ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ;ರಾಜೀವ್ ಗಾಂಧಿ ವಿವಿ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ
- by Suddi Team
- October 4, 2025
- 28 Views

ಬೆಂಗಳೂರು:ಮೈಸೂರಿನ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್ವಪೂರ್ಣ ಸಾಧನೆಯನ್ನು ದಾಖಲಿಸಿದೆ.
‘ಆರೋಗ್ಯಪೂರ್ಣ ಮನಸ್ಸು, ನಶಾಮುಕ್ತ ಕ್ಯಾಂಪಸ್’ ಎಂಬ ಥೀಮ್‌ನೊಂದಿಗೆ ಗಮನಸೆಳೆದ ಸ್ತಬ್ಧಚಿತ್ರ ಕೇಂದ್ರ/ರಾಜ್ಯ ಹಾಗೂ ವಿವಿಧ ನಿಗಮಗಳ ವಿಭಾಗದಲ್ಲಿ ಎರಡನೇ ಬಹುಮಾನಕ್ಕೆ ಪಾತ್ರವಾಯಿತು.ಈ ಪ್ರಯತ್ನವು ರಾಷ್ಟ್ರ ಮಟ್ಟದ ‘ನಶಾ ಮುಕ್ತ ಭಾರತ’ ಅಭಿಯಾನದ ಮುಂದುವರಿದ ಭಾಗವಾಗಿದ್ದು, ವಿದ್ಯಾರ್ಥಿಗಳಲ್ಲಿ ನಶಾಪದಾರ್ಥ ಬಳಕೆಯನ್ನು ತಡೆಗಟ್ಟುವ ಹಾಗೂ ಸ್ವಸ್ಥ ಪರಿಸರವನ್ನು ಉತ್ತೇಜಿಸುವ ವಿಶ್ವವಿದ್ಯಾಲಯದ ನಿರಂತರ ಪ್ರಯತ್ನಗಳ ಭಾಗವಾಗಿದೆ.
ಈ ಕುರಿತು ಸಂತಸ ಹಂಚಿಕೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ.ನಮ್ಮ ನಿಷ್ಠೆ ಮತ್ತು ಸೇವಾಭಾವನೆಗೆ ದಕ್ಕಿದ ಈ ಗೌರವವು ನಮಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯಕ್ಕೆ ನೀಡಲಾದ ಪ್ರಾಧಾನ್ಯತೆಗೆ, ಅವರ ಶ್ರೇಯೋಭಿವೃದ್ಧಿಗಾಗಿ ವಿಶ್ವವಿದ್ಯಾಲಯ ಮಾಡಿದ ಕೆಲಸಕ್ಕೆ ಸಿಕ್ಕ ಮನ್ನಣೆಯಾಘಿದೆ. ಈ ಬಹುಮಾನ ನಮ್ಮ ಮುಂದಿನ ಕಾರ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ.” ಎಂದರು.
ಕಾಲಚಕ್ರ – ಜೀವನದ ಪಯಣ:
ಮಧು ಮೋಹನ್ ಆರ್. (INCUBE) ಅವರು ರೂಪಿಸಿ ವಿನ್ಯಾಸಗೊಳಿಸಿದ ಈ ವರ್ಷದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರವು ಕಾಲಚಕ್ರದ ಪರಿಣಾಮಕಾರಿ ಹಾಗೂ ಸಾಂಕೇತಿಕ ಅರ್ಥವನ್ನು ಪ್ರತಿನಿಧಿಸಿತು. ಇದನ್ನು ಬಲವಾದ ದೃಶ್ಯಪ್ರತಿಮೆಗಳಿಂದ ವಿನ್ಯಾಸಗೊಳಿಸಲಾದ ಒಂದು ಮರದ ಎರಡು ವಿಭಿನ್ನ ಮುಖಗಳನ್ನು ತೋರಿಸುವಂತೆ ಚಿತ್ರಿಸಲಾಗಿತ್ತು.
