ನನ್ನ ಸೋಲಿಗೂ ಬಿಜೆಪಿಯ ಮತಗಳ್ಳತನ ತಂತ್ರ ಕಾರಣ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು:12 ಚುನಾವಣೆ ಗೆದ್ದಿರುವ ನನಗೆ 2019 ರಲ್ಲಿ ಆದ ಮೊದಲ ಸೋಲಿಗೆ ಕಾರಣ ಬಿಜೆಪಿಯ ಮತಗಳ್ಳತನವೇ ಆಗಿದೆ, ರಾಹುಲ್‌ ಗಾಂಧಿ ಅವರು ಈಗ ಬಿಜೆಪಿಯ ಚುನಾವಣಾ ಗೆಲುವಿನ ನಿಜ ಬಣ್ಣ ಬಯಲು ಮಾಡಿದ್ದಾರೆ ಎಂದು ಎಐಸಿಸೊ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಡೆದ ಚುನಾವಣಾ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಫ್ರೀಡಂಪಾರ್ಕ್ ನಲ್ಲಿ ಕಾಂಗ್ರೆಸ್ ನಿಂದ ನಡೆಸ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆರು ವರ್ಷಗಳ ಹಿಂದೆ 2019ರಲ್ಲಿ ನಾನು ಮೊದಲ ಬಾರಿಗೆ ಸೋತಾಗಲೇ ನಾನು ಹೇಳಿದ್ದೆ. ನನ್ನ ಜೀವನದಲ್ಲಿ 12 ಚುನಾವಣೆ ಗೆದ್ದ ನಾನು ಸೋಲು ಕಂಡ ಏಕೈಕ ಚುನಾವಣೆ ಅದಾಗಿತ್ತು. ಆಗಲೂ ಇದೇ ರೀತಿ ಅಕ್ರಮ ಮಾಡಿದ್ದರು. ಆದರೆ ನಮಗೆ ಆಗ ಇದರ ಅರಿವಾಗಿರಲಿಲ್ಲ. ಆಗ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ  ನಕಲಿ ಮತದಾನ ಮಾಡಿ ನಮ್ಮನ್ನು ಟಾರ್ಗೆಟ್ ಮಾಡಿದ್ದರು. ಈಗ ಎಲ್ಲವೂ ಬಯಲಿಗೆ ಬಂದಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಬಹಳ ಸೂಕ್ಷ್ಮವಾಗಿ ಈ ಎಲ್ಲಾ ಅಕ್ರಮವನ್ನು ಹೊರಗೆ ತಂದಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಮತದಾನದ ಬಗ್ಗೆ ಗಮನಹರಿಸಬೇಕು ಎಂದರು.

2024ರ ಚುನಾವಣೆಯನ್ನು ಮೋದಿ ಅಂಡ್ ಕಂಪನಿ ಗೆದ್ದಿಲ್ಲ. ಕಳ್ಳತನದಿಂದ ಚುನಾವಣೆ ಗೆದ್ದಿದ್ದು, ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ಅವರ ಅಕ್ರಮ ಹೊರಗೆ ತಂದು ಜನರಿಂದ ಛೀಮಾರಿ ಹಾಕಿಸುತ್ತೇವೆ. ಜನ ಬೆಂಬಲ ಇಲ್ಲದ ಪ್ರಧಾನಮಂತ್ರಿ ಇಂದು ನಮ್ಮ ದೇಶದಲ್ಲಿದ್ದಾರೆ. ಅವರನ್ನು ಕೆಳಗಿಳಿಸುವುದಷ್ಟೇ ಅಲ್ಲ, ಅವರಿಗೆ ಬುದ್ಧಿ ಕಲಿಸಬೇಕು. ಅವರು ದೇಶದ ಆರ್ಥಿಕತೆ ಕೆಡಿಸುತ್ತಿದ್ದು, ಜನ ನೆಮ್ಮದಿ ಕಳೆದುಕೊಳ್ಲುವಂತಾಗಿದೆ. ಅವರು ನೋಟು ರದ್ದತಿ ಸೇರಿದಂತೆ ಅನೇಕ ತಪ್ಪು ಮಾಡಿ ದೇಶವನ್ನು ನಾಶ ಮಾಡಿದ್ದಾರೆ. ಈಗ ಮತ್ತೊಂದು ತಪ್ಪು ಮಾಡಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಎಲ್ಲರೂ ಈ ಚುನಾವಣೆ ಕಳ್ಳತನ ಕಂಡು ಹಿಡಿದು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿಯ ಶಾಖಾ ಕಚೇರಿ ಆದ ಚುನಾವಣಾ ಆಯೋಗ:

ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ.  ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಂಚನೆ ಕಾರಣದಿಂದ ಸೆಂಟ್ರಲ್ ಲೊಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದೆಯೇ ಹೊರತು ಜನಾಭಿಪ್ರಾಯ ಕಾಂಗ್ರೆಸ್ ಪರವಾಗಿಯೇ ಇತ್ತು ಎನ್ನುವುದು ಈಗ ಗೊತ್ತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 14 ಸೀಟುಗಳನ್ನು ಗೆಲ್ಲಬೇಕಿತ್ತು. ಆದರೆ ಮತಕಳ್ಳತನದ ಕಾರಣದಿಂದ ನಾವು ಸೋತಿದ್ದೇವೆ. EVM ಬಂದ ಮೇಲೆ ಇವನ್ನು ದುರುಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿರುವುದು ಈಗ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿರುವ ಹಿನ್ನೆಲೆಯಲ್ಲಿ  ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಚಿಲುಮೆ ಮೂಲಕ ಬಿಜೆಪಿ ಅಕ್ರಮ:

ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, “ಬಿಜೆಪಿಯವರು ಚಿಲುಮೆ ಸಂಸ್ಥೆ ಮೂಲಕ ತಮ್ಮ 8 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಎಲ್ಓ ಗಳಾಗಿ ನೇಮಿಸಿತ್ತು. ಇದರ ವಿರುದ್ಧ ಹೋರಾಟ ಮಾಡಿ ನಾವು ನಿಯಂತ್ರಣ ಮಾಡಿದೆವು. ಚುನಾವಣೆ ಫಲಿತಾಂಶದ ಸಂದರ್ಭದಲ್ಲೇ ದೂರು ನೀಡಬೇಕಿತ್ತು. ಆದರೆ ದೇಶದಲ್ಲಿ ಇದುವರೆಗೂ ಚುನಾವಣಾ ದೂರುಗಳು ಇತ್ಯರ್ಥವಾಗಿಲ್ಲ. ಹೀಗಾಗಿ ನಾವು ಅದನ್ನು ಬಿಟ್ಟಿದ್ದೆವು. ಈಗ ಜನರ ಮುಂದೆ ಈ ಅಕ್ರಮಗಳನ್ನು ಬಹಿರಂಗಪಡಿಸಲು ತೀರ್ಮಾನಿಸಿದ್ದೇವೆ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಈ ಅಕ್ರಮಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟ ಪಕ್ಷದ ಮುಖಂಡರಾಗಿ ಅವರು ಧ್ವನಿ ಎತ್ತುತ್ತಿದ್ದಾರೆ. ನಮ್ಮ ಹಕ್ಕು, ನಮ್ಮ ಪ್ರಜಾಪ್ರಭುತ್ವವನ್ನು ನಾವು ಕಾಪಾಡಬೇಕು” ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರು. ದೇಶ, ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ವ್ಯವಸ್ಥೆ, ಮತದಾರರ ರಕ್ಷಣೆಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಅಧ್ಯಯನ ಮಾಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆಂತರಿಕ ಸಂಶೋಧನಾ ತಂಡವನ್ನು ಹೊಂದಿದೆ. ಅದು ಚುನಾವಣೆ ಅಕ್ರಮಗಳ ಬಗ್ಗೆ ಸಂಶೋಧನೆ ಮುಂದುವರೆಸಿದೆ ಎಂದರು.

Related Articles

Comments (0)

Leave a Comment