ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಮರುಪರಿಶೀಲಿಸಿ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಬೇಕು: ಸಿಎಂ

ಬೆಂಗಳೂರು: ಕೇಂದ್ರ ಸರ್ಕಾರವು ತನ್ನ ನೀತಿಗಳನ್ನು ಮರುಪರಿಶೀಲಿಸಿ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಸಲ್ಲಬೇಕಿರುವ ನ್ಯಾಯಯುತ ಬೆಲೆ ಹಾಗೂ ಗೌರವವನ್ನು ಒದಗಿಸುವಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿಯವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಲ್ಹಾದ್ ಜೋಷಿ ಅವರೇ,ನಾನು ಕರ್ನಾಟಕದ ಕಬ್ಬು ಬೆಳೆಗಾರರ ಸಂಕಷ್ಟದ ಸ್ಥಿತಿಯ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಪ್ರತಿಕ್ರಿಯಿಸಿ ನೀವು ಬರೆದ ಪತ್ರವನ್ನು ಸ್ವೀಕರಿಸಿದ್ದೇನೆ. ಈ ನಡುವೆ ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಶ್ಲಾಘಿಸುತ್ತ, ಕೇಂದ್ರ ಸರ್ಕಾರವು ಮೂಲ ಸಮಸ್ಯೆಯನ್ನು ನಿವಾರಿಸುವಲ್ಲಿ ಅಸಡ್ಡೆ ತೋರುತ್ತಿರುವುದರ ಬಗ್ಗೆ ನಾನು ಗಾಢವಾಗಿ ವಿಷಾಧಿಸುತ್ತಿದ್ದೇನೆ. ಕೇಂದ್ರದ ಧೋರಣೆಯಿಂದ ಕಬ್ಬು ಬೆಳೆಯಲು ತಗಲುವ ವೆಚ್ಚ ಹಾಗೂ ಕಬ್ಬಿನ ಇಳುವರಿಯ ನಡುವೆ ಭಾರಿ ಅಂತರವಿದ್ದು, ಇದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಡುವೆ 2014ರಲ್ಲಿ 210 ರೂ. ಇದ್ದ ಎಫ್ಆರ್‌ಪಿ ಇಂದು 355 ರೂ.ಗೆ ಏರಿಕೆಯಾಗಿದೆ. ಇದು ಕೇವಲ ಶೇ 4.47 ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (ಸಿಎಜಿಆರ್‌) ಆಗಿದೆ. ಎನ್‌ಡಿಎಯ ಎರಡು ಅವಧಿಯಲ್ಲಿ ಎಫ್ಆರ್‌ಪಿ ಏರಿಕೆಯಾಗಿಲ್ಲ, ಇದರಿಂದ ರೈತರಿಗೆ ಭಾರಿ ಪ್ರಮಾಣದ ನಷ್ಟವಾಗಿದೆ. ಅಷ್ಟು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಬೆಳೆಗಾರರಿಗೆ ಪ್ರತಿ ಟನ್‌ ಕಬ್ಬಿಗೆ 20 ರೂ. ನಂತೆ ನಷ್ಟ ಸಂಭವಿಸಿದೆ ಎಂದು ಪತ್ರಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.