ಒಂದು ಬದಿ ಜೀವಂತಿಕೆಯನ್ನು ಪ್ರತಿನಿಧಿಸುವ, ಜೀವಕಳೆ ಹೊತ್ತ ಚೈತನ್ಯದ ಮುಖ, ಇನ್ನೊಂದು ಬದಿ ದುಶ್ಚಟಗಳಿಗೆ ಒಳಗಾಗಿ ತನ್ನನ್ನು ತಾನೇ ಶೋಷಣೆಗೆ ಒಳಪಡಿಸಿಕೊಂಡ ರೋಗಗ್ರಸ್ಥ, ಕಳೆಗುಂದಿದ ಮುಖ. ಈ ಪರಿಣಾಮಕಾರಿ ವ್ಯತ್ಯಾಸಗಳು ಜೀವನದ ಎರಡು ವಿಭಿನ್ನ ದಿಕ್ಕುಗಳನ್ನು ಸೂಚಿಸುವಂತಿದ್ದವು.
ಮಾದಕವಸ್ತು ಬಳಸುವಂತೆ ಪ್ರೇರೇಪಿಸುವ ಪರಿಸರ ಹಾಗೂ ಅವಕಾಶಗಳು, ಆಕರ್ಷಣೆಗಳು ಒಂದೆಡೆ. ಮನುಷ್ಯ ಶಿಕ್ಷಣ, ಸಂಸ್ಕಾರ, ವಿವೇಚನೆಯ ಕೈ ಹಿಡಿದರೆ ಅಂತಹ ಕ್ಷಣಿಕ ಆಕರ್ಷಣೆಗಳಿಂದ ಬಿಡಿಸಿಕೊಂಡು ಆರೋಗ್ಯಕರ ಜೀವನವನ್ನು ಆಯ್ದುಕೊಳ್ಳಬಹುದು ಎನ್ನುವ ತಿಳಿವಳಿಕೆ ಮತ್ತೊಂದು ಕಡೆ. ಒಂದು ಮುಖ ವಿನಾಶವನ್ನು, ಮತ್ತೊಂದು ಮುಖ ಪ್ರಗತಿಯನ್ನು ಸಂಕೇತಿಸುವಂತೆ ವಿನ್ಯಾಸಗೊಳಿಸಲಾಗಿತ್ತು.
ಕಾಲವು ಯಾವತ್ತೂ ಮುಂದಕ್ಕೆ ಸಾಗುತ್ತಿರುತ್ತದೆ; ಅದು ನಿಲ್ಲುವುದಿಲ್ಲ, ಹಿಮ್ಮುಖವಾಗಿ ಸಾಗುವುದೂ ಇಲ್ಲ. ಇದು ನಮ್ಮ ಕ್ರಿಯೆಗಳನ್ನು ಫಲಿತಾಂಶಗಳಾಗಿ, ಮತ್ತು ಆಯ್ಕೆಗಳನ್ನು ವಿಧಿಲಿಖಿತವಾಗಿ ರೂಪಿಸುತ್ತಾ ಸಾಗುತ್ತದೆ. ಇದನ್ನು ತಡೆಯಲಾಗದು, ಬದಲಾಯಿಸಲೂ ಆಗದು. ಆದರೆ ಪರಿಣಾಮಕಾರಿ, ವಿಚಾರಪೂರ್ಣ ನಿರ್ಧಾರಗಳಿಂದ ಅರ್ಥಪೂರ್ಣ ಬದಲಾವಣೆಗಳನ್ನು ತಂದುಕೊಳ್ಳಬಹುದು ಎನ್ನುವುದನ್ನು ಪ್ರತಿಪಾದಿಸಿತು.
