Live: ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡುವೆ ಮಹತ್ವದ ಒಪ್ಪಂದ ವಿನಿಮಯ
- by Suddi Team
- January 17, 2026
- 9 Views
ಬೆಂಗಳೂರು:ರಾಜ್ಯ ಸರ್ಕಾರವು ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇನ್ನೂ ಹೆಚ್ಚಿನ ಹಾಗೂ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಇಂದು ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸ್ಪೆಷಾಲಿಟಿ ಹಾಗೂ ಬಹು ಅಂಗಾಂಗ ಕಸಿ ಆಸ್ಪತ್ರೆಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಜೊತೆ ಒಪ್ಪಂದ ವಿನಿಮಯ ಮಾಡಿಕೊಳ್ಳುತ್ತಿದೆ.
ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾ ಬಂದಿದ್ದು, ರಾಜ್ಯದ ಎಲ್ಲ ಭಾಗಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ರೋಗಿಗಳಿಗೆ ಉನ್ನತ ಮಟ್ಟದ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಧುನಿಕ ತರಬೇತಿಯನ್ನು ಒದಗಿಸಲಾಗುತ್ತಿದೆ.ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಶ್ ಎನ್. ಎಸ್. ಹಾಗೂ ವೈದ್ಯರ ತಂಡದ ಸಹಕಾರದೊಂದಿಗೆ 2015ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಗ್ಯಾಸ್ಟ್ರೋಎಂಟ್ರಾಲಜಿ ವಿಜ್ಞಾನಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ಲಿವರ್ ಟ್ರಾನ್ಸ್‌ಪ್ಲಾಂಟ್‌ಗೆ ಪರವಾನಗಿ ಪಡೆದು ಲಿವರ್ ಟ್ರಾನ್ಸ್‌ಪ್ಲಾಂಟ್ ಸೇವೆಯನ್ನು ಆರಂಭಿಸಲಾಯಿತು.
2016ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಅತ್ಯುನ್ನತ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ, ಬೆಂಗಳೂರಿನ ಎಸ್.ಡಿ.ಎಸ್.ಟಿ.ಬಿ. ಆವರಣದಲ್ಲಿ 10 ಎಕರೆ ಜಾಗವನ್ನು ಒದಗಿಸಿ ಈ ಸೇವೆಗಳನ್ನು ನೀಡುವ ಉದ್ದೇಶದಿಂದ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸ್ಥಾಪನೆಗೆ ಅನುಮತಿ ನೀಡಿತು. ತುರ್ತು ಅಗತ್ಯತೆಗಾಗಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 112 ಹಾಸಿಗೆಗಳನ್ನೊಳಗೊಂಡ ಸೂಪರ್ ಸ್ಪೆಷಾಲಿಟಿ ಸ್ವಾಯತ್ತ ಸಂಸ್ಥೆಯನ್ನು 2021–22ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಈ ಸಂಸ್ಥೆಯು ರಾಷ್ಟ್ರದಲ್ಲೇ ಸರ್ಕಾರಿ ಸ್ವಾಮ್ಯದ ಪ್ರಥಮ ಸ್ವಾಯತ್ತ ಸೂಪರ್ ಸ್ಪೆಷಾಲಿಟಿ ಸಂಸ್ಥೆಯಾಗಿದೆ.
ಪ್ರಸ್ತುತ ಈ ಸಂಸ್ಥೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ, ಮೆಡಿಕಲ್ ಗ್ಯಾಸ್ಟ್ರೋಎಂಟ್ರಾಲಜಿ, ಎಂಡೋಸ್ಕೋಪಿ, ಕೊಲೋನೋಸ್ಕೋಪಿ, ಲಿವರ್ ಟ್ರಾನ್ಸ್‌ಪ್ಲಾಂಟ್, ಕ್ಯಾನ್ಸರ್ ಚಿಕಿತ್ಸೆ, ಆಸಿಡ್ ಸೇವನೆ ಪ್ರಕರಣಗಳು ಹಾಗೂ ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್‌ಗಳನ್ನು ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೂ. 40 ಲಕ್ಷ ವೆಚ್ಚವಾಗುವ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ರೂ. 1.00 ಲಕ್ಷದ ಮಿತಿಯೊಳಗೆ, ಬಿ.ಪಿ.ಎಲ್. ಒಳಗೊಂಡಂತೆ ಎಲ್ಲಾ ಕಡುಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಹಾಗೂ ಉಚಿತವಾಗಿ (ಜಿ.ಐ. ಕ್ಯಾನ್ಸರ್ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್) ನಡೆಸಲಾಗುತ್ತಿರುವ ಏಕೈಕ ಸಂಸ್ಥೆಯಾಗಿದೆ.