ಕಬ್ಬು ಬೆಳೆಗಾರರ ಶ್ರೇಯೋಭಿವೃದ್ಧಿಗಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಫ್ಆರ್‌ಪಿಯನ್ನು ಜಾರಿಗೊಳಿಸಲಾಯಿತು. ಆಗ ಸಿಎಜಿಆರ್‌ ಶೇ 12.96 ಇತ್ತು. ಹಾಗಾಗಿ ಹಣದುಬ್ಬರ ಮತ್ತು ಉತ್ಪಾದನಾ ವೆಚ್ಚದ ಏರಿಕೆ ಬಗ್ಗೆ ಅರಿಯದೆ ಬೇರೆ ಬೇರೆ ಅವಧಿಯ ಅಂಕಿ ಸಂಖ್ಯೆಗಳನ್ನು ಉಲ್ಲೇಖಿಸುವುದು ಉಚಿತವಲ್ಲ. ಈಗ ರಿಕವರಿ ದರವನ್ನು ಕೃತಕವಾಗಿ ಏರಿಕೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ ಇದು ಶೇ 9.5ರಷ್ಟಿತ್ತು. ಇದನ್ನು ಎನ್‌ಡಿಎ ಸರ್ಕಾರ ಶೇ 10.25ಕ್ಕೆ ಏರಿಸಿದೆ. ಇದರ ಪರಿಣಾಮ ಎಫ್ಆರ್‌ಪಿಯನ್ನು ಕಡಿಮೆಯಾಗಿಸಿದೆ. ಶೇ 9.5 ರಿಕವರಿ ದರಕ್ಕೆ ಹೋಲಿಸಿದರೆ ಪ್ರಸ್ತುತ ಎಫ್ಆರ್‌ಪಿ ಟನ್‌ಗೆ ಕೇವಲ 329 ರೂ. ಇದರ ಸಿಎಜಿಆರ್‌ ಪ್ರಮಾಣ ಶೇ 3.8 ಆಗುತ್ತದೆ. ಇಂತಹ ಅಂಕಿಸಂಖ್ಯೆಯ ಚಮತ್ಕಾರವು ರೈತರಿಗೆ ಎಸಗುವ ದ್ರೋಹವಾಗಿದೆ. ರೈತರಿಗೆ ಪಾರದರ್ಶಕತೆ ಬೇಕಿದೆಯೇ ವಿನಃ ನೌಟಂಕಿಯಲ್ಲ ಎಂದಿದ್ದಾರೆ.

ನಿಮ್ಮ ಪತ್ರದಲ್ಲಿ ಎಥನಾಲ್‌ ಮಿಶ್ರಣದಿಂದ ಹಾಗೂ ಎಥನಾಲ್ ಖರೀದಿಯ ಪ್ರಮಾಣದ ಏರಿಕೆಯಿಂದ ಕಬ್ಬು ಬೆಳೆಯ ಕ್ಷೇತ್ರಕ್ಕೆ ಉತ್ತೇಜನ ಸಿಕ್ಕಂತಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೀರಿ. ಎಥನಾಲ್‌ ಮಿಶ್ರಣವು 2023ರಲ್ಲಿ ಶೇ 10ಕ್ಕೆ ತಲುಪಿದ್ದು ಬಿಟ್ಟರೆ ವಾಸ್ತವದಲ್ಲಿ ನೀವು ಹೇಳಿಕೊಂಡಂತೆ ಏನೂ ಆಗಿಲ್ಲ. ಕರ್ನಾಟಕದ ಡಿಸ್ಟಿಲ್ಲರಿಗಳಿಂದ ಎಥನಾಲ್‌ ಪೂರೈಕೆಯು ಕೊಂಚ ಏರಿಕೆಯಾಗಿದೆ. 2022-23ರಲ್ಲಿ 38 ಕೋಟಿ ಲೀಟರ್‌ ಪೂರೈಕೆಯಾಗಿತ್ತು. 2024-25ರಲ್ಲಿ ಇದು ಕೇವಲ 47 ಕೋಟಿ ಲೀಟರ್‌ಗೆ ತಲುಪಿದೆ. ಆದರೆ ಸ್ಥಾಪಿತ ಸಾಮರ್ಥ್ಯವು 270 ಕೋಟಿ ಲೀಟರ್‌. ಕೇಂದ್ರ ಸರ್ಕಾರವು ಹೇಳಿಕೊಳ್ಳುವಂತೆ ದೊಡ್ಡ ಪ್ರಮಾಣದ ಎಥನಾಲ್‌ ಖರೀದಿ ನಡೆದಿಲ್ಲ ಎಂದಿದ್ದಾರೆ.