ಪ್ರತಿ ದಾರವೂ ಜೀವನದ ಒಂದು ಭಾಗ. ಜೀವನವು ಒಬ್ಬ ವ್ಯಕ್ತಿಯ ಒಂದು ಎಳೆಯೊಂದೇ ಅಲ್ಲ — ಅದು ಹಲವಾರು ಎಳೆಗಳಿಂದ ರಚಿಸಲಾದ ಒಟ್ಟುಜಾಲ. ಪ್ರತಿಯೊಂದು ನಿರ್ಧಾರವೂ ಒಂದು ಎಳೆಯನ್ನೂ ಎಳೆಯುತ್ತದೆ, ಈ ಎಳೆಗಳೇ ನಮ್ಮ ಭವಿಷ್ಯದ ರೂಪವನ್ನು ಬದಲಾಯಿಸುತ್ತವೆ. ಉದಾಹರಣೆಗೆ ದುಶ್ಚಟಗಳತ್ತ ಎಳೆಯುವ ದಾರ ಒಂದೆಡೆಯಾದರೆ, ಅತ್ತ ಆಕರ್ಷಿತರಾಗದಂತೆ ತಡೆಯುವ ದಾರವೂ ಇನ್ನೊಂದೆಡೆ ಇದ್ದೇ ಇರುತ್ತದೆ. ನಮ್ಮ ಆಯ್ಕೆ ದುಶ್ಚಟವಾದರೆ ಅದೇ ದಾರ ಗೆಲ್ಲುತ್ತದೆ. ನಮ್ಮ ಆಯ್ಕೆ ಸ್ವಸ್ಥ ಬದುಕು ಎನ್ನುವುದಾದರೆ ಮತ್ತೊಂದು ಎಳೆ ಗೆಲ್ಲುತ್ತದೆ.
ಸ್ತಬ್ಧಚಿತ್ರದ ಎರಡೂ ಬದಿಗಳಿಂದ ಹೊರಬರುವ ಭಾರೀ ಕೈಗಳು ಕಾಲಚಕ್ರದ ಎರಡು ಸಾಧ್ಯತೆಗಳನ್ನು ತಿಳಿಸುತ್ತವೆ. ಒಂದು ಬದುಕಿನ ಸೂತ್ರವನ್ನು ಹಿಡಿಯಬಹುದು ಅಥವಾ ಅದರ ಮೇಲಿನ ಹಿಡಿತವನ್ನು ಕಳೆದುಕೊಳ್ಳಬಹುದು. ನಿಮ್ಮ ಬದುಕಿನ ಚಕ್ರವನ್ನು ನಿಮ್ಮ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಅಥವಾ ಮಾದಕವಸ್ತುಗಳಿಗೆ ಶರಣಾಗಿ ಅದನ್ನು ನಾಶಮಾಡಬಹುದು ಎನ್ನುವ ಶಕ್ತಿಯುತ ಸಾಮಾಜಿಕ ಸಂದೇಶವನ್ನು ನೀಡುವಂತಿತ್ತು.
ಭವಿಷ್ಯದ ದೃಷ್ಟಿಕೋನ – ರಾಮನಗರ ಕ್ಯಾಂಪಸ್:
ಸ್ತಬ್ಧಚಿತ್ರದ ಮುಂಭಾಗದಲ್ಲಿ ಆರ್‌ಜಿಯುಎಚ್‌ಎಸ್ ರಾಮನಗರ ಕ್ಯಾಂಪಸ್‌ನ ನೂತನ ನಿರ್ಮಾಣದ ರೂಪುರೇಷೆಯನ್ನು ಒಳಗೊಂಡಿತ್ತು. ಈ ವಿನ್ಯಾಸವು ಆರ್‌ಜಿಯುಎಚ್‌ಎಸ್ ಸಂಸ್ಥೆಯ ನಾವೀನ್ಯತೆ, ಶ್ರೇಷ್ಠತೆ ಮತ್ತು ಸಮಗ್ರ ಸ್ವಾಸ್ಥ್ಯಕ್ಕೆ ಸಲ್ಲಿಸಿದ ಬದ್ಧತೆಯನ್ನು ಪ್ರತಿಬಿಂಬಿಸುವಂತಿತ್ತು.
Related Articles
Thank you for your comment. It is awaiting moderation.
Comments (0)