ಹೃದಯಾಘಾತ ಅಧಿಸೂಚಿತ ಕಾಯಿಲೆ?; ಹಾಸನ ವರದಿ ಬಳಿಕವಷ್ಟೇ ನಿರ್ಧಾರವೆಂದ ದಿನೇಶ್ ಗುಂಡೂರಾವ್

ಬೆಂಗಳೂರು: ಇತ್ತಿಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಕುರಿತಂತೆ ಹಾಸನ ಸರಣಿ ಹೃದಯಾಘಾತ ಪ್ರಕರಣಗಳ ವರದಿ ಬಂದ ಬಳಿಕವಷ್ಟೇ ಚರ್ಚೆ ನಡೆಸಿ ನಿರ್ಧರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌

ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿವೆ. ಈ ಬಗ್ಗೆ ಹಾಸನ ಆರೋಗ್ಯ ಅಧಿಕಾರಿಗಳ ಜತೆ ಸಂಪರ್ಕಿಸಿ, ಹೃದಯಾಘಾತಗಳ ಬಗ್ಗೆ ವರದಿ ನೀಡುವಂತೆ ತಜ್ಞರ ಸಮಿತಿಗೆ ತಿಳಿಸಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈಗಾಗಲೇ ಕೋವಿಡ್ ಅಡ್ಡ ಪರಿಣಾಮದಿಂದ ಆಗಿರುವ ಸಾವುಗಳು, ಹೃದಯಾಘಾತಗಳ ಕುರಿತಂತೆ ಸಂಶೋಧನೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿತ್ತು. ಇದೀಗ ಹಾಸನ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ಇದೇ ಸಮಿತಿಗೆ ಜವಾವ್ದಾರಿ ವಹಿಸಲಾಗಿದೆ. 10 ದಿನಗಳ ಒಳಗಾಗಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.‌

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ರಾಜ್ಯದ ಆರೋಗ್ಯ ಇಲಾಖೆಯಿಂದ ಈ ಮಟ್ಟದ ಸಂಶೋಧನೆ ನಡೆಸುವುದು ಕಷ್ಟ. ವಿಶ್ವ ಆರೋಗ್ಯ ಸಂಸ್ಥೆ (WHO), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂತಹ ಸಂಸ್ಥೆಗಳು ಈ ಬಗ್ಗೆ ವಿಸ್ತೃತವಾದ ಸಂಶೋಧನ ನಡೆಸಲು ಶಕ್ತವಾಗಿವೆ. ಸದ್ಯಕ್ಕೆ ಹಾಸನದಲ್ಲಿ ನಡೆದ ಹೃದಯಾಘಾತಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತಜ್ಞರ ತಂಡದೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬುದನ್ನ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಹೃದಯಾಘಾತಗಳು ಹೆಚ್ಚಾಗಲು, ಬದಲಾದ ಜೀವನಶೈಲ, ಆಹಾರ, ಅಸಾಂಕ್ರಾಮಿಕ ರೋಗಗಳು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಹೆಚ್ಚಿನ ಅಂಕಿ ಅಂಶಗಳನ್ನ ಕಲೆ ಹಾಕಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಕರಣಗಳ ಅಂಕಿ ಅಂಶಗಳು ಮಾತ್ರ ಇದೆ. ಖಾಸಗಿ ಆಸ್ಪತ್ರೆಗಳಿಂದಲೂ ನಮಗೆ ಅಂಕಿ ಅಂಶಗಳ ಬೇಕಾಗುತ್ತದೆ.  ಹೃದಯಾಘಾತವನ್ನು ಅಧಿಸೂಚಿತ ರೋಗ ಎಂದು ಪರಿಗಣಿಸಿದಾಗ ಮಾತ್ರ ಖಾಸಗಿ ಆಸ್ಪತ್ರೆಗಳಿಂದಲೂ ಅಂಕಿ ಅಂಶಗಳು ದೊರೆಯುತ್ತವೆ. ಆದರೆ, ಈ ಬಗ್ಗೆ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಸನದ ಪ್ರಕರಣಗಳ ವಿಚಾರದಲ್ಲಿ ತಜ್ಞರ ತಂಡದ ವರದಿ ಆಧರಿಸಿ ನೋಟಿಫೈ ಮಾಡುವ ಅಗತ್ಯವಿದೆಯೇ, ಇಲ್ಲವೇ ಎಂಬ ಬಗ್ಗೆ ಚರ್ಚಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Related Articles

Comments (0)

Leave a Comment