ಎಂಎಲ್ ಸಿ ಗಳಿಗೂ ಕ್ಷೇತ್ರ ಅಭಿವೃದ್ಧಿಗೆ ಅನುದಾನ;ಸಿಎಂ ಆಶ್ವಾಸನೆ

ಬೆಂಗಳೂರು: ಪ್ರಸ್ತುತ ಸನ್ನುವೇಶದಲ್ಲಿ ಶಾಸಕರಿಗೆ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನ ನೀಡಲು ಮೀಸಲಿಟ್ಟಿರುವ ಹಣದಲ್ಲಿಯೇ ವಿಧಾನ ಪರಿಷತ್ ಸದಸ್ಯರಿಗೂ ಕ್ಷೇತ್ರಾಭಿವೃದ್ಧಿಗೆ ಅನುದಾನ ಹಂಚಿಕೆ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಆಡಳಿತ ಪಕ್ಷದ ವಿಧಾನಪರಿಷತ್ತಿನ ಸದಸ್ಯರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ,ಈ ಹಿಂದೆ ಜಿಲ್ಲಾ ಶಾಸಕರೊಂದಿಗೆ ಸಭೆ ನಡೆಸಿದಂತೆ, ನಾಳೆ ಬೆಂಗಳೂರು ನಗರದ ಶಾಸಕರೊಂದಿಗೆ ಸಭೆ ನಡೆಸಲಾಗುವುದು. ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಯವ್ಯಯದಲ್ಲಿ 8000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಶಾಸಕರಿಗೆ ನೀಡಿದಂತೆ ಎಂಎಲ್ ಸಿ ಗಳಿಗೂ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಮೀಸಲಿರಿಸಿರುವ 8000 ಕೋಟಿ ರೂ.ಗಳಲ್ಲಿ ಎಂಎಲ್ ಸಿ ಗಳಿಗೂ ಅನುದಾನ ನೀಡಲು ಪರಿಶೀಲಿಸುವುದಾಗಿ ಆಶ್ವಾಸನೆ ನೀಡಲಾಗಿದೆ ಎಂದು ತಿಳಿಸಿದರು.

ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಜನರನ್ನು ಬಂಧಿಸಲಾಗಿದೆ, ಯಾವುದೇ ಜಾತಿ ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಬಿಜೆಪಿಯವರು ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಚಲೋ ಎಂಬ ಕಾರ್ಯಕ್ರಮ ಮಾಡಿದರು. ಆರ್ ಎಸ್ ಎಸ್ ಸಂಘಟನೆಯವರು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದವರು ಇದರಲ್ಲಿ ಪಾಲ್ಗೊಂಡು,  ಶಾಂತಿ ಕದಡುವ ಕೆಲಸವನ್ನು ಮಾಡುತ್ತಾರೆಂಬ ಕಾರಣಕ್ಕೆ  ಪೊಲೀಸರು ಚಾಮುಂಡಿ ಬೆಟ್ಟ ಚಲೋ ಗೆ ಅನುಮತಿ ನೀಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು.? ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ  ಯಾವುದೇ ಬಿಜೆಪಿಯವರು ಧ್ವನಿ ಎತ್ತಲಿಲ್ಲವೇಕೆ? ಮಣಿಪುರದಲ್ಲಿ ಹಿಂಸಾಚಾರ ನಡೆದರೂ, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ ಎಂದು ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾಗೆ ದೂರು ನೀಡಿರುವುದಕ್ಕೆ ಸಿಎಂ ತಿರುಗೇಟು ನೀಡಿದರು.

Related Articles

Comments (0)

Leave a Comment