ಧಾರವಾಡ:ಶೀತ, ಕೆಮ್ಮು, ನೆಗಡಿ, ಕಫ, ಶ್ವಾಸಕೋಶದ ತೊಂದರೆ, ದಮ್ಮು ಮುಂತಾದ ಸಮಸ್ಯೆಗಳ ನಿವಾರಣೆಗಾಗಿ ಬಾಳೆಹಣ್ಣಿನಲ್ಲಿ ಆಯುರ್ವೇದದ ಗಿಡಮೂಲಿಕೆಗಳನ್ನು ಸೇರಿಸಿ ಸಿದ್ಧಗೊಳಿಸಿದ್ದ ದಿವ್ಯೌಷಧಿಯನ್ನು 511 ಜನರಿಗೆ ಉಚಿತವಾಗಿ ವಿತರಿಸಲಾಯಿತು.
ನಗರದ ಸಪ್ತಾಪೂರ ಉದಯ ಹಾಸ್ಟೆಲ್ ರಸ್ತೆಯಲ್ಲಿರುವ ಆಯುರ್ವೇದ ಚಿಕಿತ್ಸಾಲಯ ಆಯುರ್ಧಾಮ ಪ್ರಾಂಗಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಆಯುರ್ವೇದ ಚಿಕಿತ್ಸಕ ಡಾ. ದೀಪಕ ಮುಮ್ಮಿಗಟ್ಟಿ 75 ವರ್ಷದ ವೃದ್ಧನಿಗೆ ದಿವ್ಯೌಷಧಿಯುಕ್ತ ಬಾಳೆಹಣ್ಣು ವಿತರಿಸಿ ಈ ಆರೋಗ್ಯ ವರ್ಧನೆ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ ಮಾತನಾಡಿ, ಆಯುರ್ವೇದದ ಮೂಲಗ್ರಂಥಗಳಲ್ಲಿ ವಿವರಿಸಿದಂತೆ ಬಾಳೆಹಣ್ಣಿನೊಳಗೆ ವಿಶೇಷ ಗಿಡಮೂಲಿಕೆಗಳನ್ನು ಸೇರಿಸಿ ಸಂಪ್ರದಾಯಬದ್ಧ ವಿಧಾನದಲ್ಲಿ ತಯಾರಿಸಲಾಗಿರುವ ಈ ದಿವ್ಯೌಷಧಿಯನ್ನು ಪ್ರತೀ ವರ್ಷ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದು ಮೂಗು, ಗಂಟಲು, ಶ್ವಾಸಕೋಶಗಳಿಗೆ ಶಕ್ತಿನಿಡುವ ಗುಣ ಹೊಂದಿದ್ದು, ಶೀತ, ಕೆಮ್ಮು, ಕಫ, ದಮ್ಮು, ಶ್ವಾಸಕೋಶದ ರೋಗಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. 3 ರಿಂದ 75 ವರ್ಷ ವಯಸ್ಸಿನವರೆಲ್ಲರೂ ಸುರಕ್ಷಿತವಾಗಿ ಸೇವಿಸಬಹುದಾಗಿದೆ ಎಂದರು.
ವರ್ಷಕ್ಕೆ ಒಂದೇ ಬಾರಿ ಈ ದಿವ್ಯೌಷಧಿ ಸೇವನೆ ಇರುತ್ತಿದ್ದು, ಕಳೆದ ವರ್ಷ ಇದನ್ನು ಸೇವಿಸಿದವರು ತಾವು ಗುಣಮುಖರಾದ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ತಮ್ಮ ಸೇವೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ. ಈ ಬಾರಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಬೈಲಹೊಂಗಲ, ಎಂ.ಕೆ.ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ, ನರಗುಂದ ಸೇರಿದಂತೆ ಹಲವಾರು ಪ್ರದೇಶಗಳಿಂದ ಜನರು ಆಗಮಿಸಿರುವುದು ನಮ್ಮೊಳಗೆ ಇಂತಹ ಉಚಿತ ಸೇವೆಗಳ ಆಯೋಜನೆಗೆ ಉತ್ಸಾಹ ತುಂಬಿದೆ ಎಂದೂ ಡಾ. ಹಿರೇಮಠ ಹೇಳಿದರು.
ಡಾ. ಪ್ರೇರಣಾ ಮತ್ತು ಡಾ ಗಾಹ್ನವಿ ರೋಗಿಗಳ ತಪಾಸಣೆ ನಡೆಸಿದರು. ಆಯುರ್ಧಾಮ ಆಡಳಿತಾಧಿಕಾರಿ ನೀಲಲೋಚನ, ವೈದ್ಯ ವಿದ್ಯಾರ್ಥಿಳಾದ ಕು. ಸರ್ವೇಶ್, ಕು. ಕಾವ್ಯ, ಕು.ಮೇಘ, ಕು. ದಿಗ್ವಿಜಯ, ಮಾಣಿಕ್, ನಂದನ್, ಪ್ರಾರ್ಥನಾ ಇದ್ದರು.
Related Articles
Thank you for your comment. It is awaiting moderation.


Comments (0)