ಸರಳೀಕೃತ ಜಿ.ಎಸ್.ಟಿ ಸ್ವಾಗತಿಸಿ ಬಿಜೆಪಿ ಸಂಭ್ರಮಾಚರಣೆ; ಸಿಎಂ ಟೀಕೆ
- by Suddi Team
- September 23, 2025
- 6 Views

ಬೆಂಗಳೂರು: ಸರಳೀಕೃತ ಜಿ.ಎಸ್.ಟಿ. ಸ್ವಾಗತಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ಅಭಿನಂದಿಸಿ ಸಂಭ್ರಮಾಚರಣೆ ನಡೆಸಿದರೆ, ಜಿಎಸ್ಟಿ ಜಾರಿ ಮಾಡಿದ್ದೂ ಮೋದಿ. ಜಿಎಸ್ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ. ಸರ್ಕಾರವು ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆಯನ್ನು ಜಾರಿ ಮಾಡಿರುವುದನ್ನು ಸ್ವಾಗತಿಸಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಜಿ.ಎಸ್.ಟಿ. ಸರಳೀಕರಣಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜೈ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜೈ ಎಂದು ಘೋಷಣೆಗಳನ್ನು ಕೂಗಲಾಯಿತು. ನಂತರ ಮಲ್ಲೇಶ್ವರದ ಮಳಿಗೆಗಳಿಗೆ ಹೋಗಿ ಸಿಹಿ ಹಂಚಲಾಯಿತು.
ಇನ್ನು ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆ ಜಾರಿ ಮಾಡಿರುವುದನ್ನು ಸ್ವಾಗತಿಸಿ ಶಿವಮೊಗ್ಗದ ಅಂಗಡಿ- ಮಳಿಗೆಗಳಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಮತ್ತೊಂದೆಡೆ ಮಂಡ್ಯದ ಕಾಮನಗುಡಿ ಸರ್ಕಲ್, ಪೇಟೆ ಬೀದಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ಎರಡು ಸ್ಲ್ಯಾಬ್ ಜಿಎಸ್‍ಟಿ ಜಾರಿಗೊಳಿಸಿದ್ದಾರೆ. ಈ ಮೂಲಕ ಜನರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ಅದಕ್ಕಾಗಿ ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಜನತೆಯ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸಲು ಈ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ:
ಒಂದೆಡೆ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬರೀ ಡೋಂಗಿ. ಜಿಎಸ್ಟಿ ಜಾರಿ ಮಾಡಿದ್ದೂ ಮೋದಿ. ಜಿಎಸ್ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಎಂಟು ವರ್ಷ ವಿಪರೀತ ಜಿಎಸ್ಟಿ ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡ್ತೀರಾ? ಜಿಎಸ್ಟಿ 18%, 28% ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತಗೊತಾ ಇದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು ಎಂದರು.
Related Articles
Thank you for your comment. It is awaiting moderation.
Comments (0)