ಖಾಸಗಿ ಹಿಡಿತದಿಂದ 108 ಆಂಬುಲೆನ್ಸ್‌ ಮುಕ್ತ, ರಾಜ್ಯ ಸರ್ಕಾರದಿಂದಲೇ ಆಂಬುಲೆನ್ಸ್‌ ಸೇವೆ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ 108 ಆಂಬುಲೆನ್ಸ್‌ಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳ ಹಿಡಿತದಿಂದ ತಪ್ಪಿಸಿ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶೇಷಾದ್ರಿಪುರದಲ್ಲಿರುವ ಶಾಸಕರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವರು, 108 ಆಂಬುಲೆನ್ಸ್‌ಗಳನ್ನು ಈವರೆಗೆ ಖಾಸಗಿ ಏಜೆನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆದ್ದರಿಂದ, ಇನ್ನು ಮುಂದೆ ರಾಜ್ಯ ಸರ್ಕಾರವೇ 108 ಆಂಬುಲೆನ್ಸ್‌ಗಳ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಆಂಬುಲೆನ್ಸ್‌ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜೆನ್ಸಿಗಳಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜೆನ್ಸಿಗೆ ಹಣ ಪಾವತಿಯಾದರೂ, ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. ಸರ್ಕಾರ ಹಲವು ಬಾರಿ ಮದ್ಯಪ್ರವೇಶಿಸಿ ಆಂಬುಲೆನ್ಸ್ ಚಾಲಕರ ಸಮಸ್ಯೆ ಬಗೆಹರಿಸಬೇಕಾಗಿತ್ತು.‌ ಸರ್ಕಾರವೇ ನಿರ್ವಹಣೆ ಮಾಡುವುದರಿಂದ ಇನ್ನು ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

108 ಆಂಬುಲೆನ್ಸ್‌ಗಳ ಮಾಲಿಕತ್ವ ಸರ್ಕಾರದ ಬಳಿ ಇದೆ. ಅವುಗಳಿಗೆ ಡಿಸೇಲ್, ಪೆಟ್ರೋಲ್ ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿತ್ತು. ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜೆನ್ಸಿಯವರು ನಿರ್ವಹಣೆ  ಮಾಡುತ್ತಿದ್ದರು. ಏಜೆನ್ಸಿಯ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ಹಣ ಉಳಿತಾಯವಾಗಲಿದೆ. ಅಲ್ಲದೇ ವ್ಯವಸ್ಥೆಯಲ್ಲೂ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಾಯೋಗಿಕ ನಿರ್ವಹಣೆ ಯಶಸ್ವಿ:

ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 108 ಆಂಬುಲೆನ್ಸ್ ನಿರ್ವಹಣೆಯನ್ನ ಆರೋಗ್ಯ ಇಲಾಖೆ ಯಶಸ್ವಿಯಾಗಿ ನಡೆಸಿದೆ. ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲ ಸ್ಟೇಟ್ ಆಂಬುಲೆನ್ಸ್‌ಗಳನ್ನು ಇಲಾಖೆ ತನ್ನ ನಿರ್ವಹಣೆ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ. ಇದಾದ ಬಳಿಕ 3 ತಿಂಗಳ ಒಳಗಾಗಿ 108 ಆಂಬುಲೆನ್ಸ್‌ಗಳನ್ನು ಆರೋಗ್ಯ ಇಲಾಖೆ ತನ್ನ ಕಮಾಂಡ್ ಕಂಟ್ರೋಲ್ ಸೆಂಟರ್ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಿದೆ. ಬೆಂಗಳೂರಿನಲ್ಲಿ ಒಂದು ಕಮಾಂಡ್ ಸೆಂಟರ್ ಹಾಗೂ ಪ್ರತಿ ಜಿಲ್ಲೆಗಳಲ್ಲೂ ಪ್ರತ್ಯೇಕ ಕಮಾಂಡ್ ಸೆಂಟರ್ ಗಳನ್ನ ರಚಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Related Articles

Comments (0)

Leave a Comment