ಸಂಸ್ಥೆಯಲ್ಲಿ ಇದುವರೆಗೆ 2,40,160 ಹೊರರೋಗಿಗಳು, 13,095 ಒಳರೋಗಿಗಳು, 5,733 ಶಸ್ತ್ರಚಿಕಿತ್ಸೆಗಳು, 38,126 ಎಂಡೋಸ್ಕೋಪಿ, ಕೊಲೋನೋಸ್ಕೋಪಿ, ಇಆರ್‌ಸಿಪಿ, ಮಾನೋಮೆಟ್ರಿ ಚಿಕಿತ್ಸೆಗಳು, 30 ಲಿವರ್ ಟ್ರಾನ್ಸ್‌ಪ್ಲಾಂಟ್‌ಗಳು ಹಾಗೂ 3,774 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಸಂಸ್ಥೆಯಲ್ಲಿ ಎಂ.ಸಿಎಚ್ (ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ) – 02, ಎಂ.ಸಿಎಚ್ (ಎಚ್‌ಪಿಬಿ ಸರ್ಜರಿ) – 02 ಮತ್ತು ಡಿಎಂ ಮೆಡಿಕಲ್ ಗ್ಯಾಸ್ಟ್ರೋಎಂಟ್ರಾಲಜಿ – 02 ಸ್ಥಾನಗಳನ್ನು ಮಂಜೂರು ಮಾಡಲಾಗಿದ್ದು, 2024–25ನೇ ಸಾಲಿನಲ್ಲಿ ವೈದ್ಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ.
ಸಂಸ್ಥೆ ಪ್ರಾರಂಭವಾದ ಬಳಿಕ ಕರ್ನಾಟಕದ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಹಾಗೂ ವಿದೇಶಗಳಿಂದಲೂ ರೋಗಿಗಳು ಉನ್ನತ ಚಿಕಿತ್ಸೆ ಮತ್ತು ಲಿವರ್ ಅಂಗಾಂಗ ಕಸಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಕಳೆದ ವರ್ಷ 42 ವಿದೇಶಿ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಆಧುನಿಕ ರೀತಿಯಲ್ಲಿ ನಡೆಸಿದಲ್ಲಿ ಅನೇಕ ರೋಗಿಗಳ ಆರೋಗ್ಯ ಸುಧಾರಣೆಗೊಂಡು ಅವರ ಜೀವನಮಟ್ಟವು ಹೆಚ್ಚುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಅಂಗಾಂಗ ಕಸಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನವೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.
ಈ ಸಂಸ್ಥೆಯ ಸಾಧನೆಗಳನ್ನು ಪರಿಗಣಿಸಿ, ಮಾನವ ಬಹು ಅಂಗಾಂಗ ಕಸಿ (ಲಿವರ್, ಹೃದಯ, ಪ್ಯಾಂಕ್ರಿಯಾಸ್, ಶ್ವಾಸಕೋಶ ಮತ್ತು ಇತರೆ) ಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು, ಸಾವಿರ ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಯ ನಿರ್ಮಾಣ ಮತ್ತು ನಿರ್ವಹಣೆ ಕುರಿತು ಅಜೀಂ ಪ್ರೇಮ್‌ಜಿ ಚಾರಿಟಬಲ್ ಫೌಂಡೇಶನ್ ಜೊತೆ ನಡೆಸಿದ ಮಾತುಕತೆಗಳು ಫಲಪ್ರದವಾಗಿದ್ದು ಇದೀಗ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಿದೆ.
Related Articles
Thank you for your comment. It is awaiting moderation.


Comments (0)