ಉತ್ತರ ಸಿಗದಿರುವ ದೊಡ್ಡ ಪ್ರಶ್ನೆಯೆಂದರೆ, ಎಥನಾಲ್‌ ಮಿಶ್ರಣದ ಲಾಭವನ್ನು ರೈತರಿಗೆ ಏಕೆ ಹಂಚಿಕೆ ಮಾಡುತ್ತಿಲ್ಲ? ಎಥನಾಲ್‌ ಮಿಶ್ರಣವು ಕಬ್ಬಿನ ವಲಯದಲ್ಲಿ ತೆರಿಗೆ ಸಾಮರ್ಥ್ಯವನ್ನು ಕ್ರಮಬದ್ಧವಾಗಿ ಏರಿಕೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ರೈತರಾಗಿದ್ದಾರೆ. ಹಾಗಾಗಿ ಅವರು ನಿಜವಾದ ಲಾಭದ ಪಾಲುದಾರರಾಗಿದ್ದಾರೆ. 2013ರಲ್ಲಿ ಎಥನಾಲ್‌ ಮಿಶ್ರಣವು ಶೇ 5ಕ್ಕಿಂತ ಕಡಿಮೆ ಇದ್ದರೂ ಹಾಗೂ ರಿಕವರಿ ದರ ಶೇ 9.5 ಇದ್ದರೂ ಯುಪಿಎ ಅವಧಿಯಲ್ಲಿ ಎಫ್‌ಆರ್‌ಪಿ ಅತ್ಯಂತ ನ್ಯಾಯಯುತವಾಗಿತ್ತು. ಇದು ದಾಖಲೆಯ ಶೇ 12.96 ಸಿಎಜಿಆರ್‌ ಆಗಿತ್ತು. ಈಗ ಎಥನಾಲ್‌ ಮಿಶ್ರಣವು ಶೇ 20 ಆಗಿದೆ ಮತ್ತು ರಿಕವರಿ ದರ ಶೇ 10.25ರಷ್ಟಿದೆ. ಆದರೆ ಸಿಎಜಿಆರ್‌ ಶೇ 3.8ಕ್ಕೆ ಕುಸಿದಿದೆ. ದುರಾದೃಷ್ಟವಶಾತ್ ಕೇಂದ್ರ ಸರ್ಕಾರವು ಈ ಅಂಕಿ ಸಂಖ್ಯೆಗಳಿಗೆ ಅನುಗುಣವಾಗಿ ನ್ಯಾಯೋಚಿತ ಬೆಲೆ ನಿಗದಿ ಮಾಡಿಲ್ಲ. ಇದರ ಪರಿಣಾಮ ಕಬ್ಬಿನ ಉತ್ತಮ ಇಳುವರಿಯ ನಡುವೆ ಅವೈಜ್ಞಾನಿಕ ಎಫ್ಆರ್‌ಪಿ ಹಾಗೂ ರಿಕವರಿ ದರದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರವು ಸಕ್ಕರೆಗೆ ಗೃಹಬಳಕೆ ಹಾಗೂ ವಾಣಿಜ್ಯಿಕ ಬಳಕೆ ಎಂಬ ಪ್ರತ್ಯೇಕ ವರ್ಗವಿರುವ ಹೊಸ ಎಮ್‌ಎಸ್‌ಪಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಬೇಕು. ಇದರಿಂದ ವಾಣಿಜ್ಯ ಸಂಬಂಧಿತ ಮಾರಾಟದಿಂದ ಬರುವ ಹೆಚ್ಚಿನ ಲಾಭವು ರೈತರಿಗೆ ಪಾವತಿಸುವ ದರದಲ್ಲಿ ಪ್ರತಿಫಲಿಸುತ್ತದೆ.

ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರವು ಗಣನೀಯ ಆರ್ಥಿಕ ನೆರವು ಹಾಗೂ ಪ್ರೋತ್ಸಾಹ ಧನ ನೀಡಿರುವುದಾಗಿ ನಿಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದೀರಿ.  ಅದು ವಾಸ್ತವವಾಗಿದ್ದರೆ, ಕರ್ನಾಟಕದ ಕಾರ್ಖಾನೆಗಳಿಗೆ ಯಾವ ರೀತಿ ಸಹಾಯಹಸ್ತ ಚಾಚಿದ್ದೀರಿ ಎಂಬುದನ್ನು ಪ್ರತಿ ಕಾರ್ಖಾನೆಯ ಅಂಕಿಅಂಶಗಳನ್ನು ನೀಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ. ಎಷ್ಟು ಬಟವಾಡೆ ಮಾಡಲಾಗಿದೆ, ನೆರವಿನ ಮಾದರಿ ಯಾವುದು, ಪ್ರಯೋಜನವಾದ ಅವಧಿ ಯಾವುದು ಎಂಬ ಮಾಹಿತಿಗಳನ್ನು ಹಂಚಿಕೊಳ್ಳಿ. ಇದು ಪಾರದರ್ಶಕವಾಗಿದ್ದರೆ, ಪ್ರಯೋಜನಗಳು ಪಾಲುದಾರರಿಗೆ ನಿಜಕ್ಕೂ ತಲುಪಿದೆಯೇ ಹಾಗೂ ಇದು ರೈತರಿಗೆ ನಿಜಕ್ಕೂ ನ್ಯಾಯಯುತ ಆದಾಯವಾಗಿ ಪರಿವರ್ತನೆಗೊಂಡಿದೆಯೇ ಎಂಬುದನ್ನು ರಾಜ್ಯ ಸರ್ಕಾರವು ಹಾಗೂ ರೈತರ ಪ್ರತಿನಿಧಿಗಳು ಪರಿಶೀಲಿಸಬಹುದು ಎಂದಿದ್ದಾರೆ.

