ಸರಣಿ ಹೃದಯಾಘಾತ ಕಾರಣ ಪತ್ತೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ
- by Suddi Team
- July 1, 2025
- 201 Views

ಬೆಂಗಳೂರು: ಹಾಸನ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, 10 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದೆ.
ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸರಣಿ ಸಾವುಗಳಿಗೆ ನಿಖರ ಕಾರಣ ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗೆ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್ ವ್ಯಾಕ್ಸಿನ್ ಕಾರಣವಿರಬಹುದು?:
ರಾಜ್ಯದಲ್ಲಿ ಎಳೆಯ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ. ಬದುಕಿ ಬಾಳಬೇಕಾದ ಚಿಕ್ಕಮಕ್ಕಳು, ಯುವಜನರು, ಅಮಾಯಕರ ಜೀವಗಳ ಬೆಲೆ, ಅವರ ಕುಟುಂಬಸ್ಥರ ಕಾಳಜಿ ನಮಗೂ ಇದೆ. ಇಂತಹ ವಿಚಾರಗಳನ್ನು ಕೂಡ ತಮ್ಮ ರಾಜಕೀಯ ಸಾಧನೆಗೆ ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರ ನಡೆಯನ್ನು ನಾನು ಖಂಡಿಸುತ್ತೇನೆ. ಆತುರಾತುರದಲ್ಲಿ ಕರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು. ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ ಎಂದು ವಾಗ್ದಾಳಿ ನಡನೆಸಿದರು.
ಹಾಸನ ಜಿಲ್ಲೆಯೂ ಸೇರಿ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆಮಾಡಿ, ತಡೆಯುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ ಮತ್ತು ಗೃಹ ಆರೋಗ್ಯದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆ ಕೊಟ್ಟು, ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಡಾ. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ವರದಿ ಆಧರಿಸಿ, ಅಗತ್ಯ ಕ್ರಮಗಳನ್ನು ಕೂಡ ಕೈಗೊಳ್ಳಲಾಗುವುದು ಎಂದರು.
ಜನರ ಆರೋಗ್ಯ ರಕ್ಷಣೆಗಾಗಿ ಒಂದು ಸರ್ಕಾರವಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದು, ಸಾರ್ವಜನಿಕರು ಎದೆನೋವು, ಉಸಿರಾಟದ ತೊಂದರೆ ಕಂಡುಬಂದರೆ ಅಲಕ್ಷ್ಯ ತೋರದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)