11,495 ಕೋಟಿ ರೂ.ಗಳನ್ನು ಹಣಕಾಸಿನ ಆಯೋಗದಲ್ಲಿ ವಿಶೇಷ ಅನುದಾನ ನೀಡಲು ಸಮ್ಮತಿ ನೀಡಲಾಗಿದ್ದರೂ, ಕೇಂದ್ರ ಸರ್ಕಾರ ಈ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲು ಅವರು ಯಾವುದೇ ಸಹಾಯವನ್ನು ಮಾಡಿಲ್ಲ. ಕರ್ನಾಟಕದ ಬಗ್ಗೆ ಮಾತನಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.
Related Articles
Thank you for your comment. It is awaiting moderation.
Comments (0)