ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧ ಅಸಾಧ್ಯ; ಬಸವರಾಜ ಬೊಮ್ಮಾಯಿ
- by Suddi Team
- July 11, 2025
- 41 Views

ಗದಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ನಿಷೇಧ ಅಂದು ನೆಹರು, ಇಂದಿರಾ ಕೈಯಲ್ಲೇ ಆಗಲಿಲ್ಲ ಎನ್ನುವುದನ್ನು ಈಗ ಮತ್ತೆ ನಿಷೇಧ ಮಾಡುವ ಹೇಳಿಕೆ ನೀಡುವವರು ಅರ್ಥೈಸಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಗದಗನಲ್ಲಿ ಸಿಟಿಜನ್ ಫಾರ್ ಸೋಸಿಯಲ್ ಜಸ್ಟೀಸ್ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ ಪರಿವಾರವನ್ನು ನಿಷೇಧ ಮಾಡಬೇಕೆಂದು ಆಗಲೇ ಪಯತ್ನ ಮಾಡಿದ್ದರು. ನೆಹರೂ, ಇಂದಿರಾ ಗಾಂಧಿಗೂ ಅದು ಸಾಧ್ಯವಾಗಿಲ್ಲ. ಈಗ ಪ್ರಿಯಾಂಕ್ ಖರ್ಗೆ ನಿಷೇಧ ಮಾಡುತ್ತೇನೆ ಎಂದು ಹೇಳುತ್ತಾರೆ. ಅವರಿಗೆ ತಮ್ಮ ಮಾತನ್ನು ಒರೆಗೆ ಹಚ್ಚಲು ಆಗುವುದಿಲ್ಲ ಎಂದು ಖಾತ್ರಿ ಇದೆ. ಏಕೆಂದರೆ, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ ಎಂದರು.
ಈ ದೇಶದ ಸಾಮಾಜಿಕವಾಗಿ ಆರ್ಥಿಕವಾಗಿ ಬೆಳೆಯುತ್ತಿದೆ. ಅದಕ್ಕೆ ಮೋದಿಯವರು ಇದು ಭಾರತದ ಯುಗ. ಇದು ಭಾರತವನ್ನು ಉತ್ತುಂಗಕ್ಕೆ ಏರುವ, ಅಭಿವೃದ್ಧಿ ಹೊಂದುವ ಯುಗ ಯಹಿ ಸಮಯ್, ಸಹಿ ಸಮಯ್ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಯಾವುದು ಅಸಾಧ್ಯ ಅನ್ನುತ್ತಿದ್ದರೋ ಅದನ್ನು ಮೋದಿ ಸಾಧ್ಯ ಮಾಡಿ ತೋರಿಸಿದ್ದಾರೆ. ಜನಸಂಖ್ಯೆ ದೊಡ್ಡ ಆತಂಕ ಅಂತ ಹೇಳಿದ್ದರು. ನಾವಿಬ್ಬರು ನಮಗಿಬ್ಬರು ಎಂದು ಹೇಳುತ್ತಿದ್ದರು. ಅದನ್ನು ಮೋದಿಯವರು ಜನಸಂಖ್ಯೆಯೇ ದೇಶದ ಆಸ್ತಿ ಎಂದು ಪರಿವರ್ತಿಸಿದರು. ಆತಂಕವನ್ನು ಅವಕಾಶವಾಗಿ ಬದಲಾಯಿಸಿದರು ಎಂದರು.
ಮೋದಿ ಅವರು ಜನಸಂಖ್ಯೆಯನ್ನು ಭಾರತದ ಆಸ್ತಿಯಾಗಿ ಪರಿವರ್ತನೆ ಮಾಡಿದ್ದಾರೆ. ಬಡತನ ನಿರ್ಮೂಲನೆ ಮಾಡಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಇದನ್ನು ವಿದೇಶಿ ಸಂಸ್ಥೆಗಳು ಹೇಳಿವೆ. ಅದಕ್ಕಾಗಿ ವಿದೇಶದಲ್ಲಿ ನರೇಂದ್ರ ಮೋದಿಯವರಿಗೆ ಮರ್ಯಾದೆ ಸಿಗುತ್ತಿದೆ. ಭಾರತ ಬಡತನದ ಹೆಸರಿನಲ್ಲಿ ಕುಗ್ಗಿ ಹೋಗಿತ್ತು. ಈಗ ಭಾರತ ಬಡವರ ದೇಶ ಅಲ್ಲ. ಬಲಿಷ್ಠ ದೇಶ. ಇಷ್ಟೆಲ್ಲ ಮಾಡುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಬಹಳ ಅವಶ್ಯಕತೆ ಇದೆ. ವಿವಿಧ ಭಾಷೆ, ಸಂಸ್ಕೃತಿ, ವೈಚಾರಿಕತೆ ನಡುವೆ ಸಮನ್ವಯ ಸಾಧಿಸಿ ದೇಶ ನಡೆಸುವುದು ಸುಲಭವಲ್ಲ. ದೇವರ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ ಎಂದರು.
