ಮಹಾಭಾರತದ ಕಥಾನಕಗಳಿಗೆ ಹೊಸ ರೂಪ: ಡಿಸೆಂಬರ್ 18 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಕಿಂಟ್ಸುಗಿ ಪ್ರದರ್ಶನ
- by Suddi Team
- December 15, 2025
- 11 Views
ಬೆಂಗಳೂರು: ಕಲಾರಸಿಕರಿಗೆ ರಸದೌತಣ ಬಡಿಸಲು ಪರಮ್ ಫೌಂಡೇಶನ್ ಸಜ್ಜಾಗಿದೆ. ಇದೇ ಡಿಸೆಂಬರ್ 18ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ 6.30ಕ್ಕೆ ಅಂತಾರಾಷ್ಟ್ರೀಯ ನೃತ್ಯ ಪ್ರದರ್ಶನ ಕಿಂಟ್ಸುಗಿ ನಡೆಯಲಿದೆ.
ʻʻಕಿಂಟ್ಸುಗಿ” (Kintsugi) ಜಪಾನಿನ ಒಂದು ವಿಶೇಷ ಕಲೆಯಾಗಿದ್ದು, ಬಿರುಕುಗೊಂಡ ಪಿಂಗಾಣಿಗೆ ಬಂಗಾರದ ಬೆಸುಗೆ ಹಾಕಿ ಆ ಮೂಲಕ ನ್ಯೂನತೆ ಬದಲು ಸೌಂದರ್ಯದ ಭಾಗವಾಗಿ ಕಾಣುವಂತೆ ಮಾಡಲಾಗುತ್ತದೆ. ಅಂದರೆ ಒಡೆದ ಪಿಂಗಾಣಿಗೆ ಚಿನ್ನದ ಪುಡಿಯ ಮಿಶ್ರಣದಿಂದ ಕೂಡಿಸಿ ಚೆಂದ ಗಾಣಿಸುವ ಕಲೆಗೆ ‘ಕಿಂಟ್ಸುಗಿ’ ಎಂದು ಕರೆಯಲಾಗುತ್ತದೆ. ಹೀಗೆ ಮಿಶ್ರಣ ಮಾಡುವುದರಿಂದ ಆ ಪಿಂಗಾಣಿಯು ಸುಂದರವಾಗಿ ಕಾಣುವುದಲ್ಲದೆ, ಅದು ಮತ್ತಷ್ಟು ಮೌಲ್ಯವರ್ಧಿತವಾಗಿ ಕಾಣಿಸುತ್ತದೆ. ಜೊತೆಗೆ ಇನ್ನಷ್ಟು ಬಲಶಾಲಿಯೂ ಆಗುತ್ತದೆ ಎಂಬ ನಂಬಿಕೆಯನ್ನು ಜಪಾನ್‌ನಲ್ಲಿ ಹೊಂದಲಾಗಿದೆ. ಇದರ ಮೂಲ ಆಶಯವನ್ನು ಇಟ್ಟುಕೊಂಡು ನೃತ್ಯದ ರೂಪ ಪಡೆದಿರುವುದೇ ಈ ‘ಕಿಂಟ್ಸುಗಿ’.
ಇಲ್ಲಿ ನೃತ್ಯದ ಮೂಲಕ ಒಡೆದ ಮನಸುಗಳನ್ನು ಬೆಸೆಯುವ ಕಾರ್ಯವನ್ನು ಮಾಡಲಾಗುತ್ತದೆ ಎಂಬ ಆಶಯವನ್ನೇ ಈ ‘ಕಿಂಟ್ಸುಗಿ’ ಡಾನ್ಸ್ ಹೊಂದಿದೆ. ಈ ಕಿಂಟ್ಸುಗಿ ತತ್ವವನ್ನು ಬಳಸಿಕೊಂಡು ಪರಮ್ ಫೌಂಡೇಶನ್ ಇದೀಗ ಬೆಂಗಳೂರಿಗರ ಮನ ಸೆಳೆಯಲು ವಿಶೇಷ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಸಂಪ್ರದಾಯ ಡ್ಯಾನ್ಸ್ ಕ್ರಿಯೇಷನ್ಸ್ ಸಂಸ್ಥೆಯ ಈ ವಿಶಿಷ್ಟ ಕೃತಿಯು ಜೀವನದಲ್ಲಿ ಕಂಡ ನೋವು ಮತ್ತು ಹೊಸ ಸ್ಫೂರ್ತಿಯೊಂದಿಗೆ ಪುಟಿದೇಳುವ ಭಾವನೆಗಳನ್ನು ಧೀಶಕ್ತಿಯೊಂದಿಗೆ ಹಾಗೂ ಅಂತಃಸತ್ವದ ಪ್ರಬಲ ಅಭಿವ್ಯಕ್ತಿಯಾಗಿ ಈ ‘ಕಿಂಟ್ಸುಗಿ’ ಪರಿವರ್ತಿಸಲಿದೆ.
ಮಹಾಭಾರತದ ಒಡೆದ ಸಂಬಂಧಗಳಿಗಿಲ್ಲಿ ಮೆರುಗು!