ದುರಂತವೆಂದರೆ 2025, ನವೆಂಬರ್ 7ರಂದು ಕಬ್ಬು ದರಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲ ಪಾಲುದಾರರನ್ನು ಆಹ್ವಾನಿಸಲಾಗಿದ್ದ ಸಭೆಗೆ ಕರ್ನಾಟಕದ ಯಾವೊಬ್ಬ ಕೇಂದ್ರ ಸಚಿವರೂ ಆಗಮಿಸಿರಲಿಲ್ಲ. ತಮ್ಮ ಧ್ವನಿಯನ್ನು ರಾಜ್ಯದ ಪ್ರತಿನಿಧಿಗಳು ದೆಹಲಿ ತಲುಪಿಸುತ್ತಾರೆ ಎಂಬ ಭರವಸೆಯನ್ನು ರೈತರು ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಯನ್ನು ಹುಸಿಗೊಳಿಸುವ ಮೂಲಕ ಮತ್ತೊಮ್ಮೆ ಅವರನ್ನು ವಂಚಿಸಲಾಯಿತು ಎಂದಿದ್ದಾರೆ.

ರಾಜ್ಯ ಸರ್ಕಾರವು ತನ್ನ ಮಿತವಾದ ಸಂಪನ್ಮೂಲಗಳಿಂದ ಕಬ್ಬು ಬೆಳೆಗಾರರಿಗೆ ಎಲ್ಲ ರೀತಿಯ ಸಾಧ್ಯ ಪರಿಹಾರವನ್ನು ವಿಸ್ತರಿಸುತ್ತಿರುವಾಗ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಪದೇ ಪದೇ ಮಲತಾಯಿ ಧೋರಣೆ ತೋರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ತೆರಿಗೆಗಳ ಹಂಚಿಕೆ ಮತ್ತು ಅನುದಾನಗಳಲ್ಲಿ ಕರ್ನಾಟಕಕ್ಕೆ ಸೇರಬೇಕಾದ ₹2 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಕೊಟ್ಟಿಲ್ಲ. ಪ್ರತಿ ವರ್ಷ ಕೇವಲ ತೆರಿಗೆ ಹಂಚಿಕೆ ಅನ್ಯಾಯದಿಂದಲೇ ಸುಮಾರು ₹25,000 ಕೋಟಿ ನಷ್ಟವಾಗುತ್ತಿದೆ. ಕರ್ನಾಟಕದ ಹಿರಿಯ ಕೇಂದ್ರ ಸಚಿವರಾಗಿರುವ ನೀವು, ನಿಮ್ಮ ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ. ಬಿಸಿಲಿನಡಿ ಶ್ರಮ ಪಡುತ್ತಿರುವ ಕಬ್ಬು ಬೆಳೆಗಾರರ ಜೊತೆ ನಿಲ್ಲಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಆಡಳಿತದ ನಿಜವಾದ ಮಾನದಂಡವು ಅಂಕಿಸಂಖ್ಯೆಗಳ ಉಲ್ಲೇಖವಲ್ಲ, ರೈತರ ಮುಖದ ಮೇಲಿನ ಮಂದಹಾಸ ಎಂಬುದನ್ನು ನೆನಪಿನಲ್ಲಿಡಿ ಎಂದಿದ್ದಾರೆ.

ಕೇಂದ್ರ ಸರ್ಕಾರವು ತನ್ನ ನೀತಿಗಳನ್ನು ಮರುಪರಿಶೀಲಿಸಿ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಸಲ್ಲಬೇಕಿರುವ ನ್ಯಾಯಯುತ ಬೆಲೆ ಹಾಗೂ ಗೌರವವನ್ನು ಒದಗಿಸುವಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತದೆ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ ಎಂದಿದ್ದಾರೆ.

Related Articles

Comments (0)

Leave a Comment