ರಾಜ್ಯದಲ್ಲಿ ದರಿದ್ರ ಸರ್ಕಾರ:
ಕರ್ನಾಟಕದಲ್ಲಿ ಅತ್ಯಂತ ದರಿದ್ರ ಸರ್ಕಾರ ಇದೆ. ಕಳೆದ ಒಂದೂವರೆ ವರ್ಷದಿಂದ ಮಳೆ ಹಾನಿಗೆ ಪರಿಹಾರ ನೀಡಿಲ್ಲ. ಶಾಲಾ ಮಕ್ಕಳಿಗೆ ಶೂ ಕೊಡಲು ಆಗುತ್ತಿಲ್ಲ. ಗುತ್ತಿಗೆ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಎನ್ಆರ್ಇಜಿ ಕಾರ್ಮಿಕರಿಗೆ ಆರು ತಿಂಗಳಿಂದ ಹಣ ನೀಡಿಲ್ಲ. ಕೇಂದ್ರ ನೀಡಿರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಇದೊಂದು ದರಿದ್ರ ಸರ್ಕಾರ. ಮುಖ್ಯಮಂತ್ರಿ ಯಾರಾದರೇನು ನಮ್ಮ ಬದುಕು ಸರಿಯಾಗುತ್ತಿಲ್ಲ ಎಂದು ಜನರು ಬೇಸರಗೊಂಡಿದ್ದಾರೆ. ಇದಕ್ಕೆ ಒಂದೇ ಪರಿಹಾರ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗಬೇಕು ಎಂದರು.
ತುರ್ತು ಪರಿಸ್ಥಿತಿಯ ವಿರುದ್ಧ ನಮ್ಮ ಹಿರಿಯರು ಮಾಡಿರುವ ಹೋರಾಟದ ಕಿಚ್ಚು ಇನ್ನೂ ನಮ್ಮ ಎದೆಯಲ್ಲಿದೆ. ನಮ್ಮ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ನಮ್ಮ ಹಕ್ಕಿಗಾಗಿ ಈ ರಾಜ್ಯ ಉಳಿಸುವ ಸಲುವಾಗಿ ಮತ್ತೊಮ್ಮೆ ಸಂಘರ್ಷ ಆಗುತ್ತದೆ. ನಾವು ನಮ್ಮ ಕರ್ತವ್ಯ ಮಾಡೋಣ ಎಂದು ಕರೆ ನೀಡಿದರು.
ಹುಬ್ಬಳ್ಳಿಯಲ್ಲಿ ನಾನು ಅನಂತಕುಮಾರ ಇಬ್ಬರೂ ಕ್ಲಾಸ್ಮೇಟ್ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಮಾಡಿದೆವು. ನನಗೆ ಕೈಗೆ ಪೆಟ್ಟು ಬಿತ್ತು. ಅನಂತ ಕುಮಾರ್ ಅವರು ಬಂಧನವಾದರು. ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನಾವು ನೋಡಿದ್ದೇವೆ. ಯಾರೂ ಗುಂಪು ಕಟ್ಟಿಕೊಂಡು ಮಾತನಾಡುವಂತಿಲ್ಲ. ಸಂಪೂರ್ಣ ಸ್ಥಬ್ದ ಮಾಡಿದ್ದರು. ಸಾವಿರಾರು ಜನ ಸತ್ತರು. ಯಾಕೆ ಸತ್ತರು ಎಂದು ಯಾರೂ ಕೇಳುವಂತಿಲ್ಲ. ಲಾಲು ಪ್ರಸಾದ ಯಾದವ್ ಅವರು ತಮ್ಮ ಮಗಳಿಗೆ ಮೀಸಾ ಅಂತ ಹೆಸರಿಟ್ಟಿದ್ದಾರೆ. ಯಾಕೆಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹುಟ್ಟಿದ್ದಳು. ಕಾಂಗ್ರೆಸ್ನವರು ಅವರನ್ನು ಮೀಸಾ ಅಡಿಯಲ್ಲಿ ಬಂಧಿಸಿದ್ದರು. ಈಗ ಅವರ ಜೊತೆಯೇ ಲಾಲು ಪ್ರಸಾದ್ ರಾಜಕಾರಣ ಮಾಡುತ್ತಿದ್ದಾರೆ. ಈ ದೇಶದ ದುರ್ದೈವ. ಮೀಸಾ ಅಡಿಯಲ್ಲಿ ಶೇ. 70 ಜನಸಂಘದವರು ಬಂಧನವಾಗಿದ್ದರು. ಸುಮಾರು 66 ಸಾವಿರ ಜನರಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಜನಸಂಘದವರೇ ಇದ್ದರು ಎಂದು ಹೇಳಿದರು.
Related Articles
Thank you for your comment. It is awaiting moderation.
Comments (0)