ಇಂದು ವಿಶ್ವದಲ್ಲಿ ಅನೇಕ ಕಡೆ ಸಂಘರ್ಷಗಳು, ವಿಭಜನೆಯಂತಹ ಕೂಗುಗಳು ಕೇಳಿಬರುತ್ತಲೇ ಇವೆ. ಇದರ ಮಧ್ಯೆಯೇ ‘ಕಿಂಟ್ಸುಗಿ’ಯು ಮಹಾಭಾರತದ ಸಾರ್ವಕಾಲಿಕ ಕಥಾನಕಗಳನ್ನು ಪುನರ್ ಸೃಷ್ಟಿಸುತ್ತದೆ. ಇದು ಇಂದಿನ ನಮ್ಮ ಬದುಕಿನಲ್ಲೂ ಇರುವ ನಷ್ಟ, ಒಡನಾಟದ ಹುಡುಕಾಟಗಳನ್ನು ಎತ್ತಿ ತೋರುವುದಲ್ಲದೆ, ಆಂತರಿಕ ಹೊಸತನದಂತಹ ಅಂಶಗಳಿಗೆ ಬಲ ನೀಡುತ್ತದೆ. ಈ ಪ್ರದರ್ಶನವು ಕಾಲ-ಸಂಸ್ಕೃತಿಗಳ ಎಲ್ಲೆ ಮೀರಿ ಮಾನವನ ಚೈತನ್ಯವು ಹೇಗೆ ಹೊಸ ರೂಪವನ್ನು ತಳೆಯುತ್ತದೆ? ತನ್ನನ್ನು ತಾನೇ ಸರಿಪಡಿಸಿಕೊಂಡು ಮತ್ತೊಮ್ಮೆ ಸಂಪೂರ್ಣತೆಯನ್ನು ಕಂಡುಕೊಳ್ಳುತ್ತದೆ ಎಂಬುದರ ಪ್ರತೀಕವಾಗಿ ಈ ರೂಪಕ ನಿಲ್ಲುತ್ತದೆ.
ಕುಂತಿ ಮತ್ತು ಕರ್ಣ, ದುಶ್ಯಲಾ ಮತ್ತು ಗಾಂಧಾರಿ, ದ್ರೋಣ ಮತ್ತು ಏಕಲವ್ಯರಂತಹ ಮಹಾಭಾರತದ ಒಡೆದ ಸಂಬಂಧಗಳ ಕುರಿತು ನೀವು ಎಂದಾದರೂ ಅಚ್ಚರಿ ಪಟ್ಟಿದ್ದೀರಾ? ಹಾಗಾದರೆ ಅವುಗಳನ್ನು ಮರು ಬೆಸೆದರೆ ಹೇಗೆ? ಎಂಬ ಕಲ್ಪನೆಗಳಿಗೆಲ್ಲ ಉತ್ತರ ಕಂಡುಕೊಳ್ಳಬೇಕೆಂದರೆ, ಇಂಥ ಕಥೆಗಳನ್ನು ಸ್ವತಃ ಅನುಭವಿಸಲು ‘ಕಿಂಟ್ಸುಗಿ’ ಪ್ರದರ್ಶನದಲ್ಲಿ ಭಾಗವಹಿಸಲೇಬೇಕು.
ಸಂಗೀತ ಮತ್ತು ನೃತ್ಯದಲ್ಲಿ ಯಾರೆಲ್ಲ ಇದ್ದಾರೆ?:
ಈ ಪ್ರದರ್ಶನಕ್ಕೆ ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಹಾಗೂ ಖ್ಯಾತ ಸಂಗೀತ ಸಂಯೋಜಕ ಪ್ರವೀಣ್ ಡಿ ರಾವ್ ಮತ್ತು ಬಿ. ಸಿ. ಮಂಜುನಾಥ್ ಅವರ ವಿಶೇಷ ಸಂಗೀತ ಸಂಯೋಜನೆ ಇದೆ. ಅತ್ರಿ ನುಂಡಿ, ರಚನಾ ಜೋಶಿ, ಪುರಾವೈ ವ್ಯಾಸ್, ಹರಿಕೃಷ್ಣ ಎಸ್ ನಾಯರ್, ತನ್ವೀರ್ ಆಲಂ ಮತ್ತು ಅರುಣ್ ಶ್ರೀಕುಮಾರ್ ಸೇರಿದಂತೆ ಪ್ರಮುಖ ಕಲಾವಿದರು ನೃತ್ಯ ಸಂಯೋಜನೆಗೆ ಜೀವ ತುಂಬಲಿದ್ದಾರೆ. ಬುಕ್ ಮೈ ಶೋ ಮೂಲಕ ನಿಮ್ಮ ಆಸನಗಳನ್ನು ಕಾಯ್ದಿರಿಸಿಕೊಂಡು, ಈ ಅದ್ಭುತ ಕಲಾ ಅನುಭವಕ್ಕೆ ಸಾಕ್ಷಿಯಾಗಬಹುದು.
ಈ ಕುರಿತು ಮಾತನಾಡಿದ ಕಲಾತ್ಮಕ ನಿರ್ದೇಶಕಿ ಸುಮಾ ಸುರೇಶ್, ಜಪಾನಿನ ಚಿನ್ನದ ಲೇಪನದ ಕಲೆಯ ಮೂಲಕ ಒಡೆದ ಗುರುತುಗಳನ್ನು ಅಡಗಿಸುವ ಬದಲು, ಅವುಗಳನ್ನು ಗೌರವಿಸಬೇಕಾದ ಕಥೆಗಳೆಂಬ ನಂಬಿಕೆಗೆ ನಾನು ಮತ್ತು ಲತಾ ಪಾದಾ ಒಂದು ಪ್ರಬಲ ರೂಪಕವನ್ನು ಕಂಡುಕೊಂಡೆವು. ಈ ಮನೋಭಾವವು ಕೇವಲ ನೃತ್ಯ ಸಂಯೋಜನೆಗೆ ಮಾತ್ರವಲ್ಲದೆ, ಕೃತಿ, ಸಂಗೀತ, ದೃಶ್ಯ ಮತ್ತು ಅದರ ಭಾವನಾತ್ಮಕ ಸತ್ವಕ್ಕೂ ಆಕಾರ ನೀಡಿದೆ ಎಂದರು.
Related Articles
Thank you for your comment. It is awaiting moderation.


Comments (0)