ಚಾಮುಂಡೇಶ್ವರಿ ದೇಗುಲ ಸಾರ್ವಜನಿಕರ ಆಸ್ತಿ,ದೇವರಿಗೆ ಜಾತಿ ಧರ್ಮವಿಲ್ಲ; ಡಿಕೆ ಶಿವಕುಮಾರ್

ಬೆಂಗಳೂರು: ತಾಯಿ‌ ಚಾಮುಂಡೇಶ್ವರಿ ದೇವಿ ದೇಗುಲ ಸಾರ್ವಜನಿಕರ ಆಸ್ತಿ. ನಾಡಧ್ವಜ, ನಾಡದೇವಿ, ರಾಷ್ಟ್ರಧ್ವಜ ಹಾಗೂ ದೇವರಿಗೆ ಜಾತಿ, ಧರ್ಮ ಬಣ್ಣದ ರಾಜಕೀಯ ಲೇಪನ‌ ಮಾಡುವ ಅಗತ್ಯವಿಲ್ಲ,ಗಾಳಿ,ನೀರು,ಬೆಳಕಿನ ರೀತಿ ದೇವರಿಗೂ ಜಾತಿ, ಧರ್ಮವಿಲ್ಲ ಎಂದು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು,ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ, ಇದನ್ನೇ ನಾನು ನಂಬಿದ್ದೇನೆ,ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು.‌ ರಾಜ ವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿ.”ನಾಡದೇವಿಯ ದೇವಸ್ಥಾನಕ್ಕೆ ಕೇವಲ ಹಿಂದುಗಳು‌ ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ? ಎಂದು ಪ್ರಶ್ನಿಸಿದರು.

ಮಹಾರಾಜರ ಆಳ್ವಿಕೆ ಕಾಲದಲ್ಲಿಯೂ ವಿದೇಶಗಳಿಂದ ಅತಿಥಿಗಳನ್ನು ದಸರಾಕ್ಕೆ ಆಹ್ವಾನ ಮಾಡುತ್ತಿದ್ದರು. ವಿದೇಶಿ ಧರ್ಮಿಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಚರ್ಚ್,‌ ಮಸೀದಿ, ಜೈನ ಬಸದಿ, ಗುರುದ್ವಾರ ಹೀಗೆ ಎಲ್ಲಾ ಕಡೆ ನಮ್ಮನ್ನು ಒಳಗೆ ಬಿಡುವುದಿಲ್ಲವೇ. ಈ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದರು. ಆದರೆ ಈಗ ಬಾನು ಮುಷ್ತಾಕ್ ಅವರು ಬೆಟ್ಟ ಹತ್ತಬಾರದು,‌ ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ? ಎಂದು ಹೇಳಿದರು.

ನಾನೊಬ್ಬ ಹಿಂದೂ. ಆ ಚಾಮುಂಡಿ ತಾಯಿಗೆ ಎರಡು ಸಾವಿರ ಕಾಣಿಕೆ ನೀಡಿ ನಾನು ಹಾಗೂ ಸಿದ್ದರಾಮಯ್ಯ ಅವರು ಈ ಎರಡು ಸಾವಿರವನ್ನು ಎಲ್ಲಾ ತಾಯಂದಿರಿಗೂ ಕೊಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಿದೆವು. ಆ ತಾಯಿ ನಮಗೆ ಆಶೀರ್ವಾದ ಮಾಡಿದ್ದಾಳೆ.‌ ಈಗ ಕೇವಲ ಹಿಂದೂಗಳಿಗೆ ಮಾತ್ರ ಹಣ ನೀಡುತ್ತಾ ಇದ್ದೇವಾ? ಪಾರ್ಸಿ, ಸಿಖ್, ಮುಸ್ಲಿಂ, ಜೈನ, ಬೌದ್ಧರಿಗೆ ಹಣ ನೀಡುತ್ತಿಲ್ಲವೇ? ಎಂದರು.

ನಾವು ಆಚರಣೆ ಮಾಡುವಷ್ಟು ಹಿಂದೂ ಪದ್ಧತಿಯನ್ನು ಅವರೆಲ್ಲಿ (ಬಿಜೆಪಿ) ಆಚರಣೆ ಮಾಡುತ್ತಾರೆ. ನಾನೇನು ಯಾರ ವಿರುದ್ಧವೂ ಇಲ್ಲ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು. ಯಾವ ಹಿಂದೂ ದೇವಸ್ಥಾನದಲ್ಲಿ ಬೇರೆ ಧರ್ಮದವರು ಬರಬಾರದು ಎಂದು ಹೇಳಿರುವ ಉದಾಹರಣೆ ಇದ್ದರೆ ತೋರಿಸಿ? ಇದು ಬಿಜೆಪಿಯ ರಾಜಕೀಯ ಅಜೆಂಡಾ. ಇಂತಹ ಬಿಜೆಪಿ ಅಲ್ಪಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ ಎಂದರು.

 

Related Articles

Comments (0)

Leave a Comment